ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿಯಲ್ಲಿ ಕಾಂಗ್ರೆಸ್‌ ಗೆಲುವು ಖಚಿತ: ತುಕಾರಾಮ್‌

ನಗರದ ಕನಕದುರ್ಗಮ್ಮ ದೇಗುಲದಲ್ಲಿ ಸಂಭಾವ್ಯ ಅಭ್ಯರ್ಥಿ ಪೂಜೆ : ಪುತ್ರಿ ಚೈತನ್ಯಾ ಭಾಗಿ
Published 29 ಮಾರ್ಚ್ 2024, 14:26 IST
Last Updated 29 ಮಾರ್ಚ್ 2024, 14:26 IST
ಅಕ್ಷರ ಗಾತ್ರ

ಬಳ್ಳಾರಿ: ‘ಬಳ್ಳಾರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿಂದ ನಾನೇ ಸ್ಪರ್ಧಿಸಬೇಕು ಎಂದು ಹೈಕಮಾಂಡ್‌ ಮೌಖಿಕ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಗೆಲವು ನಿಶ್ಚಿತ’ ಎಂದು ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ ಇ. ತುಕಾರಾಂ ಹೇಳಿದ್ದಾರೆ. 

ಬಳ್ಳಾರಿ ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ಶುಕ್ರವಾರ ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಿಲ್ಲೆಯ ಎಲ್ಲ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಇದ್ದೇವೆ. ನಮ್ಮಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಜಿಲ್ಲೆಯ ಜನರ ನಿರೀಕ್ಷೆಯಂತೆಯೇ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ‌‌ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು, ದೇಶದಲ್ಲಿ 150 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸರ್ವೆಗಳೂ ಹೇಳುತ್ತಿವೆ. ಬಿಜೆಪಿ ದುರಾಡಳಿತದಿಂದ ಜನರು ರೋಸಿ ಹೋಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜನರು ಮತದಾನ ಮಾಡಲಿದ್ದಾರೆ’ ಎಂದರು.

‘1999ರಲ್ಲಿ ಸೋನಿಯಾ ಗಾಂಧಿ ಅವರು ಗೆದ್ದಾಗ ಅನುದಾನ ಸಿಕ್ಕಿತ್ತು. ಕೆಪಿಸಿಎಲ್‌ ವಿದ್ಯುತ್‌ ಉತ್ಪಾದನಾ ಕೇಂದ್ರಕ್ಕೆ ₹2500 ಕೋಟಿ ಬಂದಿತು. 2004ರ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಆದರೆ,  ಕಾಂಗ್ರೆಸ್‌ ನುಡಿದಂತೆ ನಡೆಯುತ್ತಿದೆ. ಹೀಗಾಗಿ ಜನರ ಆಶೀರ್ವಾದ ಸಿಗಲಿದೆ‘ ಎಂದರು. 

ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಅವರು, ‘ರೆಡ್ಡಿ ಬಿಜೆಪಿ ಸೇರ್ಪಡೆಯಿಂದ ನಮಗ್ಯಾವ ನಷ್ಟವಿಲ್ಲ. 2008ರಲ್ಲಿ ಜನಾರ್ದನ ರೆಡ್ಡಿ ಬಲವಿದ್ದಾಗ್ಯೂ ನಾನೊಬ್ಬನೇ ಗೆದ್ದಿದ್ದೆ. ಬಳ್ಳಾರಿ ರಿಪಬ್ಲಿಕ್ ಇದ್ದಾಗಲೇ ರೆಡ್ಡಿಯವರನ್ನು ಚುನಾವಣೆಯಲ್ಲಿ ಎದುರಿಸಿದ್ದೇನೆ. ಇದೆಲ್ಲ ನನಗೆ ಹೊಸದಲ್ಲ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ನನಗೆ ವರವಾಗಲಿವೆ. ನಾಡಿನ ಜನರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚು ಸಂಖ್ಯೆಯಲ್ಲಿ ಚುನಾಯಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸ್ಥಾನ ಸಿಗಲಿಲ್ಲ ಎಂಬ ಅಸಮಾಧಾನವಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯ ಸದಾನಂದಗೌಡರು ಕೆಎಂಎಫ್‌ ಅಧ್ಯಕ್ಷ ಸ್ಥಾನ ಬಯಸಿದ್ದರು. ಆದರೆ, ಅದು ಕೈಗೂಡಲಿಲ್ಲ. ನಂತರ ರಾಜ್ಯದ ಮುಖ್ಯಮಂತ್ರಿಯಾದರು. ಯಾವುದನ್ನೂ ನಿರೀಕ್ಷೆ ಮಾಡಬಾರದು. ನಿರೀಕ್ಷೆಯಿಲ್ಲದೆ ಪಕ್ಷದ ಕೆಲಸ ಮಾಡಿದರೆ ಖಂಡಿತ ರಾಜಕೀಯ ಭವಿಷ್ಯ ಸಿಕ್ಕೇ ಸಿಗುತ್ತದೆ. ನನ್ನ ಮಗಳು ಸೌರ್ಪಣಿಕಾ ಸ್ಪರ್ಧೆ ಬದಲು ನಾನು ಸ್ಪರ್ಧಿಸುವಂತೆ ಪಕ್ಷ ಸೂಚನೆ ನೀಡಿದೆ. ಪಕ್ಷದ ಹೇಳಿದಂತೆ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿರುವೆ ಎಂದು ತಿಳಿಸಿದರು. 

ಏಪ್ರಿಲ್‌ 12ಕ್ಕೆ ನಾಮಪತ್ರ 

ಏಪ್ರಿಲ್ 12 ರಂದು ನಾಮಪತ್ರ ಸಲ್ಲಿಸುತ್ತೇನೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಪ್ರಚಾರಕ್ಕೆ ಬರಲಿದ್ದಾರೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಇ. ತುಕಾರಾಮ್‌ ತಿಳಿಸಿದರು. 

ಏಪ್ರಿಲ್‌ 12ಕ್ಕೆ ನಾಮಪತ್ರ 

ಏಪ್ರಿಲ್ 12 ರಂದು ನಾಮಪತ್ರ ಸಲ್ಲಿಸುತ್ತೇನೆ. ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಸಿದ್ಧರಾಮಯ್ಯ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಪ್ರಚಾರಕ್ಕೆ ಬರಲಿದ್ದಾರೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಇ. ತುಕಾರಾಮ್‌ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT