ಬುಧವಾರ, ಮಾರ್ಚ್ 29, 2023
23 °C
‘ಪ್ರಜಾವಾಣಿ’ ಸಹಭಾಗಿತ್ವದಲ್ಲಿ ಕಾರಾಗೃಹದ ಕೈದಿಗಳಿಗೆ ಮನಃಪರಿವರ್ತನೆ ಕಾರ್ಯಕ್ರಮ

Prajavani @75: ಜೈಲುವಾಸ ಮನಃಪರಿವರ್ತನೆ ತರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ‘ಯಾವುದೋ ಸಂದರ್ಭದಲ್ಲಿ ನಡೆದ ಘಟನೆಯಿಂದ ಜೈಲು ಸೇರಿದವರು ಜೈಲಿನಲ್ಲಿದ್ದು ನೊಂದುಕೊಳ್ಳಬೇಕಿಲ್ಲ. ಜೈಲುವಾಸ ನಿಮ್ಮಲ್ಲಿ ಮನಃಪರಿವರ್ತನೆ ತಂದು ಹೊಸ ಬೆಳಕಿಗೆ ದಾರಿಯಾಗಬೇಕು’ ಎಂದು ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ ಹೇಳಿದರು.

‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಸಹಭಾಗಿತ್ವದಲ್ಲಿ ಶುಕ್ರವಾರ ಸಂಜೆ ನಗರದ ಉಪಕಾರಾಗೃಹದಲ್ಲಿ ಆಯೋಜಿಸಿದ್ದ ಜೈಲು ಬಂದಿಗಳಿಗೆ ಮನಃಪರಿವರ್ತನೆಯ ಕಾರ್ಯಕ್ರಮ ‘ಕತ್ತಲೆಯಿಂದ ಬೆಳಕಿನೆಡೆಗೆ ಬಾ’ ಉದ್ಘಾಟಿಸಿ ಮಾತನಾಡಿದರು.

ಯಾವುದೋ ಸನ್ನಿವೇಶದಲ್ಲಿ ಮನಸ್ಸು ದುರ್ಬಲ ಮಾಡಿಕೊಂಡು ತಪ್ಪೆಸಗಿ ಜೈಲು ಸೇರಿದ್ದೀರಿ. ಆದರೆ, ಇಲ್ಲಿರುವ ಯಾರೂ ಅನ್ಯಗ್ರಹದಿಂದ ಬಂದವರಲ್ಲ. ನೀವು ಕಪ್ಪು ಅಂಟಿಸಿಕೊಂಡಿದ್ದೀರಿ ಅದರಿಂದ ಹೊರಬರುವುದು ದೊಡ್ಡ ವಿಚಾರವೇನಲ್ಲ. ಬುದ್ಧಿ ಮತ್ತು ಮನಸ್ಸು ಸದಾ ಎಚ್ಚರವಾಗಿಟ್ಟುಕೊಂಡರೆ ತಪ್ಪು ಘಟಿಸಲಾರದು ಎಂದರು.

ಮಹರ್ಷಿ ವಾಲ್ಮೀಕಿ ಅವರು ಆರಂಭದ ದಿನಗಳಲ್ಲಿ ಅನೇಕ ತಪ್ಪುಗಳನ್ನು ಮಾಡಿದ್ದರು. ಅನಂತರ ಅವರು ರಾಮಾಯಣ ಬರೆದು ಜಗದ್ವಿಖ್ಯಾತರಾದರು. ಅವರ ಆರಂಭದ ಜೀವನದಿಂದ ಯಾರೂ ಅವರನ್ನು ನೆನೆಯುವುದಿಲ್ಲ ಬದಲಾಗಿ ಅವರ ಸಾಧನೆಗಳಿಂದ ನೆನೆಯುತ್ತಾರೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಬದಲಾವಣೆಗೆ ಅವಕಾಶಗಳಿವೆ ಎನ್ನುವುದಕ್ಕೆ ಅವರ ಬದುಕೇ ನಿದರ್ಶನ ಎಂದು ಹೇಳಿದರು.

ಕವಿ ನಾಗರಾಜ ಪತ್ತಾರ್‌ ಮಾತನಾಡಿ, ತಪ್ಪುಗಳಾಗುವುದು ಸಹಜ. ಆದರೆ, ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಉತ್ತಮ ಮನುಷ್ಯರಾಗಿ ಬದುಕಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಉಪ ಕಾರಾಗೃಹದ ಸೂಪರಿಟೆಂಡೆಂಟ್‌ ಎಂ.ಎಚ್‌. ಕಲಾದಗಿ ಮಾತನಾಡಿ, ಯಾರೂ ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದಿಲ್ಲ. ಆ ಸಂದರ್ಭದಲ್ಲಿ ಆಗಿರುತ್ತದೆ. ಆದರೆ, ಅದರ ಬಗ್ಗೆ ಒಂದು ಸಲ ಯೋಚಿಸಿ ಒಳ್ಳೆಯವರಾಗಬೇಕು. ಜೈಲಿನಲ್ಲಿ ಅನಕ್ಷರಸ್ಥರಿಗೆ ಅಕ್ಷರ ಜ್ಞಾನ, ಗ್ರಂಥಾಲಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ಅಂಬೆ ಪ್ರಕಾಶನದ ಅಂಜಲಿ ಬೆಳಗಲ್‌, ಕಾರಾಗೃಹದಲ್ಲಿರುವ ಅನೇಕರು ಉತ್ತಮ ಕವನಗಳನ್ನು ಬರೆಯುತ್ತಾರೆ. ಹೀಗೆ ಪ್ರತಿಯೊಬ್ಬರಲ್ಲಿ ಒಂದೊಂದು ಪ್ರತಿಭೆ ಇರುವ ವಿಷಯ ಕೇಳಿ ಬಹಳ ಸಂತೋಷವಾಗಿದೆ. ಓದಿನ ಮೂಲಕ ಅವರ ಬದುಕು ಬದಲಾಗಲಿ ಎಂದು ಆಶಿಸಿದರು.

‘ಪ್ರಜಾವಾಣಿ’ ಜಿಲ್ಲಾ ಹಿರಿಯ ವರದಿಗಾರ ಶಶಿಕಾಂತ ಎಸ್‌. ಶೆಂಬೆಳ್ಳಿ, 1948 ಅಕ್ಟೋಬರ್‌ 15ರಂದು ಆರಂಭಗೊಂಡ ‘ಪ್ರಜಾವಾಣಿ’ ಪತ್ರಿಕೆ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ ಎಂದು ಅದು ನಡೆದು ಬಂದ ದಾರಿ ವಿವರಿಸಿದರು. ಸಂಗೀತ ವಿದ್ವಾಂಸ ನಾಗರಾಜ ಪತ್ತಾರ್‌, ಸಹಾಯಕ ಜೈಲರ್‌ಗಳಾದ ಎಸ್‌.ಎಚ್‌. ಕಾಳಿ, ಎಸ್‌.ಎಸ್‌. ಲಚ್ಚನ್‌,  ಕಾರಾಗೃಹದ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು