ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮುದಾಯ ಆರೋಗ್ಯಾಧಿಕಾರಿಗಳ ಅನಿರ್ದಿಷ್ಟ ಮುಷ್ಕರ ಫೆ. 15 ರಿಂದ

Published 13 ಫೆಬ್ರುವರಿ 2024, 14:16 IST
Last Updated 13 ಫೆಬ್ರುವರಿ 2024, 14:16 IST
ಅಕ್ಷರ ಗಾತ್ರ

ಹೂವಿನಹಡಗಲಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಮುದಾಯ ಆರೋಗ್ಯಾಧಿಕಾರಿಗಳು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫೆ. 15 ರಿಂದ ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದು ಸಮುದಾಯ ಆರೋಗ್ಯ ಎನ್ಎಚ್ಎಂ ಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಮಧು ತಿಳಿಸಿದರು.

ಕೇಂದ್ರ, ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಆಯುಷ್ಮಾನ್ ಭಾರತ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದೇವೆ. ಗ್ರಾಮೀಣ ಮಟ್ಟದಲ್ಲಿ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ನಂತಹ ರೋಗಗಳ ಪರೀಕ್ಷೆ ಹಾಗೂ ನಿಯಂತ್ರಣ, ಗರ್ಭಿಣಿ ಬಾಣಂತಿಯರ ಆರೈಕೆ, ಇತರೆ ಆರೋಗ್ಯ ಸೇವೆಗಳನ್ನು ನೀಡುವ ಸಮುದಾಯ ಆರೋಗ್ಯಾಧಿಕಾರಿಗಳಿಗೆ ಸರ್ಕಾರ ಕನಿಷ್ಟ ವೇತನ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ದೂರಿದರು.

ಸಮುದಾಯ ಆರೋಗ್ಯಾಧಿಕಾರಿಗಳಿಗೆ ಕಳೆದ 4 ತಿಂಗಳಿಂದ ವೇತನ, 10 ತಿಂಗಳಿಂದ ವಿಶೇಷ ಭತ್ಯೆ ನೀಡಿಲ್ಲ. 3 ವರ್ಷಗಳಿಂದ ಕೇಂದ್ರಗಳ ನಿರ್ವಹಣೆ ಹಣವನ್ನೂ ನೀಡಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ನೀಡಲು ತೊಂದರೆಯಾಗಿದೆ ಎಂದು ಹೇಳಿದರು.

ಗುತ್ತಿಗೆ ಪದ್ದತಿ ರದ್ದುಪಡಿಸಿ, 6 ವರ್ಷ ಸೇವೆ ಪೂರೈಸಿದವರ ಸೇವೆ ಕಾಯಂಗೊಳಿಸಬೇಕು. ಗುತ್ತಿಗೆ ನೌಕರರ ವೇತನವನ್ನು ನಿಯಮಾನುಸಾರ ಹೆಚ್ಚಿಸುವುದು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಫೆ. 15 ರಂದು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. 16 ರಂದು ತುಮಕೂರು ಸಿದ್ದಗಂಗಾ ಮಠದಿಂದ ವಿಧಾನಸೌಧ ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಸಿದ್ದಗಂಗಾ ಶ್ರೀಗಳು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬೇಡಿಕೆ ಈಡೇರಿಸುವವರೆಗೆ ಮುಷ್ಕರ ಮುಂದುವರಿಯಲಿದೆ ಎಂದು ತಿಳಿಸಿದರು.

ಸಂಘದ ಖಜಾಂಚಿ ಎಚ್.ಮಲ್ಲೇಶ, ಸಹ ಸಂಘಟನಾ ಕಾರ್ಯದರ್ಶಿ ಎಸ್.ದುರ್ಗ್ಯಾನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT