ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಶಿಷ್ಟರ ಅಹವಾಲುಗಳಿಗೆ ಸ್ಪಂದಿಸಿ: ಡಿಸಿ

ಪರಿಶಿಷ್ಟ ಸಮುದಾಯದವರ ಕುಂದು ಕೊರತೆ ಸಭೆ
Published : 24 ಸೆಪ್ಟೆಂಬರ್ 2024, 15:56 IST
Last Updated : 24 ಸೆಪ್ಟೆಂಬರ್ 2024, 15:56 IST
ಫಾಲೋ ಮಾಡಿ
Comments

ಬಳ್ಳಾರಿ: ಪರಿಶಿಷ್ಟ ಸಮುದಾಯದವರ ಅಹವಾಲುಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಧಿಕಾರಿಗಳಿಗೆ ಸೂಚಿಸಿದರು.

ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು. 

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶಿಷ್ಟ ಸಮುದಾಯವರ ಕುಂದು ಕೊರತೆ ಸಭೆಯನ್ನು ಆಯೋಜಿಸಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಪರಿಶಿಷ್ಟರ ಕಾಲೋನಿಗಳಲ್ಲಿ ರಸ್ತೆ, ಚರಂಡಿ, ಶೌಚಾಲಯ ಸೇರಿ ಇತರೆ ಸೌಲಭ್ಯಗಳನ್ನು ಆದ್ಯತೆಯಾಗಿ ಪರಿಗಣಿಸಲಾಗುವುದು. ಅವುಗಳನ್ನು ಶಾಸಕರ ಸಹಕಾರದೊಂದಿಗೆ ಪರಿಹರಿಸಲಾಗುವುದು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ ಮಾತನಾಡಿ, ‘ದೌರ್ಜನ್ಯ, ಜಾತಿನಿಂದನೆ ಹಾಗೂ ಇತರೆ ಪ್ರಕರಣಗಳು ವರದಿಯಾದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕುಂದು–ಕೊರತೆಗಳಿದ್ದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು’ ಎಂದರು.

‘ಸ್ಮಶಾನ ಭೂಮಿ, ಬಗರ್‌ಹುಕುಂ ರೈತರ ಸಮಸ್ಯೆಗಳು ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಸರ್ಕಾರಿ ಅಭಿಲೇಖಾಲಯ ಕಾರ್ಯಾಲಯದಲ್ಲಿ ಕಳೆದ 15 ವರ್ಷದ ಹಿಂದಿನ ಜಮೀನಿಗೆ ಸಂಬಂಧಿಸಿದ ದಾಖಲೆ ಕೇಳಿದರೆ, ಸಿಗುವುದಿಲ್ಲ ಎಂದು ಸಮಜಾಯಿಷಿ, ಹಿಂಬರಹ ನೀಡಿ ಕಳುಹಿಸುತ್ತಾರೆ’ ಎಂದು ದಲಿತ ಸಂಘದ ಮುಖಂಡರೊಬ್ಬರು ಸಭೆಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಭೂ ದಾಖಲೆ ಸುರಕ್ಷಾ ಕಾಯ್ದೆಯಡಿ ಜಿಲ್ಲೆಯ 5 ತಾಲ್ಲೂಕುಗಳ ಭೂ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ, ಕಂಪ್ಯೂಟರ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ. ಈಗಾಗಲೇ 25 ಲಕ್ಷ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಇಡಲಾಗಿದೆ. ಆರು ತಿಂಗಳೊಳಗಾಗಿ ಪ್ರತಿ ದಾಖಲೆಯು ಜೆರಾಕ್ಸ್ ಪ್ರತಿ ಲಭಿಸಲಿದೆ’ ಎಂದು ಹೇಳಿದರು.

‘ಬಳ್ಳಾರಿ ತಾಲ್ಲೂಕಿನ ಕೆಲ ಗ್ರಾಮದಲ್ಲಿ ರುದ್ರಭೂಮಿ ಇಲ್ಲ. ಕೆಲವೆಡೆ ಇರುವ ರುದ್ರಭೂಮಿಗೆ ರಸ್ತೆ ಇಲ್ಲ. ಹೀಗೆ ಹಲವು ಕಾರಣಗಳಿಗೆ ಪರಿಶಿಷ್ಟರು  ಹಳ್ಳ, ಕೊಳ್ಳ, ನದಿ ದಡದಲ್ಲೇ ಮೃತರ ಅಂತ್ಯ ಸಂಸ್ಕಾರ ಮಾಡಬೇಕಿದೆ’ ಎಂದು ಜಿಲ್ಲಾಧಿಕಾರಿಗಳ ಎದುರು ಸಾರ್ವಜನಿಕರು ಪ್ರಸ್ತಾಪಿಸಿದರು.

‘ಕೂಡಲೇ ತೊಂದರೆ ಸರಿಪಡಿಸಿ’ ಎಂದು ಬಳ್ಳಾರಿ ತಾಲ್ಲೂಕು ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.

‘ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ನಿಯಮಿತವಾಗಿ ಸಭೆ ನಡೆಸಬೇಕು. ಸ್ಮಶಾನ ಭೂಮಿ, ವಸತಿ, ಶಿಕ್ಷಣ ಪರಿಶಿಷ್ಟರ ಪ್ರಮುಖ ಸಮಸ್ಯೆಗಳು. ಇವುಗಳ ನಿವಾರಣೆಗೆ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಪರಿಶಿಷ್ಟ ಜಾತಿ ಹಾಗೂ ಸಮುದಾಯದವರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಇತರೆ ಸಮಸ್ಯೆಗಳ ಬಗ್ಗೆಯೂ ಗಮನಹರಿಸಬೇಕು’ ಎಂದು ದಲಿತ ಮುಖಂಡರು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ದಲಿತ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಮುಖಂಡರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT