ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಣಂತಿ ಸಾವು: ಪ್ರಕರಣ ದಾಖಲು

Published 21 ಏಪ್ರಿಲ್ 2024, 14:49 IST
Last Updated 21 ಏಪ್ರಿಲ್ 2024, 14:49 IST
ಅಕ್ಷರ ಗಾತ್ರ

ಬಳ್ಳಾರಿ: ಸಿಸೇರಿಯನ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿ 45 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಣಂತಿಯೊಬ್ಬರು ಏ. 20ರಂದು ಮೃತಪಟ್ಟಿದ್ದು, ಈ ಸಂಬಂಧ ಬಳ್ಳಾರಿಯ ಮೋಕಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಸಿರುಗುಪ್ಪ ತಾಲೂಕಿನ ಶಾನವಾಸಪುರದ ರಾಜಮ್ಮ (23) ಮೃತರು. ಎರಡನೇ ಹೆರಿಗಾಗಿ ರಾಜಮ್ಮ ಮೋಕಾದ ತಮ್ಮ ತವರು ಮನೆಗೆ ಬಂದಿದ್ದರು. ಮೋಕಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಜಮ್ಮ ಅವರಿಗೆ ಮಾ.7ರಂದು ಸಿಸೇರಿಯನ್‌ ನೆರವೇರಿಸಿ ಹೆರಿಗೆ ಮಾಡಲಾಗಿತ್ತು. ಅವರಿಗೆ ಹೆಣ್ಣು ಮಗು ಜನಿಸಿತ್ತು.

ಅದೇ ದಿನ ರಾಜಮ್ಮಗೆ ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ವೈದ್ಯರು ರಕ್ತ ತರಿಸಿ ಹಾಕಿದ್ದರು. ಆದರೂ ಪರಿಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಮ್ಸ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಅಲ್ಲಿ 18 ದಿನ ಚಿಕಿತ್ಸೆ ನೀಡಲಾಗಿದೆ. ಆದರೂ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮಾ. 25ರಂದು ರಾಜಮ್ಮಳನ್ನು ಬೆಂಗಳೂರಿನ ವಿಕ್ಟೋರಿಯಾಗೆ ಸೇರಿಸಲಾಗಿತ್ತು. ಅಲ್ಲಿನ ಚಿಕಿತ್ಸೆಯೂ ಫಲ ಕಾಣದೇ ರಾಜಮ್ಮ ಏ. 20ರಂದು ಮೃತಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ರಾಜಮ್ಮ ಅವರ ಸೋದರ ವೀರೇಶ್‌ ದೂರು ನೀಡಿದ್ದಾರೆ. ಸೆಕ್ಷನ್‌ 174(3)ರ( ಸಾವಿನ ಬಗ್ಗೆ ಸಂದೇಹ)ಅಡಿಯಲ್ಲಿ ಸದ್ಯ ಎಫ್‌ಐಆರ್‌ ದಾಖಲಿಸಲಾಗಿದೆ.

ಸಿಸೇರಿಯನ್‌ ನಂತರ ರಾಜಮ್ಮ ತೀವ್ರ ಅಸ್ವಸ್ಥಗೊಂಡಿರುವ ಬಗ್ಗೆ ಕುಟುಂಬದವರು ಮಾರ್ಚ್‌ 13ರಂದೇ ಮೋಕಾ ಠಾಣೆಗೆ ದೂರು ನೀಡಿದ್ದರು. ಸದ್ಯ ರಾಜಮ್ಮ ಮೃತಪಟ್ಟ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕುಟುಂಬಸ್ಥರ ಪ್ರತಿಭಟನೆ

ವೈದ್ಯರ ನಿರ್ಲಕ್ಷ್ಯದಿಂದಲೇ ರಾಜಮ್ಮ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಕುಟುಂಬಸ್ಥರು ಶವವನ್ನು ಜಿಲ್ಲಾಧಿಕಾರಿ ಕಚೇರಿ ಎದುರು ಇಟ್ಟು ಭಾನುವಾರ ಪ್ರತಿಭಟನೆಯನ್ನೂ ನಡೆಸಿದರು. ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮಾಡಿದ ಕೂಡಲೇ ವೈದ್ಯೆ ಪರಿಮಳಾ ದೇಸಾಯಿ ಅವರು ತಮ್ಮ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅವರ ನಿರ್ಲಕ್ಷ್ಯದಿಂದಲೇ ರಾಜಮ್ಮ ಮೃತಪಟ್ಟಿದ್ದಾರೆ ಎಂದು ಕಟುಂಬಸ್ಥರು ಆರೋಪಿಸಿದ್ದಾರೆ.

ವೈದ್ಯೆಗೆ ನಿರ್ಲಕ್ಷ್ಯದ ಹಿನ್ನೆಲೆ

ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ತೋರಿದ ಬಗ್ಗೆ ವೈದ್ಯೆ ಪರಿಮಳಾ ದೇಸಾಯಿ ಅವರ ವಿರುದ್ಧ ಈ ಹಿಂದೆಯೂ ಎರಡು ಬಾರಿ ಆರೋಪಗಳು ಕೇಳಿ ಬಂದಿದ್ದವು ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಇದೇ ಆರೋಪವನ್ನು ರಾಜಮ್ಮ ಕುಟುಂಬಸ್ಥರೂ ಮಾಡಿದ್ದಾರೆ. ಪರಿಮಳಾ ಅವರ ವಿರುದ್ಧ ಇಂಥ ಏಳು ಆರೋಪಗಳಿವೆ ಎಂದು ಅವರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT