ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಂ ವಿಶ್ವಕವಿ ಸಮ್ಮೇಳನ: ಸ್ವಸ್ಥ ಚರ್ಚೆಗೆ ವೈದ್ಯರ ಸ್ಪರ್ಶ

Last Updated 23 ಅಕ್ಟೋಬರ್ 2022, 13:46 IST
ಅಕ್ಷರ ಗಾತ್ರ

ಬಳ್ಳಾರಿ, ಡಾ.ಜೋಳದರಾಶಿ ದೊಡ್ಡನಗೌಡರ ವೇದಿಕೆ: ಮೂರುದಿನಗಳ ಸಂಗಂ ವಿಶ್ವಕವಿ ಸಮ್ಮೇಳನದಲ್ಲಿ ಆದ ಸ್ವಸ್ಥ ಚರ್ಚೆ, ಸಾತ್ವಿಕ ಆಹಾರಕ್ಕೆ ಕಾರ್ಯಕ್ರಮದ ಆಯೋಜನೆಯಲ್ಲಿ ವೈದ್ಯವೃಂದದ ಅಹರ್ನಿಶಿ ಶ್ರಮವೂ ಕಾರಣವಾಗಿದೆ.

ಆಯೋಜನೆಯ ಅಧ್ಯಕ್ಷತೆಯ ಗುರುತರ ಜವಾಬ್ದಾರಿ ವಹಿಸಿದ್ದ ಡಾ. ಅರವಿಂದ ಪಟೇಲ್‌ ಅವರು, ಎಲ್ಲರಿಗಿಂತ ಮೊದಲೇ ಸಭಾಂಗಣದಲ್ಲಿ ಹಾಜರಿರುತ್ತಿದ್ದರು. ಎಲ್ಲರಿಗೂ ಮಾತನಾಡಿಸುವ, ಊಟ, ತಿಂಡಿಗೆ ಕರೆಯುವ, ಆಯಿತೆ ಎಂದು ವಿಚಾರಿಸುತ್ತ, ಮನೆಯ ಹಿರಿಯನ ಎಲ್ಲ ಕರ್ತವ್ಯಗಳನ್ನೂ ನಿಭಾಯಿಸಿದರು. ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕರು.

ಬಳ್ಳಾರಿಗೆ ಬಂದಿಳಿದ ಮೇಲೆ, ಅತಿಥಿಗಳು ಉಳಿಯಬೇಕಾದ ಸ್ಥಳ, ಪ್ರತಿನಿಧಿಗಳನ್ನು ವಸತಿ ವ್ಯವಸ್ಥೆಯಿಂದ ಸಭಾಂಗಣಕ್ಕೆ ಕರೆತರುವ, ಬಿಡುವ ಜವಾಬ್ದಾರಿ ಯಾರದ್ದು ಎಂದೆಲ್ಲ ಮಾಹಿತಿ ನೀಡುತ್ತ, ಪ್ರತಿಯೊಬ್ಬರಿಗೂ ಆರಾಮದಾಯಕವಾಗಿದೆಯೇ ಎಂದು ವಿಚಾರಿಸಿಕೊಂಡಿದ್ದು ಡಾ. ಗಡ್ಡಿ ದಿವಾಕರ್‌. ಅಷ್ಟೇ ಅಲ್ಲ, ವೇದಿಕೆಯ ನಿರ್ವಹಣೆ, ಸಮಯದ ನಿರ್ವಹಣೆ ಎರಡನ್ನೂ ಲವಲವಿಕೆಯಿಂದ ಮಾಡುತ್ತ, ಒಂದಿನಿತೂ ದಣಿವನ್ನು ತೋರದ ಮಕ್ಕಳ ಶಸ್ತ್ರಚಿಕಿತ್ಸಕ ದಿವಾಕರ್‌ ಅವರು ಸಂಯಮವೇ ಮೈತಳೆದಂತಿದ್ದರು.

ಮೂರುದಿನಗಳ ಕಾಲ ವೇದಿಕೆಯ ಹಿಂದಿನ ಕೆಲಸ, ವೇದಿಕೆಯ ಮುಂದಿನ ಕಾರ್ಯಗಳಲ್ಲಿಯೂ ಮಾತಿಲ್ಲದೆ, ಸದಾ ಕೆಲಸದಲ್ಲಿ ತೊಡಗಿಕೊಂಡಿದ್ದವರು ಮಕ್ಕಳ ತಜ್ಞರಾದ ಡಾ.ಯೋಗಾನಂದ ರೆಡ್ಡಿ ಅವರು. ಮಕ್ಕಳ ಸ್ವಾಸ್ಥ ಸುರಕ್ಷಿತ ಕೈಗಳಲ್ಲಿದೆ ಎಂಬಷ್ಟು ಖ್ಯಾತರಾಗಿರುವ ವೈದ್ಯರಿಗೆ ಸಾಹಿತ್ಯವನ್ನು ಓದುವ ಹುಕಿ, ಕೇಳುವ ಆಸಕ್ತಿ. ಮೆಚ್ಚುವ, ಟೀಕಿಸುವ, ವಿಶ್ಲೇಷಿಸುವ ಪ್ರೀತಿ. ಆನಂದಿಸುವ ಜೀವನಪ್ರೀತಿಗೂ ಕೊರತೆ ಇಲ್ಲ.

ಎಲ್ಲಿಯೂ ಕಾಣಿಸಿಕೊಳ್ಳದೆ, ಕೇಳಿಸಿಕೊಳ್ಳದೆ, ತಮಗೆ ಕೊಟ್ಟ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ನಿರತರಾದವರು ಡಾ. ಮಧುಸೂಧನ ಕರಿಗನೂರು ಅವರು. ಈ ವೈದ್ಯರ ತಂಡದಲ್ಲಿದ್ದವರು ಡಾ. ಜ್ಯೋತಿ ಪಾಟೀಲ ಸೇರಿದಂತೆ ಕೆಲವರು ಅನುವಾದಿತ ಕನ್ನಡ ಕವಿತೆಗಳನ್ನೂ ಓದಿದರು.

ಈ ಎಲ್ಲ ವೈದ್ಯರ ಹಿಂದಿನ ಶಕ್ತಿಯಾಗಿ ನಿಂತವರು ಬಳ್ಳಾರಿಯ ಮತ್ತು ರಾಜ್ಯದಲ್ಲಿಯೇ ಹೆಸರು ಮಾಡಿದ ಪನ್ನರಾಜ ಅವರು.

ಸಾಹಿತಿಗಳೊಡನೆ ಸಂವಹನ, ಅನುವಾದಕರೊಂದಿಗೆ ಸಂಯೋಜನೆ ಆರಿಫ್‌ ರಾಜಾ ನಿರ್ವಹಿಸಿದರು. ಶಿಕ್ಷಕ ಕೆ.ಶಿವಲಿಂಗಪ್ಪ ಹಂದ್ಯಾಳ ಅವರು , ಅಮಿತ್‌ ಕಲ್ಲಾ, ವಿಜೇಂದ್ರ ವಿಜ್‌ ವೀರೇಂದ್ರ ರವಿಹಾಳ ಮುಂತಾದವರು ಇವರೊಂದಿಗೆ ಕೈ ಜೋಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT