ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಗೋಡು | ದೊಡ್ಡಬಸವೇಶ್ವರ ರಥೋತ್ಸವ: ಸಂಭ್ರಮದ ವಾತಾವರಣ

Published 25 ಮಾರ್ಚ್ 2024, 6:11 IST
Last Updated 25 ಮಾರ್ಚ್ 2024, 6:11 IST
ಅಕ್ಷರ ಗಾತ್ರ

ಕುರುಗೋಡು: ಇಲ್ಲಿನ ಇತಿಹಾಸಿಕ ಪ್ರಸಿದ್ಧ ದೊಡ್ಡಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್ 25ರಂದು ನಡೆಯಲಿದೆ.

ಪ್ರತಿ ವರ್ಷ ಹೋಳಿ ಹುಣ್ಣಿಮೆಯ ದಿನ ರಥೋತ್ಸವ ನಡೆದರೂ ಈ ಭಾಗದ 33 ಹಳ್ಳಿ ಜನರು ಹಬ್ಬ ಆಚರಿಸದೆ ರಥೋತ್ಸವದಲ್ಲಿ ಭಾಗವಹಿಸುವುದು ವಿಶೇಷ.

ದೇವಸ್ಥಾನದ ಅಲಂಕಾರ, ರಥ ನಿರ್ಮಾಣ ಸೇರಿದಂತೆ ದೇವಸ್ಥಾನದಲ್ಲಿ ರಥೋತ್ಸವಕ್ಕೆ ಸಂಬಂಧಿಸಿದ ಕಾರ್ಯಗಳು ಪೂರ್ಣಗೊಂಡಿದ್ದು, ಪಟ್ಟಣ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಪಟ್ಟಣದ ನಾಲ್ಕು ದಿಕ್ಕುಗಳ ಮುಖ್ಯರಸ್ತೆಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ ಆಕರ್ಷಿಸುತ್ತಿದೆ.

ಹಿನ್ನೆಲೆ: ದೇವಸ್ಥಾನ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವ ಹೊಂದಿದೆ. ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಮತ್ತು ದಕ್ಷಿಣ ಭಾರತದಲ್ಲಿ ಎರಡನೇ 14 ಅಡಿ ಎತ್ತರದ ನಂದಿ ವಿಗ್ರಹ ಹೊಂದಿರುವ ಭವ್ಯ ಮತ್ತು ಸುಂದರ ದೇವಾಲಯವಿದು.

ದೇವಸ್ಥಾನದ ಪಶ್ಚಿಮಕ್ಕೆ ಮಹಾದ್ವಾರವಿದ್ದು, ಅದರ ಮೇಲೆ ಐದು ಅಂತಸ್ತಿನ 60 ಅಡಿ ಎತ್ತರದ ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕದ ಸವಿನೆನಪಿಗಾಗಿ ನಿರ್ಮಿಸಿದ ರಾಜಗೋಪುರವಿದೆ. ದೇವಸ್ಥಾನದ ಉತ್ತರದಲ್ಲಿ ಬಾಗಿಲು ಇದ್ದು ಅದರ ಮೇಲೆ 30 ಅಡಿ ಎತ್ತರದ ಗೋಪುರವಿದೆ. 14 ಅಡಿ ಎತ್ತರದ ಬೃಹದಾಕಾರದ ನಂದಿ ವಿಗ್ರಹದಲ್ಲಿ ಕೋಡುಗಳು ಕಿರಿದಾಗಿರುವುದರಿಂದ ‘ಕಿರುಗೋಡು’ ನಂತರ ‘ಕುರುಗೋಡು’ ಎನ್ನುವ ಹೆಸರು ಬಂತು ಎಂಬುದು ಇತಿಹಾಸಕಾರರ ಅಭಿಪ್ರಾಯ.

ಕಲ್ಯಾಣ ಚಾಲುಕ್ಯರ ಅಂತ್ಯ ಕಾಲದಲ್ಲಿ ನಿರ್ಮಾಣ ಆರಂಭಗೊಂಡಿದ್ದ ಈ ದೇವಾಲಯ ಪೂರ್ಣಗೊಂಡಿದ್ದು ವಿಜಯನಗರದ ಅರಸರ ಕಾಲದಲ್ಲಿ. ಈ ದೇವಾಲಯದಿಂದಲೇ ಕುರುಗೋಡು ಪ್ರಸಿದ್ದಿ ಪಡೆದಿದೆ.

ಭಾವೈಕ್ಯದ ರಥೋತ್ಸವ: ಪಟ್ಟಣದಲ್ಲಿ ವಿವಿಧ ಜಾತಿ, ಧರ್ಮಗಳ ಜನರು ವಾಸವಿದ್ದರೂ ದೇವಸ್ಥಾನದ ಕಾರ್ಯ ಮತ್ತು ರಥ ನಿರ್ಮಣದಲ್ಲಿ ಎಲ್ಲ ಜನಾಂಗದವರು ತಮ್ಮ ಕುಲ ವೃತ್ತಿಗೆ ಸಂಬಂಧಿಸಿದ ಸೇವೆ ಸಲ್ಲಿಸಿ ಭಾವೈಕ್ಯ ಮೆರೆಯುತ್ತಾರೆ.

ಕೆರೆಕೆರೆ, ಸೋಮಲಾಪುರ ಮತ್ತು ಮುಷ್ಟಗಟ್ಟೆ ಗ್ರಾಮಗಳ ವಾಲ್ಮೀಕಿ ಸಮಾಜದವರು ಮಂಗಳ ವಾಧ್ಯಗಳೊಂದಿಗೆ ಮೆರವಣಿಗೆಯಲ್ಲಿ ಬಂದು ಕುಂಭ ಸಮರ್ಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ದೊರೆಯುವ ಸಂಪ್ರದಾಯವಿದೆ.

60 ಅಡಿ ಎತ್ತರದ ರಥ ಎಳೆಯುವ ಎಂಟು ದಿನ ಮೊದಲು ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ. ಜನರು ಜಾತ್ರೆಗೆ ತಂಡೋಪ ತಂಡವಾಗಿ ಬರುತ್ತಿದ್ದು, ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಬಳ್ಳಾರಿ ಕಡೆಯಿಂದ ಬರುವ ವಾಹನಗಳಿಗೆ ನೀರಾವರಿ ಇಲಾಖೆ ಎದುರುಗಡೆಯ ಈದ್ಗಾ ಮೈದಾನದ ಬಯಲು ಸ್ಥಳ, ಗೆಣಿಕೆಹಾಳು ಕಡೆಯವರಿಗೆ ಐಒಸಿ ಪೆಟ್ರೋಲ್ ಬಂಕ್, ಮುಷ್ಟಗಟ್ಟೆ ಕಡೆಯವರಿಗೆ ಸಂಗಮೇಶ್ವರ ದೇವಸ್ಥಾನದ ಬಯಲು, ಕಂಪ್ಲಿ ಕಡೆಯಿಂದ ಬರುವವರಿಗೆ ಜಯದೇವ ಗೌಡರ ಮನೆ ಹತ್ತಿರದ ಬಯಲು ಮತ್ತು ಬಾದನಹಟ್ಟಿ ಕಡೆಯಿಂದ ಬರುವವರಿಗೆ ಹೋಟೆಲ್ ಸಾಗರ್ ಪಕ್ಕದ ಸ್ಥಳದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ.

ದೊಡ್ಡಬಸವೇಶ್ವರ ಸ್ವಾಮಿ
ದೊಡ್ಡಬಸವೇಶ್ವರ ಸ್ವಾಮಿ
ರಥೋತ್ಸವದಲ್ಲಿ ಸ್ವತ್ತಿನ ಅಪರಾಧ ನಡೆಯದಂತೆ ನುರಿತ ಸಿಬ್ಬಂದಿಯ ತಂಡ ರಚಿಸಲಾಗಿದೆ. ಜಾತ್ರೆಗಳಲ್ಲಿ ಸರಕಳ್ಳತನ ಮಾಡಿ ಸಿಕ್ಕಿಬಿದ್ದವರ ಭಾವಚಿತ್ರ ಪ್ರಕಟಿಸಿದೆ. ಹೆಚ್ಚು ಜನರು ಸೇರುವ ಆಯಕಟ್ಟಿನ 25 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ
-ವಿಶ್ವನಾಥ ಕೆ. ಹಿರೇಗೌಡರ್ ಸಿಪಿಐ. ಕುರುಗೋಡು
ಜಿಲ್ಲೆಯಲ್ಲಿಯೇ ಅತಿ ದೊಡ್ಡ ರಥೋತ್ಸವ ಪಟ್ಟಣದಲ್ಲಿ ಜರುಗಲಿದೆ. ಸುಗಮ ಸಂಚಾರಕ್ಕೆ ಪಟ್ಟಣದ ನಾಲ್ಕು ದಿಕ್ಕುಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ತೆ ಮಾಡಿದೆ. ಬಂದೋಬಸ್ತ್‍ಗೆ ಹೆಚ್ಚುವರಿ ಸಿಬ್ಬಂದಿಬಳಸಿಕೊಳ್ಳಲಾಗುವುದು
-ಸುಪ್ರಿತ್ ವಿರೂಪಾಕ್ಷಪ್ಪ ಪಿಎಸ್‍ಐ ಕುರುಗೋಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT