ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೂವಿನಹಡಗಲಿ: ನಿರ್ವಹಣೆ ಇಲ್ಲದ ಸಿಂಗಟಾಲೂರು ಬ್ಯಾರೇಜ್, ಮೂರು ಜಿಲ್ಲೆಗಳಿಗೆ ಆಸರೆ

ಮೂರು ಟಿಎಂಸಿ ಸಂಗ್ರಹ ಸಾಮರ್ಥ್ಯದ ಬ್ಯಾರೇಜ್
Published 13 ಆಗಸ್ಟ್ 2024, 5:21 IST
Last Updated 13 ಆಗಸ್ಟ್ 2024, 5:21 IST
ಅಕ್ಷರ ಗಾತ್ರ

ಹೂವಿನಹಡಗಲಿ: ಈ ಭಾಗದ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ ಚಾಲನೆಗೊಂಡು 12 ವರ್ಷ ಕಳೆದಿದೆ. ಈ ಯೋಜನೆಯ ನಿರ್ವಹಣೆಗೆ ಸರ್ಕಾರ ಒಮ್ಮೆಯೂ ಅನುದಾನ ನೀಡದೇ ಇರುವುದರಿಂದ ಜಖಂಗೊಂಡಿರುವ ಗೇಟುಗಳ ದುಸ್ಥಿತಿಯಲ್ಲೇ ನೀರು ನಿರ್ವಹಣೆ ಮಾಡುವಂತಾಗಿದೆ.

ಬ್ಯಾರೇಜ್‌ನ 28 ಗೇಟುಗಳ ಪೈಕಿ ಮೂರು ಗೇಟುಗಳು ದುರಸ್ತಿಗೀಡಾಗಿವೆ. ತಾತ್ಕಾಲಿಕ ದುರಸ್ತಿ ಬಳಿಕವೂ ಅಪಾರ ನೀರು ಪೋಲಾಗುತ್ತಲೇ ಇರುತ್ತದೆ. ಗೇಟಿನ ರೋಲರ್‌ಗಳು ಜಖಂಗೊಂಡಿವೆ. ರೋಲರ್ ಮೇಲೆತ್ತಿದರೆ ಕೆಳಗೆ ಇಳಿಯುವುದಿಲ್ಲ, ಕೆಳಗಿಳಿದರೆ ಮೇಲೆತ್ತುವುದು ಕಷ್ಟವಾಗಿದೆ. ಒಳ ಹರಿವು ದಿಢೀರ್ ಹೆಚ್ಚಳವಾದಾಗ ಗೇಟುಗಳನ್ನು ತೆರೆಯಲು ಸಿಬ್ಬಂದಿಯ ಕಷ್ಟ ಹೇಳತೀರದಾಗಿದೆ.

ಈ ಯೋಜನೆಯಿಂದ ತುಂಗಭದ್ರಾ ನದಿಯ ಬಲದಂಡೆ ಹೂವಿನಹಡಗಲಿ ತಾಲ್ಲೂಕಿನಲ್ಲಿ 35,791 ಎಕರೆ ಕಾಲುವೆ ನೀರಾವರಿಗೆ ಒಳಪಟ್ಟಿದ್ದರೆ, ಎಡ ದಂಡೆಯ ಗದಗ, ಕೊಪ್ಪಳ ಜಿಲ್ಲೆಯ 1,34,445 ಎಕರೆ ಪ್ರದೇಶ ಸೂಕ್ಷ್ಮ ನೀರಾವರಿಗೆ ಒಳಪಟ್ಟಿದೆ. ಈ ಮಹತ್ವಾಕಾಂಕ್ಷಿ ಯೋಜನೆ ನೀರಾವರಿಗೆ ಸೀಮಿತವಾಗಿರದೇ ಮೂರು ಜಿಲ್ಲೆಗಳ ನಗರ, ಪಟ್ಟಣ, 500ಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರಿಗೆ ಆಸರೆಯಾಗಿದೆ. ಎರಡೂ ಭಾಗದ ನೂರಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಲು, ಮಾಲ್ವಿ ಜಲಾಶಯಕ್ಕೆ ನೀರು ಹರಿಸಲು ಈ ಯೋಜನೆ ಸಹಕಾರಿಯಾಗಿದೆ. ಜಲಶಕ್ತಿ ಬಳಸಿಕೊಂಡು 18 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ ನಿರ್ಲಕ್ಷಿಸಿರುವುದು ಸರಿಯಲ್ಲ ಎಂಬುದು ರೈತರ ಅನಿಸಿಕೆ.

ಇನ್ನು ಕಾಲುವೆಗಳ ಸ್ಥಿತಿ ಹೇಳತೀರದಾಗಿದೆ. ಮುಖ್ಯ ಕಾಲುವೆಯಲ್ಲಿ ನೀರು ಹರಿದರೂ ಉಪ ಕಾಲುವೆಗಳು ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಹೊಲಗಾಲುವೆಗಳು ನಿರ್ಮಾಣ ಆಗದೇ ಇರುವುದರಿಂದ ರೈತರು ಮುಖ್ಯ ಕಾಲುವೆಗೆ ಮೋಟಾರ್ ಅಳವಡಿಸಿಕೊಂಡು ನೀರು ಹರಿಸಿಕೊಳ್ಳುವಂತಾಗಿದೆ. ಬಹುತೇಕ ಕಡೆ ಕಾಲುವೆಗಳು ಕಿತ್ತು ಹೋಗಿವೆ, ಕೆಲವೆಡೆ ಹೂಳು ತುಂಬಿಕೊಂಡು ಮುಚ್ಚಿ ಹೋಗಿವೆ. ಜಾಲಿ ಪೊದೆಗಳು ಬೆಳೆದು ನೀರು ಬಸಿಯಲಾರಂಭಿಸಿವೆ. ತುಂಗಭದ್ರಾ ಜಲಾಶಯದ ಗೇಟು ಮುರಿದು ಅಪಾರ ಜಲಸಂಪನ್ಮೂಲ ಸಮುದ್ರದ ಪಾಲಾಗಿದೆ. ಈ ಯೋಜನೆಯಲ್ಲೂ ಸಂಭವನೀಯ ಅಪಾಯ ಉಂಟಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಬ್ಯಾರೇಜ್ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ರೈತರ ಆಗ್ರಹ.

ಬ್ಯಾರೇಜ್‌ಗೆ ಭದ್ರತೆ ಇಲ್ಲ

₹5 ಸಾವಿರ ಕೋಟಿ ಮೊತ್ತದ ನೀರಾವರಿ ಯೋಜನೆ ಜಾರಿಯಾಗಿದ್ದರೂ ಬ್ಯಾರೇಜ್‌ಗೆ ಸರ್ಕಾರ ಕನಿಷ್ಟ ಭದ್ರತೆಯನ್ನೂ ಒದಗಿಸಿಲ್ಲ. ಬ್ಯಾರೇಜ್ ಮೇಲೆ ಹಾದು ಹೋಗುವವರ ತಪಾಸಣೆ ಮಾಡುವವರಿಲ್ಲ ನಿಗಾ ವಹಿಸುವವರೂ ಇಲ್ಲ. ಸುರಕ್ಷತೆ ದೃಷ್ಟಿಯಿಂದ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಪೊಲೀಸ್ ಆಂತರಿಕ ಭದ್ರತಾ ವಿಭಾಗ ಮೂರು ವರ್ಷಗಳ ಹಿಂದೆಯೇ ಪತ್ರ ಬರೆದಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿಲ್ಲ.

ಸಿಂಗಟಾಲೂರು ಬ್ಯಾರೇಜ್‌ನಲ್ಲಿ ಅವಘಡ ಸಂಭವಿಸುವ ಮುನ್ನ ಸರ್ಕಾರ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಆವರ ಗಮನ ಸೆಳೆಯುವೆ
–ಕೃಷ್ಣನಾಯ್ಕ, ಹೂವಿನಹಡಗಲಿ ಶಾಸಕ
ಗೇಟುಗಳ ದುರಸ್ತಿಯಿಂದ ನೀರು ಪೋಲಾಗುತ್ತಿದೆ. ನೀರಾವರಿ ಕುಡಿಯುವ ನೀರಿಗೆ ಆಸರೆಯಾಗಿರುವ ಬ್ಯಾರೇಜ್ ನಿರ್ವಹಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು
–ಎಂ.ಗಂಗಾಧರ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT