ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಗುಣಮಟ್ಟದ ಬೀಜ ಬಳಸಿ ಬೆಳೆಸಿದ ಸಸಿ ಮಾರಾಟಮಾಡಿ’

ಮೆಣಸಿನಕಾಯಿ ಬೆಳೆಗಾರರು– ಸಸಿ ನರ್ಸರಿ ಮಾಲೀಕರ ಸಭೆ
Published 19 ಜೂನ್ 2024, 16:05 IST
Last Updated 19 ಜೂನ್ 2024, 16:05 IST
ಅಕ್ಷರ ಗಾತ್ರ

ಕುರುಗೋಡು: ಉತ್ತಮ ಗುಣಮಟ್ಟದ ಮತ್ತು ಪ್ರಮಾಣೀಕರಿಸಿದ ಬೀಜ ಬಳಸಿ ಬೆಳೆಸಿದ ಸಸಿಗಳನ್ನು ಮಾರಾಟಮಾಡಬೇಕು ಎಂದು ತೋಟಗಾರಿಕೆ ಇಲಾಖೆ ಹಿರಿಯ ಉಪ ನಿರ್ದೇಶಕ ಸಂತೋಷ್ ಸಪ್ಪಂಡಿ ನರ್ಸರಿ ಮಾಲೀಕರಿಗೆ ಸೂಚಿಸಿದರು.

ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಮೆಣಸಿನಕಾಯಿ ಬೆಳೆಗಾರರು ಮತ್ತು ಸಸಿ ನರ್ಸರಿ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.

ನರ್ಸರಿಯಲ್ಲಿ ಖರೀದಿಸಿ ನಾಟಿ ಮಾಡಿದ ಮೆಣಸಿನಕಾಯಿ ಬೆಳೆಯಲ್ಲಿ ದೋಷ ಕಂಡುಬಂದರೆ ಯಾರು ಹೊಣೆ ಎನ್ನುವ ಅನುಮಾನ ರೈತರನ್ನು ಕಾಡುತ್ತದೆ. ಸಸಿಗಳನ್ನು ಬೆಳೆಸುವ ನರ್ಸರಿ ಮಾಲೀಕರು ಬೀಜ ಖರೀದಿಸಿದ ಅಂಗಡಿಯಲ್ಲಿ ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಬೇಕು. ಬೀಜದ ಗುಣಮಟ್ಟ ಮತ್ತು ತಯಾರಿಸಿದ ಕಂಪೆನಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿರಬೇಕು ಎಂದು ಸೂಚಿಸಿದರು.

ಕಳೆದ ವರ್ಷ ಮಳೆ ಸಂಪೂರ್ಣ ಕೈಕೊಟ್ಟಿತ್ತು. ಕಾಲುವೆಯ ನೀರಿನ ಕೊರತೆಯೂ ರೈತರನ್ನು ಕಾಡಿತ್ತು. ಪರಿಣಾಮ ಮೆಣಸಿನಕಾಯಿ ಬೆಳೆಗಾರರು ನಷ್ಟ ಅನುಭವಿಸಬೇಕಾಯಿತು. ಕಳೆದ ವರ್ಷ ಬೆಳೆದ ಮೆಣಸಿನಕಾಯಿಗೆ ಉತ್ತಮ ಬೆಲೆ ದೊರೆಯದ ಪರಿಣಾಮ ಬಾಡಿಗೆ ಗೋದಾಮುಗಳನ್ನು ಸಂಗ್ರಹಿ ಉತ್ತಮ ಬೆಲೆಗಾಗಿ ಕೆಲವು ರೈತರು ಕಾಯುತ್ತಿದ್ದಾರೆ. ಕಳೆದ ವರ್ಷ ಎದುರಿಸಿ ನಷ್ಟದ ಆತಂಕ ಮತ್ತು ದುಗುಡದ ಮಧ್ಯೆ ಈವರ್ಷ ಉತ್ತಮ ಮಳೆಯಾಗುತ್ತಿದ್ದು, ಆಶಾಭಾವನೆಯಿಂದ ಮೆಣಸಿನಕಾಯಿ ಬೆಳೆ ಬೆಳೆಯಲು ರೈತರು ಮುಂದಾಗಿದ್ದಾರೆ. ಅವರಿಗೆ ನ್ಯಾಯಯುತ ಬೆಲೆಯಲ್ಲಿ ಸಸಿಗಳನ್ನು ಮಾರಾಟ ಮಾಡಿ ಸಹಕರಿಸಿ ಎಂದು ನರ್ಸರಿ ಮಾಲೀಕರಿಗೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನರ್ಸರಿ ಮಾಲೀಕರು, ಮೊದಲಿನಿಂದಲೂ ರೈತರು ನಮ್ಮ ಮೇಲೆ ನಂಬಿಕೆ ಹೊಂದಿರುವುದರಿಂದ ಗುಣಮಟ್ಟದ ಮತ್ತು ನ್ಯಾಯಯುತ ಬೆಲೆಗೆ ಸಸಿಗಳನ್ನು ಮಾರಾಟ ಮಾಡುತ್ತಿದ್ದೇವೆ. ರೈತರು ಖರೀದಿಸಿ ತಂದುಕೊಟ್ಟ ಬೀಜಗಳನ್ನು ಬೆಳೆಸಿ ಚಿಕ್ಕ ಮಗುವಿನಂತೆ ಹಾರೈಕೆಮಾಡಿ ಕೊಡುತ್ತಿದ್ದೇವೆ. ನಮ್ಮದೂ ಹೆಚ್ಚು ಪರಿಶ್ರಮವಿದೆ. ಒಂದು ಎಕರೆಗೆ ಇಂತಿಷ್ಟು ಸಸಿ ಬೆಳೆಯುತ್ತಾರೆ. ಇಷ್ಟು ಹಣಕ್ಕೆ ಮಾರಾಟ ಮಾಡುತ್ತಾರೆ ಎನ್ನುವುದು ಮಾತ್ರ ಜನರಿಗೆ ಕಾಣುತ್ತಿದೆ. ನಮ್ಮ ಶ್ರಮ ಕಾಣುವಿದಿಲ್ಲ ಎಂದು ಅಳಲು ತೋಡಿಕೊಂಡರು.

ಗುಣಮಟ್ಟದ ಬೀಜ ಖರೀದಿಸಿ ಸಸಿ ಬೆಳೆಸ ಬೇಕು ಮತ್ತು ರೈತರಿಗೆ ಮತ್ತು ನರ್ಸರಿ ಮಾಲೀಕರಿಗೆ ನಷ್ಟವಾಗದ ನ್ಯಾಯಯುತ ಬೆಲೆಯಲ್ಲಿ ಸಸಿಗಳನ್ನು ಮಾರಾಟ ಮಾಡಬೇಕು ಎನ್ನುವ ತೀರ್ಮಾನಕ್ಕೆ ಬರಲಾಯಿತು. ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಮತ್ತು ಸಹಾಯಕ ತೋಟಗಾರಿಗೆ ಅಧಿಕಾರಿ ಕಿರಣ್ ಇದ್ದರು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಸಸಿ ನರ್ಸರಿ ಮಾಲೀಕರು ಮತ್ತು ರೈತರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT