ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ | ವಿವಿಧ ಕಾಮಗಾರಿ ಪರಿಶೀಲಿಸಿದ ಸಚಿವ ಜಮೀರ್‌

Published 15 ಆಗಸ್ಟ್ 2024, 15:28 IST
Last Updated 15 ಆಗಸ್ಟ್ 2024, 15:28 IST
ಅಕ್ಷರ ಗಾತ್ರ

ಸಂಡೂರು: ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಗುರುವಾರ ಸಂಸದ ಇ.ತುಕಾರಾಂ ಅವರೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ನೂತನ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಸುಶೀಲಾನಗರದಲ್ಲಿ ನೂತನ‌ ಗ್ರಾಮ ಪಂಚಾಯ್ತಿ ಉದ್ಘಾಟನೆ, ಸೇವಾಲಾಲ್ ಭವನ ಕಟ್ಟಡದ ಭೂಮಿಪೂಜೆ, ₹62 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸರ್ಕಾರಿ ಪ್ರೌಢಶಾಲೆ ಕೊಠಡಿಗಳ ಉದ್ಘಾಟನೆ ನೆರವೇರಿಸಿದರು.

ನಂತರ ಸಂಡೂರಿನ ಕಪ್ಪಲಕುಂಟೆ ರಸ್ತೆಯಲ್ಲಿ ನಿರ್ಮಿಸಿರುವ ಜಿ+2 ವಸತಿ ಸಮುಚ್ಚಯಗಳ ಕಾಮಗಾರಿ ಪರಿಶೀಲನೆ ನಡೆಸಿದರು. ಯೋಜಿತ 2100 ವಸತಿ ಗೃಹಗಳಲ್ಲಿ ಈ ಜಾಗೆಯಲ್ಲಿ 1530 ಮನೆಗಳನ್ನು ನಿರ್ಮಿಸಲಾಗಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ರಾಮಯ್ಯ ಅವರಿಂದ 600ಕ್ಕೂ ಹೆಚ್ಚು ಮನೆಗಳನ್ನು ಫಲಾನುಭವಿಗಳಿಗೆ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ನೌಕರರ ತರಬೇತಿ ಮತ್ತು ಕೌಶಲ್ಯ ಭವನದ ಭೂಮಿಪೂಜೆ ನೆರವೇರಿಸಿದ ನಂತರ ₹25 ಕೋಟಿ ವೆಚ್ಚದಲ್ಲಿ‌ ಇಲ್ಲಿನ ಬಳ್ಳಾರಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ಮಿನಿ ವಿಧಾನಸೌಧ ಕಾಮಗಾರಿ ವೀಕ್ಷಸಿದರು.

ಸಂಸದ ಇ.ತುಕಾರಾಂ ಮಾತನಾಡಿ, ಮಾರ್ಚ್ 2025 ಕ್ಕೆ ಮಿನಿ ವಿಧಾನಸೌಧ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಇಲ್ಲಿನ‌ ಆದರ್ಶ ಕಲ್ಯಾಣ ಮಂಟಪದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ಯೋಜನೆಗಳ ಅನುದಾನದ ಮಂಜೂರಾತಿ ಪತ್ರ ವಿತರಣೆ, ಶಾದಿ ಮಹಲ್ ಅನುದಾನ, ಚರ್ಚ್ ದುರಸ್ತಿ, ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆ, 2024-25 ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಘೋಷಣೆ ಮಾಡಿದರು. ₹30 ಕೋಟಿ ದರೋಜಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ ಮಾಡುವುದಾಗಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 2023-24 ನೇ ಸಾಲಿನಡಿ ಮಂಜೂರಾದ 20 ತ್ರಿಚಕ್ರ ವಾಹನಗಳನ್ನು ಅಂಗವಿಕಲರಿಗೆ ವಿತರಿಸಲಾಯಿತು. ತಾಂತ್ರಿಕ ತೊಂದರೆ ಉಂಟಾಗಿದ್ದ ಗೃಹಲಕ್ಷ್ಮಿ ಯೋಜನೆಯ 7 ಜನ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಿದರು. ಸುಕನ್ಯಾ ಸಮೃದ್ಧಿ ಯೋಜ‌ನೆ ಫಲಾನುಭವಿಗಳಿಗೆ ಪಾಸ್ ಪುಸ್ತಕ ನೀಡಲಾಯಿತು. ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT