ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಂ ವಿಶ್ವಕವಿ ಸಮ್ಮೇಳನ | ಬಿಡುಗಡೆಗಾಗಿ ಬರವಣಿಗೆ: ಸಾಹಿತಿ ಅನಾಮಿಕ ಅನು

Last Updated 23 ಅಕ್ಟೋಬರ್ 2022, 8:45 IST
ಅಕ್ಷರ ಗಾತ್ರ

ಬಳ್ಳಾರಿ, ಡಾ.ಜೋಳದರಾಶಿ ದೊಡ್ಡನಗೌಡರ ವೇದಿಕೆ: ಬರವಣಿಗೆ ಆರಂಭಿಸಿದ್ದೇ ಐದು ವರ್ಷಗಳ ಹಿಂದೆ. ಹತ್ತು ವರ್ಷಗಳ ಹಿಂದೆ ನನ್ನಪ್ಪ ತೀರಿ ಹೋದರು... ಆ ದುಃಖದಿಂದಾಚೆ ಬರಲು ಬರವಣಿಗೆ ಸಹಾಯವಾಯಿತು.

ಹೀಗೆ ತಮ್ಮ ಬದುಕನ್ನೂ, ಬರಹವನ್ನೂ ಕಾಫಿ ವಿರಾಮದಲ್ಲಿ ಚುಟುಕಾಗಿ ಹೇಳಿದವರು ಅನಾಮಿಕಾ ಅನು.

ಅಮ್ಮ ಏಕಾಕಿಯಾದಳು ಎಂಬ ಕವನದಲ್ಲಿ, ಅಂಗಿಯ ಗುಂಡಿಗಳಲ್ಲಿ ನೆನಪುಗಳನ್ನು ಹುಡುಕು, ನೆನಪುಗಳಲ್ಲಿಯೇ ಬದುಕುವ ಅನನ್ಯ ಅನುಭವವನ್ನು ಹಿಡಿದಿಟ್ಟಿದ್ದನ್ನು ಹೇಳಿದರು.

ನಮ್ಮಲ್ಲಿ ಕೌದಿಗಳನ್ನು ಹೊಲಿಯುವುದೂ ಇದೇ ಕಾರಣಕ್ಕೆ ಅಲ್ಲವಾ... ಒಂದೊಂದು ಗುಂಡಿಯೂ ಒಂದೊಂದು ಸನ್ನಿವೇಶಕ್ಕೆ, ಒಬ್ಬ ವ್ಯಕ್ತಿಗೆ ಅವರ ಜೀವನಕ್ಕೆ ತಳಕು ಹಾಕಿಕೊಂಡಿರುತ್ತದೆ. ಗುಂಡಿಗಳೆಲ್ಲವೂ ನಮ್ಮನ್ನು ನೆನಪಿನ ಗುಂಡಿಯೊಳಗೇ ತಳ್ಳುತ್ತವೆ. ಆ ನೆನಪಿನಲ್ಲಿಯೇ ಮಿಂದೇಳುತ್ತ ತಮ್ಮ ಇಡೀ ಬದುಕನ್ನು ಮತ್ತೊಮ್ಮೆ ಬದುಕುತ್ತಾಳೆ ನನ್ನಮ್ಮ ಎನ್ನುತ್ತ ಕಣ್ತುಂಬಿಕೊಂಡರು.

ಅಪ್ಪನ ನಂತರ ಬದುಕು ಖಾಲಿಖಾಲಿ ಎನಿಸತೊಡಗಿತು. ದುಗುಡ, ಆತಂಕ ಮತ್ತು ದುಃಖಗಳಿಂದ ಹೃದಯ ಬಿಗಿದುಕೊಂಡಿತ್ತು. ಪ್ರತಿದಿನವೂ ಕಷ್ಟವೆನಿಸುತ್ತಿತ್ತು. ಆ ಸಮಯದ ಖಿನ್ನತೆಯಿಂದ ಹೊರಬರಲು ಬರವಣಿಗೆ ಸಹಾಯ ಮಾಡಿತು. ಬಿಹಾರ್‌ ಮೂಲದ ನಾನು, ಕಳೆದ ಹದಿನೈದು ವರ್ಷಗಳಿಂದ ಕೇರಳದಲ್ಲಿರುವೆ. ಈ ದೂರವೂ ನನ್ನ ಭಾಷೆಯೊಂದಿಗೆ ಅನನ್ಯವಾದ ಬೆಸುಗೆಯನ್ನು ಬೆಸೆದಿದೆ.


ಬರವಣಿಗೆ ನನ್ನ ಪಾಲಿಗೆ ಬಿಡುಗಡೆಯ ಭಾವ ನೀಡುವಂಥದ್ದು. ಜಗದ ನೋವು ಮತ್ತು ಆಕ್ರಂದನಕ್ಕೆ ಒಂದೇ ಭಾಷೆ. ಅವುಗಳ ತೀವ್ರತೆ ಮಾತ್ರ ಬೇರೆಬೇರೆಯಾದುದು. ಥೈಮೈ ಹಳ್ಳಿಯ ಹುಡುಗಿಯರ ಗೋರಿಗಳು ಅಂಥದ್ದೇ ಒಂದು ಕವಿತೆ. ಯುದ್ಧದ ಕ್ರೌರ್ಯಗಳನ್ನು ಹೇಳುತ್ತಲೆ, ಶೋಷಣೆಯ ಆಕ್ರಂದನಕ್ಕೆ ಗೋರಿಯೊಳಗಿನ ದೇಹಗಳೂ ಕನಲುತ್ತವೆ. ಒಳಿತಿಗಾಗಿ ಧ್ವನಿ ಎತ್ತುತ್ತವೆ. ಇದ್ದವರು ಸತ್ತಂತೆಯೇ ಇರುತ್ತೇವೆ. ಜಗದ ಅತ್ಯಾಚಾರಗಳಿಗೆ ಸ್ಪಂದಿಸುವುದಾದರೂ ಹೇಗೆ? ಅಕ್ಷರಗಳಾಗುವುದಾದರೂ ಹೇಗೆ? ಈ ಪ್ರಶ್ನೆಗಳಿಗೆ ಉತ್ತರಗಳೇ ಸಿಗುವುದಿಲ್ಲ...

ನನ್ನ ಕ್ಷಮೆ ನಿನ್ನ ಪಾಪಗಳಿಗಿಂತಲೂ ದೊಡ್ಡದು. ಆದರೆ ನನ್ನ ಕ್ಷಮೆಗಳಿಗಿಂತಲೂ ನಿನ್ನ ಪಾಪಗಳು ಹುಟ್ಟುಹಾಕಿರುವ ನೋವು ಎಂದು ಅಂತ್ಯಗೊಳ್ಳುವ ಕವಿತೆ, ಈ ಕಾಲದ ಮಹಿಳೆಯರ ಧ್ವನಿಯಾಗಿದೆ ಅದು.

ನಮ್ಮತನಕ್ಕಾಗಿ, ಮಹಿಳೆಯರು ಎದ್ದು ನಿಲ್ಲುವುದು, ಅವರ ನಿಲುವನ್ನು ಸ್ಪಷ್ಟಪಡಿಸುವುದು, ತಮ್ಮ ಒಲವನ್ನು ತೋರುವುದು, ಇವೆಲ್ಲ ಪುರುಷಾಹಂಕಾರಕ್ಕೆ ಏಟು ನೀಡುತ್ತಿವೆ.

ತಮ್ಮನ್ನು, ತಮ್ಮ ಪೌರುಷವನ್ನು ಪ್ರತಿಪಾದಿಸಲು ಪ್ರತಿಷ್ಠಾಪಿಸಲು ದಮನಿಸುವ ಸಾಧನ ಹಿಡಿಯುತ್ತಾನೆ. ಶೋಷಣೆಯ ದಾರಿ ತೆಗೆದುಕೊಳ್ಳುತ್ತದೆ. ಪ್ರತಿಸಲವೂ ಮನೆಯ ಶಾಂತಿ ಮತ್ತು ಮನದ ಶಾಂತಿಗಾಗಿ ಮಹಿಳೆ ಕ್ಷಮಿಸುತ್ತಲೇ ಸಾಗುತ್ತಾಳೆ. ಅದನ್ನು ದೌರ್ಬಲ್ಯವೆಂದುಕೊಳ್ಳುವ ಪುರುಷ ಶೋಷಿಸುತ್ತಲೇ ಸಾಗುತ್ತಾನೆ. ಈ ಚಕ್ರ ಹೀಗೆಯೆ ಮುಂದುವರಿಯುತ್ತದೆ. ಪಾಪಗಳನ್ನು ಅರ್ಥೈಸಬಹುದು. ಕ್ಷಮೆಯನ್ನೂ.. ಆದರೆ ಆ ನೋವು, ಕ್ಷಮಿಸಬೇಕಾದ ಅನಿವಾರ್ಯ, ಆ ಸಮಯದ ದುಃಖ ಅದನ್ನು ಬರೆಯಲಾಗದು. ಹೇಳಲಾಗದು...

ಇಷ್ಟೆಲ್ಲ ಹೇಳುವಾಗ ಕಾಫಿ ಬರಿದಾಗಿತ್ತು. ಬಹುಶಃ ಮಾತುಗಳೂ.. ಮತ್ತೆ ಸಿಗಣ ಎನ್ನುತ್ತಲೇ ಅಭಿಮಾನಿಗಳೊಂದಿಗೆ ಸೆಲ್ಫಿಗಾಗಿ ಮುಗುಳ್ನಗುತ್ತ ತೇಲಿಹೋದರು ಅನಾಮಿಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT