ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹನೀಯರ ಜಯಂತಿ: ಅರ್ಥಪೂರ್ಣ ಆಚರಣೆ

ಸಭೆ: ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ ಹೇಳಿಕೆ
Published 7 ಫೆಬ್ರುವರಿ 2024, 16:06 IST
Last Updated 7 ಫೆಬ್ರುವರಿ 2024, 16:06 IST
ಅಕ್ಷರ ಗಾತ್ರ

ಬಳ್ಳಾರಿ: ಸಂತ ಸೇವಾಲಾಲ್, ಸವಿತಾ ಮಹರ್ಷಿ, ಛತ್ರಪತಿ ಶಿವಾಜಿ ಮತ್ತು ಸರ್ವಜ್ಞ ಜಯಂತಿ ಸೇರಿದಂತೆ ಮಹನೀಯರ ಜಯಂತಿಗಳನ್ನು ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಮಹನೀಯರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು.

‘ಫೆ.15ರಂದು ಸಂತ ಸೇವಾಲಾಲ್ ಜಯಂತಿಯನ್ನು ವಾಲ್ಮೀಕಿ ಸಮುದಾಯ ಭವನದಲ್ಲಿ, ಫೆ.16ರಂದು ಸವಿತಾ ಮಹರ್ಷಿ ಜಯಂತಿಯನ್ನು, ಫೆ.19ರಂದು ಸಂಜೆ ಛತ್ರಪತಿ ಶಿವಾಜಿ ಜಯಂತಿಯನ್ನು ಮತ್ತು ಫೆ.20ರಂದು ಸರ್ವಜ್ಞ ಜಯಂತಿಯನ್ನು (ಈ ಮೂರೂ ಜಯಂತಿ ಆಚರಣೆ ಬಿಡಿಎಎ ಫುಟ್‌ಬಾಲ್ ಮೈದಾನ ಸಭಾಂಗಣದಲ್ಲಿ) ಆಚರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. 

‘ಕಾರ್ಯಕ್ರಮಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಾಗೂ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು. 

ಜಯಂತಿ ಆಚರಣೆ ಸಂದರ್ಭದಲ್ಲಿ ಶಿಷ್ಟಾಚಾರ ಪಾಲನೆ, ಆಹ್ವಾನ ಪತ್ರಿಕೆ, ವಿಶೇಷ ಉಪನ್ಯಾಸ, ವಚನ ಗಾಯನ ಸೇರಿದಂತೆ ಎಲ್ಲವೂ ಸರಿಯಾಗಿ ನಿರ್ವಹಿಸಬೇಕು. ಅದೇ ರೀತಿ ವೇದಿಕೆ, ಕುಡಿಯುವ ನೀರು, ಧ್ವನಿವರ್ಧಕ, ಸ್ವಚ್ಛತೆ ಮತ್ತು ಸೂಕ್ತ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆಯೂ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ತಿಳಿಸಿದರು.

‘ನುರಿತ ಉಪನ್ಯಾಸಕರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗುವುದು. ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾತಂಡಗಳನ್ನು ನಿಯೋಜಿಸಲಾಗುವುದು. ಸಮುದಾಯದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಪಿಎಚ್‍.ಡಿ ಪದವಿ ಪಡೆದ ಅಭ್ಯರ್ಥಿಗಳಿದ್ದರೆ ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.

ಸಭೆಯಲ್ಲಿ ಸಮುದಾಯದ ಮುಖಂಡರು, ಜನ ಪ್ರತಿನಿಧಿಗಳು ಜಯಂತಿಗಳ ಆಚರಣೆಯ ಕುರಿತು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಮುದಾಯದ ಮುಖಂಡರು, ಜನ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT