ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಪ್ಲಿ: ತಾಲ್ಲೂಕು ರಚನೆಯಾಗಿ ಏಳು ವರ್ಷ; ಕಚೇರಿಗಳಿಲ್ಲದೆ ಸಾರ್ವಜನಿಕರ ಪರದಾಟ

Published : 19 ಸೆಪ್ಟೆಂಬರ್ 2024, 15:42 IST
Last Updated : 19 ಸೆಪ್ಟೆಂಬರ್ 2024, 15:42 IST
ಫಾಲೋ ಮಾಡಿ
Comments

ಕಂಪ್ಲಿ: ತಾಲ್ಲೂಕು ಅಸ್ತಿತ್ವಕ್ಕೆ ಬಂದು ಏಳು ವರ್ಷ ಗತಿಸಿದರೂ ವಿವಿಧ ಕಚೇರಿಗಳಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಕಂಪ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ(ಪಕ್ಷಾತೀತ)ದ ಪದಾಧಿಕಾರಿಗಳು ಗುರುವಾರ ಶಾಸಕರಿಗೆ ಮನವಿ ಸಲ್ಲಿಸಿದರು.

ಒಕ್ಕೂಟದ ಅಧ್ಯಕ್ಷ ಜಿ.ಜಿ. ಚಂದ್ರಣ್ಣ ಮಾತನಾಡಿ, ‘ಇಂದಿಗೂ ಈ ಭಾಗದ ಜನರು ವಿವಿಧ ಕಚೇರಿ ಕೆಲಸಗಳಿಗೆ ಕುರುಗೋಡು, ಸಿರುಗುಪ್ಪ, ಬಳ್ಳಾರಿಗಳಿಗೆ ಅಲೆದಾಡುತ್ತಿದ್ದಾರೆ. ಅದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸಮಯ, ಹಣ ವೃಥಾ ಖರ್ಚಾಗುತ್ತಿದೆ. ಶಾಸಕರು ಕೂಡಲೇ ಗಮನಹರಿಸಿ ಬಿಇಒ ಕಚೇರಿ, ಬಸ್ ಡಿಪೊ, ಅಗ್ನಿಶಾಮಕ ಠಾಣೆ, ಸಿಡಿಪಿಒ, ಪಿಡಬ್ಲ್ಯೂಡಿ ಎಇಇ ಕಚೇರಿ, ಸಮಾಜ ಕಲ್ಯಾಣಾಧಿಕಾರಿ, ಪ್ರಾದೇಶಿಕ ಅರಣ್ಯಾಧಿಕಾರಿ ಸೇರಿದಂತೆ ವಿವಿಧ ಕಚೇರಿಗಳ ಆರಂಭ ಮತ್ತು ತಾಲ್ಲೂಕು ಕ್ರೀಡಾಂಗಣ, ತಾಂತ್ರಿಕ ಮಹಾವಿದ್ಯಾಲಯ, ನ್ಯಾಯಾಲಯ ಸೇರಿ ಅಗತ್ಯ ಕಚೇರಿಗಳನ್ನು ಆರಂಭಕ್ಕೆ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಶಾಸಕ ಜೆ.ಎನ್. ಗಣೇಶ್, ‘ಬಸ್ ಡಿಪೊ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಗ್ನಿ ಶಾಮಕದಳ ಠಾಣೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಬಿಇಒ ಕಚೇರಿ ಸೇರಿ ತಾಲ್ಲೂಕು ಮಟ್ಟದ ಕಚೇರಿಗಳ ಆರಂಭಕ್ಕೆ ಸರ್ಕಾರ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ’ ಎಂದು ಹೇಳಿದರು.

ಪ್ರಮುಖರಾದ ಜಿ.ರಾಮಣ್ಣ, ಬಿ.ಸಿದ್ದಪ್ಪ, ಕೆ.ಎಸ್. ಚಾಂದ್‍ಬಾಷ, ಎ.ಸಿ.ದಾನಪ್ಪ, ಬಿ. ದೇವೇಂದ್ರ, ಬಿ.ಜಾಫರ್, ಕರೇಕಲ್ ಮನೋಹರ, ವೀರಾಂಜನೇಯಲು, ಎಲ್.ಭಗವಾನ್, ಎ. ಹನುಮಂತ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT