ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ | ಮೆಣಸಿನ ಗಿಡಕ್ಕೆ ಬೇರು ಕೊಳೆ ರೋಗ; ರೈತರು ಕಂಗಾಲು

Published 8 ಆಗಸ್ಟ್ 2023, 18:29 IST
Last Updated 8 ಆಗಸ್ಟ್ 2023, 18:29 IST
ಅಕ್ಷರ ಗಾತ್ರ

ಬಳ್ಳಾರಿ: ಮೆಣಸಿನಕಾಯಿಗೆ ಒಂದಿಲ್ಲೊಂದು ರೋಗ ಬಾಧಿಸುತ್ತಿದೆ. ಕಳೆದ ವರ್ಷ ಕಾಣಿಸಿಕೊಂಡಿದ್ದ ಕಪ್ಪುಚುಕ್ಕೆ ರೋಗದಿಂದ ಕಂಗೆಟ್ಟಿದ್ದ ರೈತರು ಚೇತರಿಸಿಕೊಳ್ಳುವ ಮೊದಲೇ ಈಗ ಮೆಣಸಿನ ಸಸಿಗಳಿಗೆ ಬೇರು ಕೊಳೆ ರೋಗ ಕಾಣಿಸಿಕೊಂಡಿದೆ.

ಕಂಪ್ಲಿ ತಾಲ್ಲೂಕು ಮೆಟ್ರಿಯ ಖಾಸಗಿ ನರ್ಸರಿಯಿಂದ ತಂದು ಸುಮಾರು 15 ರೈತರು 300 ಎಕರೆಯಲ್ಲಿ ನಾಟಿ ಮಾಡಿರುವ ಮೆಣಸಿನ ಗಿಡಗಳು ಬೇರು ಕೊಳೆ ರೋಗದಿಂದ ನಲುಗಿವೆ. ಬೆಳವಣಿಗೆ ಕುಂಠಿತಗೊಂಡಿರುವುದರಿಂದ ಕೃಷಿಕರು ಕಂಗಾಲಾಗಿದ್ದಾರೆ.

ಸೊರಗಿರುವ ಗಿಡಗಳು ಸಿಜೆಂಟಾ 5531 ತಳಿ. ಪ್ರತಿ ಗಿಡಕ್ಕೆ ₹ 1.10 ಪಾವತಿಸಲಾಗಿದೆ. ಹನಿ ನೀರಾವರಿ ಇರುವ ಕಡೆ ಎಕರೆಗೆ ಸುಮಾರು 15 ಸಾವಿರ, ನೀರಿನ ಸೌಲಭ್ಯವಿರುವ ಕಡೆ 18 ಸಾವಿರ ಗಿಡ ಹಾಕಬಹುದು. ಈ ಲೆಕ್ಕಾಚಾರದಲ್ಲಿ ಎಕರೆಗೆ ₹ 50 ಸಾವಿರ ಖರ್ಚಾಗಿದೆ.

ಏಪ್ರಿಲ್‌ನಿಂದ ಜುಲೈ ವರೆಗೆ ಬಿದ್ದ ಮಳೆಯ ಮಾಹಿತಿ ಒದಗಿಸುವಂತೆ ಹವಾಮಾನ ಇಲಾಖೆಗೆ ಕೇಳಲಾಗಿದೆ. ಮಾಹಿತಿ ಸಿಕ್ಕ ಮರುದಿನವೇ ವರದಿ ಕೊಡಲಿದ್ದೇವೆ.
ಪ್ರೊ. ರಾಘವೇಂದ್ರ ಆಚಾರಿ, ಮುನಿರಾಬಾದ್‌ ತೋಟಗಾರಿಕೆ ಕಾಲೇಜಿನ ರೋಗ ಶಾಸ್ತ್ರ ತಜ್ಞ

‘ಮುನಿರಾಬಾದ್‌ ತೋಟಗಾರಿಕೆ ಕಾಲೇಜಿನ ರೋಗ ಶಾಸ್ತ್ರ ತಜ್ಞ ಪ್ರೊ. ರಾಘವೇಂದ್ರ ಆಚಾರಿ, ಪ್ರೊ. ಲಿಂಗಮೂರ್ತಿ ಹಾಗೂ ಪ್ರೊ. ಯೋಗೇಶ್‌ ಅವರನ್ನೊಳಗೊಂಡ ತಂಡ ಮೆಟ್ರಿ, ದೇವಲಾಪುರ ಹಾಗೂ ಉಪ್ಪಾರಹಳ್ಳಿಯ ಮೆಣಸಿನ ಹೊಲಗಳಿಗೆ ಕಳೆದ ವಾರ ಭೇಟಿ ನೀಡಿ ಪರಿಶೀಲಿಸಿದೆ. ಒಂದು ವಾರದಲ್ಲಿ ವರದಿ ನೀಡಲಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ್‌ ಸಪ್ಪಂಡಿ ತಿಳಿಸಿದರು.

‘ಮಣ್ಣಿನಲ್ಲಿ ದೋಷವಿದೆಯೇ ಅಥವಾ ಮಳೆ ಕಾರಣದಿಂದ ಗಿಡ ಸೊರಗಿವೆಯೇ ಎಂದು ಮೂವರು ತಜ್ಞರು ಪರಿಶೀಲಿಸಿ, ಪರಸ್ಪರ ಸಮಾಲೋಚಿಸಿ ವರದಿ ಕೊಡುತ್ತೇವೆ‘ ಎಂದು ಪ್ರೊ. ರಾಘವೇಂದ್ರ ಆಚಾರಿ ತಿಳಿಸಿದರು.

ಮುಂಗಾರು ಹಂಗಾಮಿನಲ್ಲಿ ಮಳೆ ವಿಳಂಬವಾದ ಕಾರಣ ಮೆಣಸಿನ ಸಸಿ ನಾಟಿ ತಡವಾಗಿದೆ. ಈಚೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ರೈತರು ಮೆಣಸಿನ ಸಸಿ ನಾಟಿ ಮಾಡುತ್ತಿದ್ದಾರೆ. ಕೃಷಿ ಇಲಾಖೆಯ ಅಂಕಿ–ಅಂಶದಂತೆ ಮೆಣಸಿನಕಾಯಿ ಬೆಳೆ ಒಟ್ಟು ಪ್ರದೇಶ 3,500 ಹೆಕ್ಟೇರ್. ಆದರೆ, ಎರಡು ಪಟ್ಟು ಬಿತ್ತನೆಯಾಗಿದೆ.

ಆಗಸ್ಟ್ ತಿಂಗಳ ಅಂತ್ಯದ ವರೆಗೆ ಮೆಣಸಿನಕಾಯಿ ನಾಟಿಗೆ ಅವಕಾಶವಿದ್ದು, 30 ಸಾವಿರ ಹೆಕ್ಟೇರ್‌ಗೆ ವಿಸ್ತರಣೆಯಾಗುವ ಸಾಧ್ಯತೆಯಿದೆ. ರೈತರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ತುಂಗಭದ್ರ ಕಾಲುವೆಯಲ್ಲಿ ನೀರು ಹರಿಯುವುದನ್ನು ಕಾಯುತ್ತಿದ್ದಾರೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ 66,345 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿತ್ತು. 2022-23ರಲ್ಲಿ ಇದು 37,892 ಹೆಕ್ಟೇರ್‌ಗೆ ಕುಸಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT