ಕುಡತಿನಿ (ತೋರಣಗಲ್ಲು): ಇಲ್ಲಿನ 8ನೇ ವಾರ್ಡ್‍ನ ಗಣೇಶ್ ದೇವಸ್ಥಾನದ ಬೀದಿ, ಹೊಸ ಬಾವಿಯ ಓಣಿಯಲ್ಲಿ ಕಳೆದ 10 ರಿಂದ 15 ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದ್ದು ಪಟ್ಟಣ ಪಂಚಾಯಿತಿಯ ಅಧಿಕಾರಿ, ಸಿಬ್ಬಂದಿ ನೀರಿನ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮವಹಿಸುತ್ತಿಲ್ಲ ಎಂದು ಆರೋಪಿಸಿ ವಾರ್ಡ್‍ನ ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದು ಬುಧವಾರ ಪ್ರತಿಭಟನೆ ನಡೆಸಿದರು.
ವಾರ್ಡ್‍ನ ಮಹಿಳೆ ಸುನೀತಾ ಮಾತನಾಡಿ, ‘ನಮ್ಮ ವಾರ್ಡ್‍ಗೆ ಸುಮಾರು 10 ರಿಂದ 15 ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದ್ದು, ಜನರು ನಿತ್ಯ ಬಳಕೆ, ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಕೆಲಸ ಬಿಟ್ಟು ದೂರದಿಂದ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾರ್ಡ್‍ನಲ್ಲಿ ಪಂಚಾಯಿತಿಯ ಕೊಳವೆ ಬಾವಿ ಹಾಳಾಗಿ ಎರಡು ತಿಂಗಳಾಗಿದೆ. ಅದನ್ನು ಸರಿಪಡಿಸುವಂತೆ ಹಲವಾರು ಬಾರಿ ಪಂಚಾಯಿತಿ ಸಿಬ್ಬಂದಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಜನರ ಅನುಕೂಲಕ್ಕಾಗಿ ಪಂಚಾಯಿತಿಯವರು ಕೊಳವೆ ಬಾವಿಯನ್ನು ಶೀಘ್ರವಾಗಿ ದುರಸ್ತಿ ಮಾಡಬೇಕು ಹಾಗೂ ವಾರದಲ್ಲಿ ಎರಡು ಬಾರಿ ಕೆರೆಯ ನೀರನ್ನು ಬೀಡಬೇಕು’ ಎಂದು ಒತ್ತಾಯಿಸಿದರು.
‘8ನೇ ವಾರ್ಡ್‍ನಲ್ಲಿನ ಕೊಳವೆ ಬಾವಿಯಲ್ಲಿ ಅಂತರ್ಜಲದ ಪ್ರಮಾಣ ಕಡಿಮೆಯಾಗಿದ್ದರಿಂದ ಅದನ್ನು ಸರಿಪಡಿಸಿಲ್ಲ, ಈ ಬಾರಿ ಕೆರೆಯಲ್ಲಿ ನೀರಿನ ಅಭಾವ ಉಂಟಾಗಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಪಟ್ಟಣದ ಎಲ್ಲ ವಾರ್ಡ್‍ಗಳಿಗೂ ಸಕಾಲಕ್ಕೆ ನೀರು ಬಿಡಲು ಆಗುತ್ತಿಲ್ಲ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಆಗದಂತೆ ಸೂಕ್ತ ಕ್ರಮವಹಿಸಲಾಗುವುದು’ ಎಂದು ಕುಡತಿನಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಪ್ರತಿಕ್ರಿಯಿಸಿದರು.
ಮಹಿಳೆಯರಾದ ಹುಲಿಗೆಮ್ಮ, ಲಕ್ಷ್ಮಿ, ನೇತ್ರಾವತಿ, ಈಶ್ವರಮ್ಮ, ಭರಮಕ್ಕ, ಮಂಗಳಮ್ಮ, ಮಹಾದೇವಿ, ಮುತ್ತಮ್ಮ, ಮುಖಂಡರಾದ ಶಂಕರಪ್ಪ, ಭರಮಪ್ಪ ಅಂಬ್ರೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.