ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಳ್ಳಾರಿ ಲೋಕಸಭಾ ಕ್ಷೇತ್ರ| ಜೆಡಿಎಸ್‌ ಮೈತ್ರಿ, ರೆಡ್ಡಿ ಸೇರ್ಪಡೆ: ಬಿಜೆಪಿ ಮತಗಣಿತ

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌–ಬಿಜೆಪಿ ಮತ ಕಂದರ; ಜೆಡಿಎಸ್‌ ಮೈತ್ರಿ, ರೆಡ್ಡಿ ಸೇರ್ಪಡೆಯೊಂದಿಗೆ ‘ಮತಗಣಿತ’
ಹರಿಶಂಕರ್‌ ಆರ್‌.
Published 30 ಮಾರ್ಚ್ 2024, 7:22 IST
Last Updated 30 ಮಾರ್ಚ್ 2024, 7:22 IST
ಅಕ್ಷರ ಗಾತ್ರ

ಬಳ್ಳಾರಿ: ಹತ್ತು ತಿಂಗಳ ಹಿಂದೆ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗಿಂತಲೂ ಹೆಚ್ಚು ಕಡಿಮೆ ಎರಡೂ ಮುಕ್ಕಾಲು ಲಕ್ಷ (2.70 ಲಕ್ಷ) ಮತಗಳಷ್ಟು ಹಿಂದೆಬಿದ್ದಿದ್ದ ಬಿಜೆಪಿ ಈಗ ಜೆಡಿಎಸ್‌ ಜತೆಗಿನ ಮೈತ್ರಿ ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ದ ಸಂಸ್ಥಾಪಕ ರೆಡ್ಡಿ ಆಗಮನದೊಂದಿಗೆ ಮತಗಳಿಕೆಯನ್ನು ವೃದ್ಧಿ ಮಾಡಿಕೊಳ್ಳುವ ಗಣಿತದಲ್ಲಿ ತೊಡಗಿದೆ. 

ಈಗ ಲೋಕಸಭೆ ಚುನಾವಣೆ ಘೋಷಣೆಯಾಗಿದೆ. ರಾಜಕೀಯ ಚರ್ಚೆಗಳು ಗರಿಗೆದರಿರುವ ಈ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆಯ ಮತಗಳಿಕೆಯ ಪ್ರಮಾಣವನ್ನೂ ಲೋಕಸಭೆಯ ಚುನಾವಣೆಯ ಈ ವೇಳೆ ತಾಳೆ ಹಾಕಲಾಗುತ್ತಿದೆ. 

ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರ (ಕಾಂಗ್ರೆಸ್‌), ಬಳ್ಳಾರಿ ಗ್ರಾಮಾಂತರ (ಕಾಂಗ್ರೆಸ್‌), ಕಂಪ್ಲಿ(ಕಾಂಗ್ರೆಸ್‌), ಸಂಡೂರು (ಕಾಂಗ್ರೆಸ್‌) ಮತ್ತು ವಿಜಯನಗರ ಜಿಲ್ಲೆಯ ವಿಜಯನಗರ (ಕಾಂಗ್ರೆಸ್‌), ಹೂವಿನಹಡಗಲಿ (ಬಿಜೆಪಿ), ಹಗರಿಬೊಮ್ಮನಹಳ್ಳಿ (ಜೆಡಿಎಸ್‌), ಕೂಡ್ಲಿಗಿ(ಕಾಂಗ್ರೆಸ್‌) ಸೇರಿ ಎಂಟು ಕ್ಷೇತ್ರಗಳು ಬರುತ್ತವೆ.  

ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದಾಗ ಮತಗಳ ಅಂತರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ದೊಡ್ಡ ಕಂದರವೇ ಸೃಷ್ಟಿಯಾಗಿತ್ತು. ಎಂಟೂ ಕ್ಷೇತ್ರಗಳಲ್ಲಿ ಆರು ಕ್ಷೇತ್ರ ಗೆದ್ದ ಕಾಂಗ್ರೆಸ್‌ 7,29,974 ಮತಗಳನ್ನು ಪಡೆದಿತ್ತು.  ಬಿಜೆಪಿ 4,59,494 ಮತಗಳನ್ನು ಪಡೆದರೂ ಒಂದೇ ಕ್ಷೇತ್ರದಲ್ಲಿ ಗೆದ್ದು ಭಾರಿ ಮುಖಭಂಗ ಅನುಭವಿಸಿತ್ತು.  

ಮತ್ತೊಂದು ಕಡೆ, ಜೆಡಿಎಸ್‌ 93,609 ಮತ ಪಡೆದು ಒಂದು ಕ್ಷೇತ್ರವನ್ನು ತನ್ನದಾಗಿಸಿಕೊಂಡಿತ್ತು. ಜನಾರ್ದನ ರೆಡ್ಡಿ ಅವರ ಕೆಆರ್‌ಪಿಪಿ 80,579 ಮತಗಳನ್ನು ಪಡೆದಿತ್ತಾದರೂ ಒಂದೂ ಸ್ಥಾನವನ್ನೂ ಗೆಲ್ಲಲು ಆಗಿರಲಿಲ್ಲ. ಆದರೆ, ಬಿಜೆಪಿ ಸೋಲಿನಲ್ಲಿ ಕೆಆರ್‌ಪಿಪಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದ್ದಂತೂ ಸುಳ್ಳಲ್ಲ. ಇನ್ನೊಂದು ಕಡೆ, ತಾನು ಸ್ಪರ್ಧಿಸದ ಕಡೆಗಳಲ್ಲಿ ಯಾರಿಗೆ ಅನುಕೂಲ ಮಾಡಿಕೊಟ್ಟಿದೆ ಎಂಬುದು ಲೆಕ್ಕಕ್ಕೆ ಸಿಗದೇ ಹೋಗಿದ್ದರೂ, ಬಿಜೆಪಿ ವಿರುದ್ಧದ ಜನಾರ್ದನ ರೆಡ್ಡಿ ಮುನಿಸು ಕಾಂಗ್ರೆಸ್‌ಗೆ ವರದಾನವಾಗಿತ್ತು ಎಂದು ವಿಶ್ಲೇಷಿಸಲಾಗುತ್ತದೆ. 

ಸದ್ಯ, ಜೆಡಿಎಸ್‌ ಎನ್‌ಡಿಎ ಮೈತ್ರಿಕೂಟ ಸೇರಿದೆ. ಜನಾರ್ದನ ರೆಡ್ಡಿ ಅವರೂ ಅಂತಿಮವಾಗಿ ಬಿಜೆಪಿ ಸೇರಿದ್ದಾರೆ. ಈಗ ಈ ಎರಡೂ ಪಕ್ಷಗಳ ಗಳಿಕೆಯನ್ನು ತನ್ನತ್ತ ತಿರುಗಿಸಿಕೊಳ್ಳುವ ಯೋಜನೆಯಲ್ಲಿ ಬಿಜೆಪಿ ತೊಡಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT