ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ: ಚುನಾವಣೆ ಬಂದಾಗ ಮಾತ್ರ ಬಸ್ ದರ್ಶನ!

50ಕ್ಕೂ ಹೆಚ್ಚು ಹಳ್ಳಿಗಳಿಗೆ ಬಸ್ ಸೌಲಭ್ಯ ಇಲ್ಲ
ಅಕ್ಷರ ಗಾತ್ರ

ಹರಪನಹಳ್ಳಿ: ‘ಸರ್ಕಾರಿ ಬಸ್ ದರ್ಶನ ಸಿಗುವುದು ಚುನಾವಣೆ ಬಂದಾಗ ಮಾತ್ರ. ನಮ್ಮೂರಿಗೂ ಬಸ್ ಬರುತ್ತೆ, ಅದರಲ್ಲಿ ನಮ್ಮ ಮಕ್ಕಳು ಪಟ್ಟಣಕ್ಕೆ ತೆರಳಿ ಅಭ್ಯಾಸ ಮಾಡಿ ಮರಳುತ್ತಾರೆ ಎಂಬ ಕನಸು ಕನಸಾಗಿಯೇ ಉಳಿದಿದೆ!

ಹರಪನಹಳ್ಳಿ ತಾಲ್ಲೂಕಿನ ಜಿ.ದಾದಾಪುರ ಗ್ರಾಮದ ಮನೆಗಾರ ಪರಶುರಾಮ ಅವರ ನೋವಿನ ಮಾತಿದು. ಇದು ಕೇವಲ ಒಂದು ಊರಿನ ಮಾತಲ್ಲ. ತಾಲ್ಲೂಕಿನ ಸಾಕಷ್ಟು ಗ್ರಾಮಸ್ಥರ ಮಾತು ಇದೆ ಆಗಿದೆ. ಏಕೆಂದರೆ ದೇಶ ಸ್ವತಂತ್ರಗೊಂಡು ಏಳು ದಶಕ ಕಳೆದಿದ್ದರೂ ತಾಲ್ಲೂಕಿನ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಇನ್ನೂ ಸರ್ಕಾರಿ ಸಾರಿಗೆ ಬಸ್ ಸೌಲಭ್ಯವೇ ದೊರೆತಿಲ್ಲ.

ತಾಲ್ಲೂಕಿನಲ್ಲಿ ನಾಲ್ಕು ಹೋಬಳಿಗಳು, 37 ಗ್ರಾಮ ಪಂಚಾಯಿತಿಗಳಿವೆ. 81 ಕಂದಾಯ ಗ್ರಾಮಗಳು ಸೇರಿ ಒಟ್ಟು 236 ಹಳ್ಳಿಗಳಿವೆ. ಕೆಲವು ಹಳ್ಳಿಗಳು ಸಮರ್ಪಕ ರಸ್ತೆ ಇಲ್ಲದೇ ಬಳಲುತ್ತಿದ್ದರೆ, ಇನ್ನೊಂದಡೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಸೌಲಭ್ಯವಿಲ್ಲದೇ ನಿತ್ಯ ನಡೆದು ಮತ್ತೊಂದು ಊರು ತಲುಪಬೇಕಾದ ಸ್ಥಿತಿ ತಾಲ್ಲೂಕಿನ ಗ್ರಾಮಗಳದ್ದಾಗಿದೆ.

ಕುಣೆಮಾದೇಹಳ್ಳಿ, ಹಗರಿ ಗುಡಿಹಳ್ಳಿ, ಹಗರಿ ಚಿರನಹಳ್ಳಿ, ಲಿಂಗದಹಳ್ಳಿ, ಬಸಾಪುರ, ಕುಂಚೂರು ತಾಂಡಾ, ಕಣವಿ, ಕಣವಿ ತಾಂಡಾ, ಬಸವನಾಳು, ಹಂಪಾಪುರ, ಅರೆ ಮಜ್ಜಿಗೆರೆ, ನಿಚ್ಚವನಹಳ್ಳಿ, ಐಗಳ ಬಸಾಪುರ, ತಿಪ್ಪನಾಯಕನಹಳ್ಳಿ, ಪಾವನಪುರ, ಹೊಂಬಳಗಟ್ಟಿ, ಅಡವಿಹಳ್ಳಿ, ಕೋಣನಕಟ್ಟೆ, ಓಬಳಾಪುರ, ಕ್ಯಾರಕಟ್ಟೆ, ಗುಳೇದಹಟ್ಟಿತಾಂಡಾ, ಅರಸಾಪುರ, ದಿದ್ದಗಿ ತಾಂಡಾ, ಕಸವನಹಳ್ಳಿ, ನೆಲಗನಹಳ್ಳಿ, ಯರಬಳ್ಳಿ, ನಾಗತಿಕಟ್ಟೆ, ವ್ಯಾಸನತಾಂಡಾ, ನಂದಿಕಂಬ, ಕವಲಹಳ್ಳಿ, ಹೊಸಹಳ್ಳಿ, ಚೌಡಾಪುರ, ಚನ್ನಾಪುರ ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮಗಳು ಇಲ್ಲಿಯವರೆಗೂ ಸಾರಿಗೆ ಬಸ್ ಭಾಗ್ಯವನ್ನೇ ಕಂಡಿಲ್ಲ.

ಹರಪನಹಳ್ಳಿ ಡಿಪೋದಲ್ಲಿ 65 ಬಸ್ಸುಗಳು ಲಭ್ಯವಿದ್ದು, 65 ಮಾರ್ಗ ಗುರುತಿಸಲಾಗಿದೆ. ತಾಲ್ಲೂಕಿನ 81 ಕಂದಾಯ ಗ್ರಾಮಗಳ ಪೈಕಿ 76 ಕಂದಾಯ ಗ್ರಾಮಗಳಿಗೆ ಇಲಾಖೆಯು ಬಸ್ ಸೌಲಭ್ಯ ಕಲ್ಪಿಸಿದೆ. ಉಳಿದ 5 ಕಂದಾಯ ಗ್ರಾಮಗಳಾದ ಆಲದಹಳ್ಳಿ, ಆನಂದನಹಳ್ಳಿ, ಅರಸನಾಳು, ಬೂದಿಹಾಳ, ಈಶಾಪುರ ಗ್ರಾಮಗಳಿಗೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

*ಇಲಾಖೆಯಿಂದ ತಾಲ್ಲೂಕಿನ 81 ಕಂದಾಯ ಗ್ರಾಮಗಳಲ್ಲಿ 76 ಗ್ರಾಮಕ್ಕೆ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಗ್ರಾಮಸ್ಥರ ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

- ವೆಂಕಟೇಶ್, ವ್ಯವಸ್ಥಾಪಕರು, ಹರಪನಹಳ್ಳಿ ಡಿಪೊ

*ದೇಶ ಸ್ವಾತಂತ್ರ್ಯ ಕಂಡು ಇಷ್ಟು ವರ್ಷಗಳಾದರೂ ತಾಲ್ಲೂಕಿನ ಕೆಲ ಹಳ್ಳಿಗಳು ಬಸ್ ಸಂಪರ್ಕವನ್ನೇ ಹೊಂದಿಲ್ಲ. ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು.

- ಗುಡಿಹಳ್ಳಿ ಹಾಲೇಶ್, ಸಿಪಿಐ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT