ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ನೀರಿಗಾಗಿ ಬಿಕ್ಕಳಿಸುತ್ತಿದೆ ಹರಗಿನಡೋಣಿ

ಒಣಗಿದ ಕೊಳವೆಬಾವಿಗಳು, ಕುಡಿಯುವ ನೀರಿನ ಸಮಸ್ಯೆಗೆ ಸಿಗದ ಶಾಶ್ವತ ಪರಿಹಾರ
ಹರಿಶಂಕರ್‌ ಆರ್‌.
Published 16 ಏಪ್ರಿಲ್ 2024, 4:54 IST
Last Updated 16 ಏಪ್ರಿಲ್ 2024, 4:54 IST
ಅಕ್ಷರ ಗಾತ್ರ

ಬಳ್ಳಾರಿ: ಬಳ್ಳಾರಿ ಗ್ರಾಮೀಣ ಭಾಗದ ಹರಗಿನಡೋಣಿಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಎಂಬುದು ಮರೀಚಿಕೆಯಾಗಿಯೇ ಉಳಿದಿದ್ದು, ಗುಟುಕು ನೀರಿಗೂ ಜನ ಪರದಾಡುವಂತಾಗಿದೆ. 

ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಹರಗಿನಡೋಣಿಯ ಗ್ರಾಮಸ್ಥರು ಈಗಾಗಲೇ ಸಾಕಷ್ಟು ಹೋರಾಟಗಳನ್ನು ನಡೆಸಿದ್ದಾರೆ, ಮತದಾನ ಬಹಿಷ್ಕಾರ ಮಾಡಿದ್ದಾರೆ. ಆದರೆ, ಪರಿಹಾರ ಮಾತ್ರ ಸಿಕ್ಕಿಲ್ಲ. 

ಜಿಲ್ಲಾ ಕೇಂದ್ರದಿಂದ ಕೇವಲ 14 ಕಿ.ಮೀ ದೂರವಿರುವ ಗ್ರಾಮದಲ್ಲಿ ಕೊಳವೆ ಬಾವಿ ಕೊರೆದರೆ ನೀರು ಸಿಗುವುದಿಲ್ಲ. ಸಿಕ್ಕರೂ ಅದು ಫ್ಲೋರೈಡ್‌ಯುಕ್ತ ಸವಳು ನೀರಾಗಿರುತ್ತದೆ. ಹೀಗಾಗಿ ಗ್ರಾಮದಲ್ಲಿ ಕೆರೆ ನಿರ್ಮಾಣ ಮಾಡುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದೆ. ಶಾಶ್ವತ ಪರಿಹಾರ ಕಲ್ಪಿಸುವ ವರೆಗೆ ಈ ಗ್ರಾಮಕ್ಕೆ ಬಳ್ಳಾರಿಯ ಅಲ್ಲಿಪುರ ಕೆರೆಯ ಬಳಿ ಕೊಳವೆಬಾವಿ ಕೊರೆಸಿ, ನೀರು ಪೂರೈಕೆ ಮಾಡಲು ನಿರ್ಧರಿಸಲಾಯಿತು. ಇದಕ್ಕಾಗಿ ಏಳು ಕೊಳವೆಬಾವಿಗಳನ್ನು ಕೊರೆಯಲಾಯಿತಾದರೂ, ನೀರು ಸಿಕ್ಕಿದ್ದು ಮಾತ್ರ ಎರಡರಲ್ಲಿ. ಅಲ್ಲಿಪುರದಿಂದ ಹರಗಿನಡೋಣಿಗೆ 9 ಕಿ.ಮೀ ಪೈಪ್‌ಲೈನ್‌ ಹಾಕಿ, ಎರಡು ಕೊಳವೆಬಾವಿಗಳಿಂದ ಗ್ರಾಮದ ಎರಡು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರು ಪೂರೈಸಲಾಗುತ್ತಿತ್ತು. ಆದರೆ, ಈ ಬೇಸಿಗೆಗೆ ಒಂದು ಬೋರ್‌ ಒಣಗಿಹೋಗಿದ್ದು, ಸದ್ಯ ಒಂದೇ ಒಂದು ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಉಳಿದಿರುವ ಒಂದು ಕೊಳವೆಬಾವಿ ಯಾವಾಗ ಕೈಕೊಡುತ್ತದೆಯೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. 

ನೀರಿನ ಘಟಕ ಬಂದ್‌: ಗ್ರಾಮದಲ್ಲಿ ಒಂದು ಸಾವಿರ ಮನೆಗಳಿವೆ.  2800 ವೋಟುಗಳಿವೆ. ಒಟ್ಟಾರೆ 3500-4000ರಷ್ಟು ಜನಸಂಖ್ಯೆ ಇರಬಹುದು ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಜನಸಂಖ್ಯೆಯ ಗ್ರಾಮಕ್ಕೆ ಇರುವುದು ಎರಡೇ ಶುದ್ಧ ಕುಡಿಯುವ ನೀರಿನ ಘಟಕಗಳು. ಅದರಲ್ಲಿ ಊರ ಒಳಗಿನ ಒಂದು ಘಟಕ ಬಂದ್‌ ಆಗಿ ಅದಾಗಲೇ 8 ದಿನಗಳಾಗಿದ್ದು, ಬಾಗಿಲಿಗೆ ಬೀಗ ಜಡಿಯಲಾಗಿದೆ.  ಊರ ಮುಂದಿನ ಇನ್ನೊಂದು ಘಟಕ ಕಾರ್ಯನಿರ್ವಹಿಸುತ್ತಿದೆಯಾದರೂ, ಅದೂ ಈಗಲೋ ಆಗಲೋ ಎಂಬಂತಾ ಪರಿಸ್ಥಿತಿಯಲ್ಲಿದೆ. ವಿದ್ಯುತ್‌ ಇಲ್ಲದೇ ಹೋದರೆ ನೀರಿನ ಘಟಕಗಳೂ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಜನ ವಿದ್ಯುತ್‌ ಬಂದ ಕೂಡಲೇ ನೀರಿಗಾಗಿ ಘಟಕಗಳ ಬಳಿಗೆ ಓಡೋಡಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಇದಕ್ಕಾಗಿ ಕೆಲಸ ಕಾರ್ಯವನ್ನೂ ಬಿಟ್ಟು ಕಾಯಬೇಕು ಎಂಬುದು ಗ್ರಾಮಸ್ಥರಾದ ತಾಯಮ್ಮ ಅವರ ಆರೋಪ.   

ಗ್ರಾಮದ ಬಹುತೇಕ ಜನ ಕಾರ್ಮಿಕರು. ಸನಿಹದ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಾರೆ. ಇನ್ನು ಕೆಲವರು ಆಟೋ, ಲಾರಿ ಚಾಲಕರಾದ್ದಾರೆ. ಗ್ರಾಮದಲ್ಲಿ ಬಡತನ ಹಾಸು ಹೊದ್ದಿದೆ. ಆದರೆ, ಕುಡಿಯುವ ನೀರಿಗೆ ಇಲ್ಲಿನ ಜನ ನಿತ್ಯ ₹50 ಖರ್ಚು ಮಾಡಬೇಕಾದ ಪರಿಸ್ಥಿತಿ. ಒಂದು ಕ್ಯಾನ್‌ಗೆ ₹5 ಖರ್ಚು ನೀಡಬೇಕು. ನಾಲ್ಕು ಜನ ಇರುವ ಒಂದು ಮನೆಗೆ ನಿತ್ಯ ಎರಡರಿಂದ ಮೂರು ಕ್ಯಾನ್‌ ನೀರು ಬೇಕಾಗುತ್ತದೆ. ಜತೆಗೆ ಬಳಕೆ ನೀರಿಗೂ ಹಣ ಕೊಡಬೇಕಾದ ಪರಿಸ್ಥಿತಿ ಇದೆ ಎಂದು ಗ್ರಾಮದ ಬಸವರಾಜು ಹೇಳುತ್ತಾರೆ. 

ಗ್ರಾಮದಿಂದ ಬಳ್ಳಾರಿಗೆ ಕೆಲಸಕ್ಕೆ ಬರುವವರು ನಿತ್ಯ ಅಲ್ಲಿಂದ ಎರಡೆರಡು ಕ್ಯಾನ್‌ ನೀರನ್ನು ಬಸ್‌ನಲ್ಲಿ, ವಾಹನಗಳಲ್ಲಿ ಕೊಂಡೊಯ್ಯುತ್ತಾರೆ. ಇನ್ನು ದಿನಬಳಕೆಗಾಗಿ ಗ್ರಾಮಕ್ಕೆ ಟ್ಯಾಂಕ‌ರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಈ ನೀರು ಸವಳಾಗಿದ್ದು, ಕುಡಿಯಲು ಮತ್ತು ಅಡುಗೆಗೆ ಬಳಸಲು ಯೋಗ್ಯವಲ್ಲ ಎಂದು ಜನ ಹೇಳುತ್ತಾರೆ.

ಟ್ಯಾಂಕರ್‌ ಮೂಲಕ ಪೂರೈಸಲಾಗುವ ನೀರನ್ನು ಬಳಸಿ ಅನ್ನ ಮಾಡಲು ಆಗುವುದಿಲ್ಲ. ಬೇಳೆಗಳು ಬೇಯುವುದಿಲ್ಲ. ಹೀಗಾಗಿ ಅಡುಗೆಗೂ ಕುಡಿಯುವ ನೀರನ್ನೇ ಬಳಸಬೇಕು. ಆದರೆ, ₹5 ಕೊಟ್ಟು ಕ್ಯಾನ್‌ ನೀರು ತರುವುದು ವೆಚ್ಚದಾಯಕವಾಗುತ್ತಿದೆ ಎನ್ನುತ್ತಾರೆ ಜನ. 

ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ ಎನ್ನುತ್ತಾರೆ ಅಲ್ಲಿನ ಗ್ರಾಮಸ್ಥರು 

ಅಳಿದುಳಿದ ನೀರೇ ಗತಿ: ಊರಿನ ಕೆರೆ ಕಟ್ಟೆಗಳೆಲ್ಲವೂ ಬರಿದಾಗಿವೆ. ಅಳಿದುಳಿದ ನೀರು ಪಾಚಿಗಟ್ಟಿದ್ದು ಜಾನುವಾರುಗಳು, ಪ್ರಾಣಿಪಕ್ಷಿಗಳು ಇದೇ ನೀರನ್ನೇ ಕುಡಿಯಬೇಕಾದ ಪರಿಸ್ಥಿತಿ ಇದೆ. ನೀರಿಗಾಗಿ ಹರಗಿನಡೋಣಿ ಜನರದ್ದು ಅರಣ್ಯರೋಧನವಾಗಿದ್ದರೆ, ಜಾನುವಾರುಗಳದ್ದಂತೂ ಮೂಕವೇದನೆ ಎಂಬಂತಾಗಿದೆ. 

ಟ್ಯಾಂಕರ್‌ ನೀರಿಗೆ ಜಗಳ: ‘ನಮ್ಮೂರಲ್ಲಿ ಕುಡಿಯುವ ನೀರಿಲ್ಲ. ಪ್ರತಿ ದಿನ ಹೊರಗಿನಿಂದ ಬರುವ ಟ್ಯಾಂಕರ್‌ಗಾಗಿ ಕಾಯಬೇಕು. ಟ್ಯಾಂಕರ್‌ ಬರುತ್ತಿದ್ದಂತೆ ಜನ ಕೊಡಗಳನ್ನು ಹಿಡಿದು ಮುಗಿಬೀಳುತ್ತಾರೆ. ಒಬ್ಬರ ಮಧ್ಯೆ ಮತ್ತೊಬ್ಬರು ತೂರುವುದರಿಂದ ನೂಕಾಟ–ತಳ್ಳಾಟ ಶುರುವಾಗುತ್ತದೆ. ಜಗಳ ಆರಂಭವಾಗುತ್ತದೆ. ಗಲಾಟೆಯಲ್ಲಿ ಮಂಗಳಸೂತ್ರ, ಸರಗಳು ಕಿತ್ತುಹೋಗಿವೆ. ಕೆಲವೊಮ್ಮೆ ಸರಗಳನ್ನು ಕಿತ್ತುಕೊಂಡೇ ಹೋಗಿದ್ದಾರೆ‘ ಎನ್ನುತ್ತಾರೆ ಗ್ರಾಮಸ್ಥೆ ಲಕ್ಷ್ಮೀ. 

ಹೋರಾಟಕ್ಕೆ ಹೋಗಿ ಕಾಲು ಕಳೆದುಕೊಂಡವರು 

ಹರಗಿನಡೋಣಿ ಗ್ರಾಮದ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದಲೂ ಇಲ್ಲಿ ನೀರಿಗೆ ತತ್ವಾರವಿದೆ. ಈ ಬಗ್ಗೆ ಮನವಿಗಳು ಸಲ್ಲಿಕೆಯಾಗಿವೆ ಹೋರಾಟಗಳಾಗಿವೆ ಮತದಾನ ಬಹಿಷ್ಕಾರಗಳಾಗಿವೆ. ಈಗ್ಗೆ 6 ವರ್ಷಗಳ ಹಿಂದೆ ನೀರು ನೀಡುವಂತೆ ಒತ್ತಾಯಿಸಿ ಗ್ರಾಮಸ್ಥರೆಲ್ಲರೂ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆಗೆ ತೆರಳಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಬರುತ್ತಿದ್ದ ವೇಳೆ ಆದ ಅಪಘಾತದಲ್ಲಿ ಗ್ರಾಮದ ಶಶಿಕುಮಾರ್‌ ಮತ್ತು ರವಿಗೌಡ ಎಂಬುವವರು ಕಾಲು ಕಳೆದುಕೊಂಡಿದ್ದರು. ಇಬ್ಬರೂ ಈಗ ಕೃತಕ ಕಾಲುಗಳಲ್ಲಿ ಜೀವನ ನಡೆಸುತ್ತಿದ್ಧಾರೆ.

ಯಾರು ಏನಂದರು?

ನೀರಿನ ಹೋರಾಟದಲ್ಲಿ ನನ್ನ ಮಗ ಶಶಿಕುಮಾರ ತನ್ನ ಕಾಲನ್ನು ಶಾಶ್ವತವಾಗಿ ಕಳೆದುಕೊಂಡ. ಆದರೆ ಗ್ರಾಮದ ನೀರಿನ ಸಮಸ್ಯೆಗೆ ಮಾತ್ರ ಶಾಶ್ವತ ಪರಿಹಾರ ಸಿಗಲಿಲ್ಲ. ಈ ಎರಡೂ ನೋವು ನನ್ನನ್ನು ತೀವ್ರವಾಗಿ ಬಾಧಿಸುತ್ತಿದೆ - ತಾಯಮ್ಮ ಗ್ರಾಮಸ್ಥೆ 

ನೀರಿನ ಘಟಕ ಬಂದ್‌ ಆಗಿ 8 ದಿನಗಳಾಗಿವೆ. ಇದುವರೆಗೆ ಅದನ್ನು ಸರಿಪಡಿಸಿಲ್ಲ. ಕಾರ್ಖಾನೆಯೊಂದಕ್ಕೆ ಹಳ್ಳಿಯ ಕೆರೆ ಪಕ್ಕದಲ್ಲೆ ಕೊಳವೆ ಹೋಗಿದೆ. ಅದರಲ್ಲಿ ನೀರು ಹಾಯಿಸಿದರೆ ಕೆರೆಗೆ ನೀರು ಸಿಗುತ್ತದೆ. ಅಧಿಕಾರಿಗಳು ಇತ್ತ ಗಮನಹರಿಸಬೇಕು - ಬಸವರಾಜು ಗ್ರಾಮಸ್ಥರು 

ಹರಗಿನಡೋಣಿಗೆ ಅಲ್ಲಿಪುರ ಕೆರೆ ಬಳಿ ಕೊಳವೆಬಾವಿ ಕೊರೆಸಿ ನೀರು ಪೂರೈಸಲಾಗುತ್ತಿದೆ. ಅಲ್ಲಿ ನೀರಿನ ಸಮಸ್ಯೆ ಬಗ್ಗೆ ಸದ್ಯ ಗಮನಕ್ಕೆ ಬಂದಿದೆ. ಕೂಡಲೇ ಕ್ರಮ ಕೈಗೊಳ್ಳುತ್ತೇವೆ - ಮಡಗಿನ ಬಸಪ್ಪ ತಾಲೂಕು ಪಂಚಾಯಿತಿ ಇಒ 

ಗ್ರಾಮದಲ್ಲಿ ಕುಡಿಯು ನೀರಿನ ಘಟಕ ಕೆಟ್ಟುಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಕೂಡಲೇ ಸರಿಪಡಿಸಲು ಸೂಚಿಸಲಾಗಿದೆ - ವಾಗೀಶ್‌ ಮುಖ್ಯಯೋಜನಾಧಿಕಾರಿ ಜಿಲ್ಲಾ ಪಂಚಾಯಿತಿ

ನೀರನ ಹೋರಾಟದಲ್ಲಿ ಕಾಲು ಕಳೆದುಕೊಂಡಿರುವ ರವಿಗೌಡ 
ನೀರನ ಹೋರಾಟದಲ್ಲಿ ಕಾಲು ಕಳೆದುಕೊಂಡಿರುವ ರವಿಗೌಡ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT