ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ಲೋಕಸಭೆ | ಪ್ರತಿ ಚುನಾವಣೆ ಕಠಿಣ ಸವಾಲು: ಶ್ರೀರಾಮುಲು

Published 2 ಮೇ 2024, 4:28 IST
Last Updated 2 ಮೇ 2024, 4:28 IST
ಅಕ್ಷರ ಗಾತ್ರ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಶತಾಯಗತಾಯ ಲೋಕಸಭಾ ಚುನಾವಣೆ ಗೆಲ್ಲಬೇಕೆಂದು ಪಣತೊಟ್ಟಿದ್ದಾರೆ. ಚುನಾವಣೆ ಪ್ರಚಾರ ಹೇಗೆ ಸಾಗಿದೆ? ಜನರಿಂದ ಸ್ಪಂದನೆ ಇದೆಯೇ ಎಂದು ಪ್ರಶ್ನೆಗಳನ್ನು ಕೇಳಿದರೆ, ಅವರು ಕೊಡುವುದು ಒಂದೇ ಉತ್ತರ: ಚುನಾವಣೆ ಎಂದರೇನೆ ಕಠಿಣ ಸವಾಲು. ಅದರಲ್ಲಿ ಸುಲಭ ಎಂಬ ಮಾತೇ ಇರುವುದಿಲ್ಲ. ಪ್ರಚಾರ ಭರಾಟೆ ಮಧ್ಯೆ ಬಿಡುವು ಮಾಡಿಕೊಂಡು ಅವರು ಪ್ರಜಾವಾಣಿಯೊಂದಿಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಹೀಗಿದೆ  
ಪ್ರ

ಜನರಿಂದ ಸ್ಪಂದನೆ ಹೇಗಿದೆ? 

ಜನರಿಂದ ಉತ್ತಮ ಪ್ರತಿಕ್ರಿಯೆ ಇದೆ. ಬಿಜೆಪಿ 400 ಸ್ಥಾನ ಗೆಲ್ಲಬೇಕು ಎಂಬ ಅಭಿಲಾಷೆ ಅವರಲ್ಲಿದೆ.  ಹತ್ತು ವರ್ಷಗಳಲ್ಲಿ ಮೋದಿ ಒಳ್ಳೆ ಕೆಲಸ ಮಾಡಿದ್ದಾರೆ. ದೇಶದ ಆರ್ಥಿಕ ಪ್ರಗತಿಯನ್ನು 5ನೇ ಸ್ಥಾನಕ್ಕೆ ಏರಿಸಿರುವ ಅವರು ನಂಬರ್‌ ಒನ್‌ ಮಾಡುವತ್ತ ಮುನ್ನಡೆದಿದ್ದಾರೆ. ಜನರಿಗೆ ಮೋದಿ ಮೇಲೆ ನಂಬಿಕೆ ಇದೆ. ಹೀಗಾಗಿ ನಾವೆಲ್ಲರೂ ಗೆಲ್ಲುತ್ತೇವೆ.

ಪ್ರ

35 ವರ್ಷಗಳ ರಾಜಕೀಯ ಅನುಭವ ಹೊಂದಿರುವ ನಿಮಗೆ ಈ ಚುನಾವಣೆ ಹೇಗೆ ಅನ್ನಿಸುತ್ತಿದೆ? 

ಬಾದಾಮಿ, ಮೊಳಕಾಲ್ಮೂರಿನಲ್ಲಿ ನಾನು ಸ್ಪರ್ಧಿಸಿದ್ದೆ. ಅಂದು ಬಿಜೆಪಿಗೆ 104 ಸ್ಥಾನ ಬಂತು. 120 ಸ್ಥಾನ ಬಂದಿದ್ದರೆ ನಾನು ಉಪ ಮುಖ್ಯಮಂತ್ರಿ ಆಗಬೇಕಿತ್ತು. ರಾಜಕಾರಣ ಎಂದರೇನೆ ಕಷ್ಟ. ಅದರಲ್ಲಿ ಸುಲಭ ಎಂಬ ಮಾತೇ ಇಲ್ಲ. ಜನರ ಮನವೊಲಿಸಬೇಕು. ಅವರಿಗೆಿ ಯೋಜನೆಗಳನ್ನು ವಿವರಿಸಬೇಕು. ಚುನಾವಣೆ ಒಂದರ್ಥದಲ್ಲಿ ಕಠಿಣ ಸವಾಲು.

ಪ್ರ

ಈ ಚುನಾವಣೆಯಲ್ಲಿ ನೀವು ‘ಸೆಂಟಿಮೆಂಟ್‌ ಕಾರ್ಡ್‌’ ಬಳಸುತ್ತಿದ್ದೀರಿ ಎಂಬ ಮಾತಿದೆ. ಅದರ ಅಗತ್ಯ ಇದೆಯೇ? 

ನಾನು 1999ರಲ್ಲಿ ರಾಜಕೀಯ ಆರಂಭಿಸಿದೆ. 8 ಚುನಾವಣೆಯಲ್ಲಿ ಸ್ಪರ್ಧಿಸಿರುವೆ. ಎರಡು ಚುನಾವಣೆಯಲ್ಲಿ ಸೋತಿರುವೆ. ಕಳೆದ ಸಲ ವಿಧಾನಸಭೆಯಲ್ಲಿ ಸೋತಿರುವೆ. ಈ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ರಾಜಕೀಯ ಪುನರ್ಜನ್ಮ ನೀಡಲು ಕೋರಿದ್ದೇನೆ. ರಾಮುಲು ಅವರನ್ನು ರಾಜಕೀಯದಲ್ಲಿ ಉಳಿಸಿಕೊಳ್ಳಬೇಕು ಎಂಬುದು ಜನರಿಗೂ ಗೊತ್ತಿದೆ. 

ಪ್ರ

ನೀವು ಗೆದ್ದಾಗ ಯಾರಿಗೂ ಸಿಗುವುದಿಲ್ಲ. ಸೋತಾಗ ಜನರ ಬಳಿ ಬರ್ತಾರೆ ಎಂಬ ಮಾತು ಇದೆಯಲ್ಲ? 

ಈ ಜಿಲ್ಲೆಯಲ್ಲಿ ಹೆಚ್ಚು ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವನಾಗಿದ್ದೆ. ಆದರೆ, ಜಿಲ್ಲೆಯಲ್ಲಿ ಹೆಚ್ಚು ಕೆಲಸ ಮಾಡಲು ಆಗಲಿಲ್ಲ. ಜನಾರ್ದನ ರೆಡ್ಡಿ, ಎಂ.ಪಿ ಪ್ರಕಾಶ್‌, ಆನಂದ್‌ ಸಿಂಗ್‌ ಇಲ್ಲಿ ಕೆಲಸ ಮಾಡಿದ್ದಾರೆ. ಕಳೆದ ಸರ್ಕಾರದಲ್ಲಿ 12 ತಿಂಗಳು ನಾನು ಇಲ್ಲಿ ಉಸ್ತುವಾರಿ ಸಚಿವನಾಗಿದ್ದೆ. ಆಗ ದಾಖಲೆಯ ಕೆಲಸ ಮಾಡಿದ್ದೇನೆ. ನವಲಿ ಸಮಾನಾಂತರ ಜಲಾಶಯಕ್ಕೆ ₹1000 ಕೋಟಿ ಮೀಸಲಿಡುವಂತೆ ಮಾಡಿದ್ದೇನೆ.

ಪ್ರ

ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರಿದ್ದು ಬಿಜೆಪಿಗೆ ಲಾಭವಾಗುವುದೇ? ರೆಡ್ಡಿ ಅನುಪಸ್ಥಿತಿಯನ್ನು ಬಳ್ಳಾರಿಯಲ್ಲಿ ಅವರ ಪತ್ನಿ ಅರುಣಾಲಕ್ಷ್ಮಿ ತುಂಬುತ್ತಿದ್ದಾರೆ ಅನ್ನಿಸುತ್ತಿದೆಯೇ? 

ಜನಾರ್ದನ ರೆಡ್ಡಿ ಸೇರ್ಪಡೆ ಖಂಡಿತ ಅನುಕೂಲವಾಗಲಿದೆ. ಕಳೆದ ವಿದಾನಸಭಾ  ಚುನಾವಣೆಯಲ್ಲಿ ಅರುಣಾ ಲಕ್ಷ್ಮಿ ಕೆಆರ್‌ಪಿಪಿಯಿಂದ ಸ್ಪರ್ಧಿಸಿದ್ದರು. ಹೀಗಾಗಿ ಮತ ವಿಭಜನೆಯಾಯಿತು. ಈ ಬಾರಿ ಪಕ್ಷಕ್ಕೆ ಬಂದಿದ್ದಾರೆ. ಅವರು ಕೆಲಸ ಮಾಡುತ್ತಿದ್ದಾರೆ. 

ಪ್ರ

ನೀವು ಪುನರ್‌ಜನ್ಮ ಅಂತೀರಿ, ಕ್ಷೇತ್ರ ಗೆದ್ದು ಸೋನಿಯಾ ಗಾಂಧಿಗೆ ಉಡುಗೊರೆ ಕೊಡುವುದಾಗಿ  ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಇದರ ಮಧ್ಯೆ ಕ್ಷೇತ್ರದ ಸಮಸ್ಯೆಗಳು ಮರೆಯಾಗುತ್ತಿಲ್ಲವೇ?  

ನಾನು ಕೆಲಸ ಮಾಡಿದ್ದೇನೆ. ಹೊಸಪೇಟೆ, ಚಿತ್ರದುರ್ಗ, ಚಳ್ಳಕೆರೆ ರಸ್ತೆಗಳನ್ನು ಮಾಡಿಸಿದ್ದೇನೆ. ಹೊಸ ಯೋಜನೆಗಳನ್ನು ತಂದಿದ್ದೇನೆ. ಬುಲೆಟ್‌ ರೈಲು ತರಲು ಬಯಸಿರುವೆ. ಜನ 25 ವರ್ಷ ನಮ್ಮನ್ನು ಗೆಲ್ಲಿಸಿದ್ದಾರೆ. ಅಭಿವೃದ್ಧಿ ಮಾಡದೇ ಗೆಲ್ಲಿಸಲು ಸಾಧ್ಯವೇ? ಕೆಲಸ ಮಾಡದ್ದರಿಂದಲೇ ಕಾಂಗ್ರೆಸ್‌ ಅನ್ನು ಜನ ಸೋಲಿಸುತ್ತಿರುವುದು. 

ಪ್ರ

ಬಳ್ಳಾರಿಗೆ ಕಾಡುತ್ತಿರುವ ಸಮಸ್ಯೆಗಳೇನು?

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಿದೆ. ವಾಯು, ಭೂ, ರೈಲು ಸಾರಿಗೆ ವ್ಯವಸ್ಥೆಯನ್ನು ಉತ್ತಮಗೊಳಿಸಬೇಕು. ಜೊತೆಗೆ ಇಲ್ಲಿನ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕು. ಕ್ಷೇತ್ರದಲ್ಲಿನ ಸಮಸ್ಯೆಗಳು ನಿವಾರಣೆ ಆಗಬೇಕಿದೆ.

ಪ್ರ

ಚುನಾವಣೆಗೆ ಇನ್ನೂ ಐದು ದಿನಗಳಿವೆ. ಪ್ರಜ್ವಲ್‌ ರೇವಣ್ಣ ಪ್ರಕರಣ ಬಿಜೆಪಿಗೆ ಭಾರವಾಯಿತು ಎಂಬ ಮಾತಿದೆ? 

ಪ್ರಜ್ವಲ್‌ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿರಲಿ ಅವರಿಗೆ ಶಿಕ್ಷೆಯಾಗಬೇಕು. ನಮ್ಮ ರಾಷ್ಟ್ರೀಯ ನಾಯಕರು ಇದನ್ನೇ ಹೇಳಿದ್ದಾರೆ. ಆ ಹೆಣ್ಣು ಮಕ್ಕಳು ನಮಗೂ ಅಕ್ಕ ತಂಗಿಯರು.

ಪ್ರ

ಕ್ಷೇತ್ರದ ಜನರಿಗೆ ಹೇಳುವಂಥದ್ದು ಏನಾದರೂ ಇದೆಯೇ?

ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿಕೊಡಬೇಕು. ಎರಡು ಬೆಳೆ ತೆಗೆಯಲು ನೀರು ಸಿಗಬೇಕು. ಆಹಾರ ಸಂಸ್ಕರಣ ಘಟಕಗಳು ಆರಂಭವಾಗಬೇಕು. ಇನ್ನೂ ಹತ್ತು ಹಲವು ಕಾರ್ಯಗಳಿವೆ. ಇದನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡಬೇಕು. ಇದಕ್ಕಾಗಿ ಜನ ನಮಗೆ ಆದ್ಯತೆ ನೀಡುವ ವಿಶ್ವಾಸವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT