ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಣಿವೆ ಹಳ್ಳಿಯಿಂದ ದೆಹಲಿಯವರೆಗೆ; ಸೋಲಿಲ್ಲದ ಸರದಾರ ಇ.ತುಕಾರಾಂ

ಸರಳ ವ್ಯಕ್ತಿತ್ವಕ್ಕೆ ಮನಸೋತ ಮತದಾರರು
ರಾಮು ಅರಕೇರಿ
Published 5 ಜೂನ್ 2024, 6:39 IST
Last Updated 5 ಜೂನ್ 2024, 6:39 IST
ಅಕ್ಷರ ಗಾತ್ರ

ಸಂಡೂರು: ಇ.ತುಕಾರಾಂ‌ ಅವರು ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಹಿಂದೆ ಕಣಿವೆಹಳ್ಳಿ ಎಂದೇ ಕರೆಯಲ್ಪಡುತ್ತಿದ್ದ ಇಂದಿನ ಯಶ್ವಂತನಗರ ಗ್ರಾಮದಲ್ಲಿ 1967 ಜುಲೈ 1ರಂದು ಜನಿಸಿದರು.

ಇವರ ತಂದೆ ಇ.ಓಬಣ್ಣ. ಹೆಂಡತಿ ಅನ್ನಪೂರ್ಣ‌ ತುಕಾರಾಂ. ಮಕ್ಕಳಾದ ವಂದನಾ, ಚೈತನ್ಯಾ, ರಘುನಂದನ್ ಒಳಗೊಂಡ ಚೊಕ್ಕ ಕುಟುಂಬ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಕಾಂ ಸ್ನಾತಕೋತ್ತರ ಪದವಿ ಪಡೆದ ಇವರು ನಂತರ ಬೆಂಗಳೂರಿನಲ್ಲಿ ಹಣಕಾಸು ವಿಭಾಗದಲ್ಲಿ ಪಿ.ಜಿ.ಡಿ.ಬಿ ಎ ಪದವಿ ಪಡೆದುಕೊಂಡಿದ್ದಾರೆ. ಒಮ್ಮೆ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದನ್ನು ಹೊರತುಪಡಿಸಿ ತುಕರಾಂ ಇಲ್ಲಿಯವರೆಗೆ ಸೋಲರಿಯದ ಸರದಾರರೇ ಸರಿ.

ತುಕಾರಾಂ ರಾಜಕೀಯ ಯಾನ: ತುಕಾರಾಂ ಅವರು 2008ರವರೆಗೆ ಸಂತೋಷ್ ಲಾಡ್ ಒಡೆತನದ ವಿಎಸ್ಎಲ್ ಕಂಪನಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿದ್ದ‌ರು. ಆ ಸಂದರ್ಭದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ‌ ಸಂತೋಷ್‌ ಎಸ್ ಲಾಡ್ ಅವರು ಶಾಸಕರಾಗಿದ್ದರು. ಕ್ಷೇತ್ರ ಎಸ್‌.ಟಿಗೆ ಮೀಸಲುಗೊಂಡಿತು. ಕ್ಷೇತ್ರದ ಮೇಲಿನ ಹಿಡಿತ ಬಿಡಲೊಪ್ಪದ ಲಾಡ್‌, ಎಸ್ಟಿ ಸಮುದಾಯದ, ತಮ್ಮದೇ ಕಂಪನಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇ.ತುಕಾರಾಂ ಅವರನ್ನು ಕರೆ ತಂದು ಚುನಾವಣೆಗೆ ನಿಲ್ಲಿಸಿದ್ದರು. ಅಲ್ಲಿಂದ ಇ. ತುಕಾರಾಂ ಹಿಂದುರುಗಿ ನೋಡಿದ್ದೇ ಇಲ್ಲ.

2008 ರಿಂದ ಆರಂಭಿಸಿ, 2013, 2018 ಹಾಗೂ 2023 ಸೇರಿ ಸತತ ನಾಲ್ಕು ಬಾರಿ ಶಾಸಕರಾಗಿ ಜಯಭೇರಿ ಭಾರಿಸುತ್ತಾ ಬಂದಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕೂಡಾ ಕಡಿಮೆ ಅವಧಿಗೆ ಅಧಿಕಾರ ಕಂಡಿದ್ದಾರೆ. ಇದೀಗ ಬಳ್ಳಾರಿ ಲೋಕ ಸಭಾ ಕ್ಷೇತ್ರಕ್ಕೆ ಎದುರಾಳಿ ಬಿಜೆಪಿಯ ಶ್ರೀರಾಮುಲು ಅವರೆದುರು ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸುವ ಮೂಲಕ‌ ರಾಜಕೀಯದಲ್ಲಿ ಸೋಲಿಲ್ಲದ ಸರದಾರರಾಗಿದ್ದಾರೆ.

ಸರಳ ವ್ಯಕ್ತಿ: ಇ.ತುಕರಾಂ ಇಂದು ಲೋಕಸಭೆಗೆ ಆಯ್ಕೆಯಾಗಿ‌ ದೆಹಲಿಯತ್ತ ಹೊರಟಿದ್ದರೂ, ನಾಲ್ಕು ಬಾರಿ ಶಾಸಕರಾಗಿ ಆಡಳಿತ ನಡೆಸಿದ್ದರೂ ಅವರು ಪಕ್ಕಾ ಹಳ್ಳಿ ಸೊಗಡಿನ ವ್ಯಕ್ತಿ. ಹಳ್ಳಿಯಿಂದ ಬಂದ ಇವರು ಯಾವುದೇ ಆಡಂಬರವಿಲ್ಲದೆ ದೇಸಿ ಪದ್ಧತಿಗಳನ್ನು ಇಷ್ಟಪಡುತ್ತಾರೆ. ಮನೆಯಲ್ಲಿ ಅಡುಗೆಯನ್ನು ಇಂದಿಗೂ ಸೌದೆ ಉರಿಸಿ ಬೆಂಕಿಯ ಮೇಲೆ‌ ತಯಾರಿಸಿದರೆ ಇಷ್ಟಪಟ್ಟು ತಿನ್ನುತ್ತಾರೆ. ರೊಟ್ಟಿ, ನವಣೆ, ಸೊಪ್ಪು, ಕಾಳುಗಳು, ಹಾಲು, ಮೊಸರು ಹಳ್ಳಿ ಸೊಗಡಿನ ಊಟವನ್ನು ಹೆಚ್ಚು ಬಯಸುತ್ತಾರೆ. ಮನೆಯಲ್ಲೇ ದೇಸಿ ಹಸುಗಳನ್ನು ಸಾಕಿಕೊಂಡಿರುವ ಇವರು, ಇಂದಿಗೂ ದೇಸಿ ಹಸುವಿನ ಹಾಲಿಗೆ ಪ್ರಾಶಸ್ತ್ಯ ಕೊಡುತ್ತಾರೆ. ರೈತರಿಗೂ ಬೇಸಾಯದಲ್ಲಿ ಅಕ್ಕಡಿಗಳನ್ನು ಹಾಕಿ ತೊಗರಿ, ಹೆಸರು, ಉದ್ದು, ಅಲಸಂದೆ, ಹುಚ್ಚೆಳ್ಳು ಬೆಳೆಯಲು ಸಲಹೆ ನೀಡುತ್ತಾರೆ. ಬೇಸಾಯ ಹಿನ್ನೆಲೆಯೂ ಇರುವುದರಿಂದ ಈಗಲೇ ನೇಗಿಲು ಹೂಡಿ ಬೇಸಾಯ ಮಾಡಬಲ್ಲೆ ಎಂದು ಅಲ್ಲಲ್ಲಿ ಹಾಸ್ಯ ಚಟಾಕಿ ಹಾರಿಸುವ ಹಾಸ್ಯ ಪ್ರಜ್ಞೆಯ ವ್ಯಕ್ತಿತ್ವ. ಮನೆಯಲ್ಲಿ ಒತ್ತಡ ನಿಭಾಯಿಸಲು ಕೆಲ ಕಾಲ ಸಾಕಿದ ನಾಯಿ ಮರಿಗಳೊಂದಿಗೆ ಸಮಯ ಕಳೆಯುವುದು, ಬೆಳಗಿನ ಕಾಲ್ನಡಿಗೆ, ಪುಸ್ತಕ ಓದುವುದು ಇವರ ಹವ್ಯಾಸಗಳು.

ಸಂಡೂರಿಗೆ ಉಪಚುನಾವಣೆ: ಯಾರಿಗೆ ಟಿಕೆಟ್?

ತುಕಾರಾಂ ಅವರು ಸಂಸದರಾದ ನಂತರ ಅವರಿಂದ ತೆರವಾಗುವ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ‌ ಚುನಾವಣೆ ನಡೆದರೆ ಕಾಂಗ್ರೆಸ್‌ನಿಂದ ಸ್ಪರ್ಧಿ ಯಾರಾಗ್ತಾರೆ ಎಂಬ ಚರ್ಚೆ ಕ್ಷೇತ್ರದಲ್ಲಿ ಬಿರುಸಿನಿಂದ ಸಾಗಿದೆ.

ಸಂಡೂರು ಕ್ಷೇತ್ರ ಕಲಘಟಗಿ ಶಾಸಕ ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರ ಹಿಡಿತದಲ್ಲಿದ್ದು ,ಅವರು ಸೂಚಿಸುವ ವ್ಯಕ್ತಿಯೇ ಕಾಂಗ್ರೆಸ್ ನಿಂದ ಅಭ್ಯರ್ಥಿ ಆಗುತ್ತಾರೆ ಎಂಬುದು ಇಲ್ಲಿನ ವಾಡಿಕೆ. ಈಗಾಗಲೇ ಕೆಲವರು ಸಂತೋಷ್ ಲಾಡ್ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದೇ ಹೇಳಲಾಗುತ್ತಿದೆ. ಸ್ವತಃ ಇ.ತುಕಾರಾಂ ಅವರ ಕುಟುಂಬದಿಂದಲೇ ಪತ್ನಿ ಅನ್ನಪೂರ್ಣಾ ತುಕಾರಾಂ‌ ಹಾಗೂ ಪುತ್ರಿ ಚೈತನ್ಯಾ ತುಕಾರಾಂ ಅವರ ಹೆಸರುಗಳೂ ಕೇಳಿ ಬರುತ್ತಿವೆ. ಕಾಂಗ್ರೆಸ್‌ನ ಕೆಲ ನಿಷ್ಠಾವಂತ ಕಾರ್ಯಕರ್ತರು ಸಂತೋಷ್ ಲಾಡ್ ಅವರೇ ತಮ್ಮನ್ನು‌ ಗುರುತಿಸಲಿ ಎಂದೂ ಕಾದು ಕುಳಿತಿದ್ದಾರೆ.

ಬಿಜೆಪಿಯಿಂದ ಕಳೆದ ವಿಧಾನಸಭಾ ಚುನಾವಣೆಯ ಸಮೀಪ‌ ಸ್ಪರ್ಧಿ ಶಿಲ್ಪಾ ರಾಘವೇಂದ್ರ ಅಥವಾ ಕೆಆರ್‌ಪಿಪಿ ಪಕ್ಷದಿಂದ ಸ್ಪರ್ಧಿಸಿ ಪರಾಜಿತರಾಗಿರುವ ಕೆ.ಎಸ್ ದಿವಾಕರ್ ಅವರಿಗೆ ಟಿಕೆಟ್ ಸಿಗಬಹುದು ಎಂಬ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸರ್ವೆ ನಡೆಸಿ ಹಿಂದೆ ಸರಿದಿದ್ದ ಶ್ರೀರಾಮುಲು ಅವರಿಗೂ ಆಸೆ ಚಿಗುರಿದರೆ ಅಚ್ಚರಿಯಿಲ್ಲ.

ಜನಾರ್ಧನ ರೆಡ್ಡಿ ಈಗ ಬಿಜೆಪಿ ಪಕ್ಷದಲ್ಲಿದ್ದು, ರೆಡ್ಡಿಯವರ ಆಪ್ತ ಕೆ.ಎಸ್ ದಿವಾಕರ್ ಅವರಿಗೆ ಬಿಜೆಪಿ ಮಣೆ ಹಾಕಬಹುದು ಎಂಬ ಮಾತುಗಳು ಕೂಡಾ ಕೇಳಿಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT