ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಪ್ಲಿ | ಮೊಹರಂ: ಧಾರ್ಮಿಕ ಪೂರ್ವ ಸಿದ್ಧತೆಗೆ ಚಾಲನೆ

Published 7 ಜುಲೈ 2024, 15:27 IST
Last Updated 7 ಜುಲೈ 2024, 15:27 IST
ಅಕ್ಷರ ಗಾತ್ರ

ಕಂಪ್ಲಿ: ಭಾವೈಕ್ಯ ಸಂದೇಶ ಸಾರುವ ಮೊಹರಂ ಹಬ್ಬ ಆಚರಣೆಗೆ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಭಾನುವಾರ ರಾತ್ರಿಯಿಂದ ಪೂರ್ವ ಸಿದ್ಧತೆಗೆ ಚಾಲನೆ ದೊರಕಿದೆ.

ಪೀರಲು ದೇವರು (ಪಾಂಜಾ)ಗಳನ್ನು ಪ್ರತಿಷ್ಠಾಪಿಸುವ ಮಸೀದಿಯ ಮುಂದೆ ಅಲಾಯಿ ಕುಣಿಗೆ ಗುದ್ದಲಿ ಪೂಜೆ ನೆರವೇರಿಸಿದ್ದು, ವಿವಿಧ ಧಾರ್ಮಿಕ ಚಟುವಟಿಕೆಗಳು ನಾಲ್ಕೈದು ದಿನದಲ್ಲಿ ಶುರುವಾಗುವ ಮೂಲಕ ಪೀರಲು ದೇವರು ಪ್ರತಿಷ್ಠಾಪನೆ ಅದ್ದೂರಿಯಾಗಿ ನಡೆಯಲಿದೆ.

ಜುಲೈ 16ರಂದು ಕತ್ತಲರಾತ್ರಿ ಆಚರಣೆ ಮತ್ತು ಜುಲೈ 17ರಂದು ಪೀರಲು ದೇವರ ಸವಾರಿ ಕಾರ್ಯಕ್ರಮ ಜರುಗಲಿವೆ.

ತಾಲ್ಲೂಕಿನಲ್ಲಿ ಸುಮಾರು 10 ದಿನಗಳವರೆಗೆ ನಡೆಯುವ ಈ ಹಬ್ಬದ ಆಚರಣೆಯು ಹಿಂದೂ ಮುಸ್ಲಿಂ ಬೇಧವಿಲ್ಲದೆ ಸರ್ವರೂ ಭಾಗವಹಿಸಿ ಸೌಹಾರ್ದ ಮೆರೆಯುವುದು ವಾಡಿಕೆ. ಹರಕೆ ಹೊತ್ತವರು ಹುಲಿ ವೇಷ, ಅಳ್ಳಳ್ಳಿ ಬವ್ವಾ ವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಇನ್ನು ಕೆಲವರು ಅಲಾಯಿ ಕುಣಿಯಲ್ಲಿ ಕೆಂಡ ಹಾಯುವುದರೊಂದಿಗೆ ಹರಕೆ ತೀರಿಸುತ್ತಾರೆ.

ಹಲಗೆ ಮಾರಾಟ: ಹಬ್ಬದಲ್ಲಿ ಅಲಾಯಿ ಹೆಜ್ಜೆ ಕುಣಿತ ಎಲ್ಲೆಡೆ ಗಮನ ಸೆಳೆಯುತ್ತದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆ, ಮಾರೆಮ್ಮ ಗುಡಿ, ನಡುವಲ ಮಸೀದಿ, ಮುದ್ದಾಪುರ ಅಗಸಿ ಬಳಿ ಜನರು ವೈವಿಧ್ಯಮಯ, ಬಣ್ಣದ ಫೈಬರ್ ಹಲಗೆ (ತಪ್ಪಡಿ) ಖರೀದಿಸುತ್ತಿದ್ದಾರೆ.

ಫೈಬರ್ ಶೀಟ್‍ಗಳಲ್ಲಿ ಹುಲಿ, ಚಿರತೆ, ಸಿಂಹ, ಜೋಕರ್ ಚಿತ್ರಗಳನ್ನು ಮುದ್ರಿಸಲಾಗಿದೆ. 20.2 ಸೆಂ.ಮೀ ವ್ಯಾಸದ ತಪ್ಪಡಿಗಳು ₹2,800ರಿಂದ ₹ 3,000ಕ್ಕೆ ಮಾರಾಟವಾಗುತ್ತಿವೆ.

ಹಲಗೆ ಮಾರಾಟಗಾರ ಕೊರವರ ಹುಲುಗಪ್ಪ ಮಾತನಾಡಿ, ‘ಆಂಧ್ರಪ್ರದೇಶದ ಕರ್ನೂಲ್‍ನಿಂದ ಬಣ್ಣದ ಚಿತ್ರವುಳ್ಳ ಫೈಬರ್ ಶೀಟ್ ಖರೀದಿಸಿರುವೆ. ಹಲಗೆ ಸಿದ್ಧತೆಗೆ ವಿಶೇಷ ಕಬ್ಬಿಣದ ಕಟ್ಟು ತಯಾರಿಸಿ ಶೀಟ್ ಬಿಗಿದು ತಯಾರಿಸಲಾಗಿದೆ’ ಎಂದರು.

‘ಈ ಬಾರಿ ಫೈಬರ್ ಹಲಗೆಗಳನ್ನು ವೈವಿಧ್ಯಮಯವಾಗಿ ರೂಪಿಸಿ, ವಿಡಿಯೊ ಮಾಡಿ ಇನ್‌ಸ್ಟಾಗ್ರಾಂ, ವ್ಯಾಟ್ಸ್‌ ಆ್ಯಪ್‍ನಲ್ಲಿ ಮೊಬೈಲ್ ನಂಬರ್ ಸಹಿತ ಹಂಚಿಕೊಂಡಿದ್ದೆ. ಅದರಿಂದ ರಾಯಚೂರು ಜಿಲ್ಲೆ ಮಸ್ಕಿ, ಕೊಪ್ಪಳ ಜಿಲ್ಲೆಯ ಕನಕಗಿರಿ, ಕಾರಟಗಿ, ವಿಜಯನಗರ ಜಿಲ್ಲೆಯ ಗಾದಿಗನೂರು, ಸಂಡೂರು ತಾಲ್ಲೂಕಿನ ದರೋಜಿ, ಕಂಪ್ಲಿ ತಾಲ್ಲೂಕಿನ ಮೆಟ್ರಿ, ದೇವಲಾಪುರ ಇತರೆಡೆಯಿಂದ ಜನರು ಹಲಗೆಗೆ ಬೇಡಿಕೆ ಸಲ್ಲಿಸಿದ್ದರು. ಅವರಿಗೆಲ್ಲ ಈಗಾಗಲೇ ಹಲಗೆ ರವಾನಿಸಿರುವೆ’ ಎಂದು ಸಂತಸ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT