ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೇಟಸ್‌ನಲ್ಲಿ ಅಭ್ಯರ್ಥಿ ಚಿತ್ರ ಹಾಕಿದರೂ ಶಿಕ್ಷಕನ ವಿರುದ್ಧ ಕ್ರಮವಿಲ್ಲ: ಆರೋಪ

Published 6 ಮೇ 2024, 16:14 IST
Last Updated 6 ಮೇ 2024, 16:14 IST
ಅಕ್ಷರ ಗಾತ್ರ

ಬಳ್ಳಾರಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಸರ್ಕಾರಿ ಶಿಕ್ಷಕರೊಬ್ಬರು ರಾಷ್ಟೀಯ ಪಕ್ಷದ ಅಭ್ಯರ್ಥಿಯ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕುರಿತು ದೂರು ನೀಡಿದರೂ, ಕ್ರಮಕೈಗೊಳ್ಳದ ಜಿಲ್ಲಾಡಳಿತ, ಜಿಲ್ಲಾ ಚುನಾವಣಾಧಿಕಾರಿಗಳು ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಸುತ್ತಿಲ್ಲ ಎಂದು ಬಿಎಸ್‌ಪಿ ಪಕ್ಷದ ಬಳ್ಳಾರಿ ಲೋಕಸಭೆ ಕ್ಷೇತ್ರದ ಉಸ್ತುವಾರಿ ಶಕುಂತಲಾ ಆರೋಪಿಸಿದ್ದಾರೆ. 

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಸಂಡೂರಿನ ಸರ್ಕಾರಿ ಶಿಕ್ಷಕ ಇಸ್ಮಾಯಿಲ್ ಎಂಬುವವರು, ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಅವರೊಂದಿಗೆ ಇರುವ ಫೋಟೊವನ್ನು ಏ.2 ರಂದು ವಾಟ್ಸ್ಆಪ್ ಸ್ಟೇಟಸ್ ಹಾಕಿಕೊಂಡು, ಪರೋಕ್ಷವಾಗಿ ಪ್ರಚಾರ ಮಾಡಿದ್ದಾರೆ. ಇಸ್ಮಾಯಿಲ್‌ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಸಂಡೂರು ಬಿಇಒ, ಸ್ವೀಪ್ ಸಮಿತಿ ನೋಡಲ್ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ, ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರು ಆಪಾದಿಸಿದರು.

ಈ ಕುರಿತು ಕೈಗೊಂಡಿರುವ ಕ್ರಮದ ಕುರಿತು ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ, ಯಾವುದೇ ಕ್ರಮಕೈಗೊಳ್ಳದೆ ಇನ್ನಷ್ಟ ಸಾಕ್ಷ್ಯ ಒದಗಿಸಿ ಎಂದು ಹಿಂಬರಹ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಮೂರು ವರ್ಷಕ್ಕಿಂತ ಹೆಚ್ಚು ವರ್ಷ ಒಂದೇ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸಬೇಕು. ಆದರೆ, ಬಳ್ಳಾರಿ ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು 15–20 ವರ್ಷಗಳಿಂದ ಇಲ್ಲೇ ಬಿಡಾರ ಹೂಡಿದ್ದಾರೆ. ಚುನಾವಣೆ ನಿಮಿತ್ತ ಯಾವ್ಯಾವ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದೀರಿ ಎಂಬ ಮಾಹಿತಿ ಕೇಳಿದರೆ, ಅದನ್ನೆಲ್ಲ ಕೊಡಲಾಗಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಆರೋಪಿಸಿದರು. 

ಚುನಾವಣೆ ಪಾರದರ್ಶಕವಾಗಿ ನಡೆಯುವ ಬಗ್ಗೆ ಅನುಮಾನವಿದೆ. ಈ ಕುರಿತು ಭಾರತ ಚುನಾವಣಾ ಆಯೋಗಕ್ಕೂ ಇ-ಮೇಲ್ ಮೂಲಕ ದೂರು ನೀಡಿದ್ದೇನೆ. ಅಲ್ಲಿಯೂ ಯಾವುದೇ ಕ್ರಮಕೈಗೊಳ್ಳದಿದ್ದಲ್ಲಿ ಹೈಕೋರ್ಟ್ ಮೊರೆ ಹೋಗುತ್ತೇನೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT