ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

10 ದಿನಗಳಿಂದ ನೀರಿನ ಸಮಸ್ಯೆ: ಪ್ರತಿಭಟನೆ

ಖಾಲಿ ಬಿಂದಿಗೆ ಹಿಡಿದು ಬೀದಿಗಿಳಿದ ಮಹಿಳೆಯರು
Published 27 ಏಪ್ರಿಲ್ 2024, 16:20 IST
Last Updated 27 ಏಪ್ರಿಲ್ 2024, 16:20 IST
ಅಕ್ಷರ ಗಾತ್ರ

ಕುಡತಿನಿ (ತೋರಣಗಲ್ಲು): ಪಟ್ಟಣದ 6ನೇ ವಾರ್ಡ್‍ನಲ್ಲಿ ಕಳೆದ 10 ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದ್ದು, ನೀರಿನ ಬವಣೆ ನೀಗಿಸುವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ವಾರ್ಡ್‍ನ ಮಹಿಳೆಯರು ಶನಿವಾರ ಖಾಲಿ ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ವಾರ್ಡ್‍ನ ಮಹಿಳೆ ಹಂಪಮ್ಮ ಮಾತನಾಡಿ, ‘ನಮ್ಮ ವಾರ್ಡ್‍ನಲ್ಲಿ ಸುಮಾರು 10 ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದ್ದು ಜನರು ನಿತ್ಯ ಕುಡಿಯುವ, ಬಳಕೆಯ ನೀರಿಗಾಗಿ ಪರದಾಡುವಂತಾಗಿದೆ. ವಾರ್ಡ್‍ನ ಜನಪ್ರತಿನಿಧಿಗಳು, ಪಂಚಾಯಿತಿಯ ಅಧಿಕಾರಿಗಳು ನೀರಿನ ಸಮಸ್ಯೆ ನಿವಾರಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು ಸಂಬಂಧವಿಲ್ಲದವರಂತೆ ವರ್ತಿಸುತ್ತಿದ್ದಾರೆ’ ಎಂದು ದೂರಿದರು.

‘ವಾರ್ಡ್‍ನಲ್ಲಿನ ಕೊಳವೆ ಬಾವಿಯು ಅಂತರ್ಜಲದ ಪ್ರಮಾಣ ಕಡಿಮೆಯಾಗಿದ್ದರಿಂದ ನೀರಿಲ್ಲದೆ ಬತ್ತಿ ಹೋಗಿದೆ. ಪಂಚಾಯಿತಿಯವರು ಪರ್ಯಾಯ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸುವುದು ಎಷ್ಟು ಸರಿ?.. ನೀರಿನ ಬವಣೆ ನೀಗಿಸಲು ನೂತನ ಕೊಳವೆ ಬಾವಿ ಕೊರೆಸಬೇಕು ಇಲ್ಲದಿದ್ದರೇ ಟ್ಯಾಂಕರ್‍ಗಳ ಮೂಲಕ ನೀರನ್ನು ಪೂರೈಕೆ ಮಾಡಲು ಸೂಕ್ತ ಕ್ರಮವಹಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ನೀರಿನ ಸಮಸ್ಯೆ ಬಹಳ ಗಂಭೀರವಾಗಿದ್ದು, ನೀರಿಗಾಗಿ ಜನರು ಕೆಲಸ ಬಿಟ್ಟು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾರ್ಡ್‍ನ ಸದಸ್ಯರು, ಪಂಚಾಯಿತಿಯ ಅಧಿಕಾರಿಗಳು ನೀರಿನ ಸಮಸ್ಯೆ ನಿವಾರಿಸದೇ ಮೌನವಹಿಸುರಿವುದು ಸರಿಯಲ್ಲ ಶೀಘ್ರವಾಗಿ ವಾರ್ಡ್‍ಗೆ ಕುಡಿಯುವ, ಬಳಕೆಯ ನೀರಿನ ವ್ಯವಸ್ಥೆ ಮಾಡಬೇಕು’ ಪಟ್ಟಣದ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಕೆ.ಕಾಮೇಶ್ ಹೇಳಿದರು.

‘ಪಟ್ಟಣದ 6ನೇ ವಾರ್ಡ್‍ಗೆ ನೀರು ಪೂರೈಸುವ ಕೊಳವೆ ಬಾವಿಯಲ್ಲಿ ನೀರು ಬತ್ತಿದ್ದರಿಂದ ನೀರಿನ ಸಮಸ್ಯೆ ಉಂಟಾಗಿದ್ದು ಜನರ ಅನುಕೂಲಕ್ಕಾಗಿ ಬೇರೆ ಕೊಳವೆ ಬಾವಿಯಿಂದ ನೀರನ್ನು ಪೂರೈಸಲು ಸೂಕ್ತ ಕ್ರಮ ವಹಿಸಲಾಗುವುದು’ ಎಂದು ಕುಡತಿನಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸೂರ್ಯಕಾಂತ ಕಾರ್ವೆ ಪ್ರತಿಕ್ರಿಯಿಸಿದರು.

ಮಹಿಳೆಯರಾದ ಮಲೆಮ್ಮ, ಪಾರ್ವತಿ, ಮಹೇಶ್ವರಿ, ಶಿಲ್ಪಾ, ಗೌರಮ್ಮ, ರಾಮುಲಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT