ಮಂಗಳವಾರ, ಫೆಬ್ರವರಿ 7, 2023
27 °C
ವಿಎಸ್‌ಕೆಯು ಸತ್ಯಶೋಧನಾ ಸಮಿತಿ ವರದಿ; ₹ 1.07 ಕೋಟಿ ವಸೂಲಿಗೆ ಶಿಫಾರಸು

ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ: ಗುತ್ತಿಗೆ ನೌಕರರ ವೇತನ ಪಾವತಿಯಲ್ಲಿ ಅಕ್ರಮ

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ‘ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (ವಿಎಸ್‌ಕೆಯು) 137 ಗುತ್ತಿಗೆ ನೌಕರರಿಗೆ ನಿಗದಿಗಿಂತ ಕಡಿಮೆ ವೇತನ ಪಾವತಿಯಾಗಿದ್ದು, 2020ರ ಜೂನ್‌ನಿಂದ 2022ರ ಜುಲೈವರೆಗೆ (28 ತಿಂಗಳು) ಒಟ್ಟು ₹ 1,07,42,200 ವ್ಯತ್ಯಾಸ ಕಂಡುಬಂದಿದೆ’ ಎಂದು ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಿದೆ.

‘ಗುತ್ತಿಗೆ ನೌಕರರ ವೇತನ ಪಾವತಿಯಲ್ಲಿ ಅಕ್ರಮ ನಡೆದಿದೆ’ ಎಂಬ ‌ದೂರುಗಳ ಹಿನ್ನೆಲೆಯಲ್ಲಿ, ಆರೋಪಗಳ ವಿಚಾರಣೆಗೆ ಸಿಂಡಿಕೇಟ್‌ ಸದಸ್ಯ ಪ್ರೊ. ಎಚ್‌. ಜಯಪ್ರಕಾಶ್‌ಗೌಡರ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು. ಧಾರವಾಡದ ‘ಇಂಡಸ್‌ ಸೆಕ್ಯುರಿಟಿ ಸರ್ವಿಸಸ್‌ & ಡಿಟೆಕ್ಟಿವ್‌‘ ವಿಶ್ವವಿದ್ಯಾಲಯದೊಂದಿಗೆ ಮಾಡಿಕೊಂಡ ಒಪ್ಪಂದಂತೆ ವೇತನ ಪಾವತಿಸದೆ ಇರುವುದು ಕಂಡುಬಂದಿದೆ‘ ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ. ವರದಿ ಪ್ರತಿ ’ಪ್ರಜಾವಾಣಿ‘ಗೆ ಲಭ್ಯವಾಗಿದೆ.

ಒಂದೇ ದರ್ಜೆಯ ಅಂದರೆ, ಡೇಟಾ ಎಂಟ್ರಿ ಆಪರೇಟರ್‌ (ಡಿಇಒ), ಜವಾನ, ಸ್ವೀಪರ್‌, ಸ್ಕ್ಯಾವೆಂಜರ್ಸ್‌ಗೆ ಮಾಸಿಕ ಕ್ರಮವಾಗಿ ₹ 2825 ಹಾಗೂ ₹ 2779 ಕಡಿಮೆ ವೇತನ ಪಾವತಿಸಲಾಗಿದೆ. ಪ್ರತಿ ಡಿಇಓಗೆ ತಿಂಗಳಿಗೆ ₹2825ರ ಪ್ರಕಾರ 62 ಮಂದಿಗೆ ಮಾಸಿಕ ಅಂದಾಜು ₹ 1,75,150ರಂತೆ 28 ತಿಂಗಳಿಗೆ ₹ 49,09,200, ಸ್ಕ್ಯಾವೆಂಜರ್ಸ್‌ ಜವಾನ ಮತ್ತು ಸ್ವೀಪರ್ಸ್‌ಗೆ ₹ 2,780ರಂತೆ 75 ನೌಕರರಿಗೆ ತಿಂಗಳಿಗೆ 2,08,500ರಂತೆ 28 ತಿಂಗಳಿಗೆ ₹ 58,38,000 ಕಡಿಮೆ ಪಾವತಿಸಲಾಗಿದೆ ಎಂದು ವರದಿ ಹೇಳಿದೆ.

‘ಇಂಡಸ್‌ ಸೆಕ್ಯುರಿಟಿ ಸರ್ವಿಸಸ್‌ & ಡಿಟೆಕ್ಟಿವ್‌ ನೌಕರರಿಗೆ ಸೆಪ್ಟೆಂಬರ್‌ನಲ್ಲಿ ₹ 25 ಲಕ್ಷ ವೇತನ ಪಾವತಿಸಿದ್ದು, ವಿಶ್ವವಿದ್ಯಾಲಯವು ಈ ವೇತನದ ಬಾಬ್ತನ್ನು ಗುತ್ತಿಗೆದಾರ ಸಂಸ್ಥೆಗೆ ಮರು ಪಾವತಿ ಮಾಡಿಲ್ಲ. ಅಲ್ಲದೆ, ಗುತ್ತಿಗೆದಾರ ಸಂಸ್ಥೆ ವಿವಿಯಲ್ಲಿ ₹ 20 ಲಕ್ಷ ಭದ್ರತಾ ಠೇವಣಿ ಇಟ್ಟಿದೆ. ಮಿಕ್ಕ ವೇತನದ ವ್ಯತ್ಯಾಸದ  ಹಣವನ್ನು ಏಜೆನ್ಸಿಯಿಂದ ತುಂಬಿಸಿಕೊಳ್ಳಬೇಕು’ ಎಂದೂ ವರದಿ ತಿಳಿಸಿದೆ.

‘ನೌಕರರಿಗೆ ಕಡಿಮೆ ವೇತನ ಪಾವತಿಸಲಾಗಿದೆ’ ಎಂದು ಹೇಳಿರುವ ಸತ್ಯಶೋಧನಾ ಸಮಿತಿಯು ವರದಿಯಲ್ಲಿ ಎಲ್ಲೂ ’ಅಕ್ರಮ ನಡೆದಿದೆ‘ ಎಂಬ ವಾಕ್ಯ ಬಳಸಿಲ್ಲ. ಅಲ್ಲದೆ, ವಿಶ್ವವಿದ್ಯಾಲಯದ ಯಾವ ಅಧಿಕಾರಿ ಮೇಲೂ ಹೊಣೆಗಾರಿಕೆ ನಿಗದಿಪಡಿಸದಿರುವುದು ಅಚ್ಚರಿ ಹುಟ್ಟಿಸಿದೆ.

ವರದಿ ನಾಲ್ಕನೇ ಪ್ಯಾರಾದಲ್ಲಿ, ‘ಧಾರವಾಡದ ಏಜೆನ್ಸಿಯೊಂದಿಗೆ ವಿವಿ ಮಾಡಿಕೊಂಡ ಒಪ್ಪಂದದ ನಿಯಮ 11 ಮತ್ತು 12ರ ಅನ್ವಯ ನೌಕರರ ಸಂಬಳದ ವಿವರಗಳನ್ನು ವಿಶ್ವವಿದ್ಯಾಲಯದಕ್ಕೆ ಸಲ್ಲಿಸಬೇಕು. ಈ ವಿವರಗಳನ್ನು ಹಣಕಾಸು ವಿಭಾಗ ಪರಿಶೀಲಿಸಬೇಕು‘ ಎಂಬ ಪ್ರಸ್ತಾಪವಿದೆ. ಆದರೆ, ಸಂಬಳದ ವಿವರಗಳನ್ನು ಸಂಸ್ಥೆಯೂ ನೀಡಿಲ್ಲ. ಹಣಕಾಸು ವಿಭಾಗವೂ ಕೇಳಿಲ್ಲ‘ ಎಂಬುದು ಗಮನಿಸಬೇಕಾದ ಅಂಶ

ಹೊರಗುತ್ತಿಗೆ ನೌಕರರಿಗೆ ಕಡಿಮೆ ವೇತನ ಪಾವತಿಸುವ ಮೂಲಕ ಗುತ್ತಿಗೆದಾರ ಸಂಸ್ಥೆ ವಿಶ್ವವಿದ್ಯಾಲಯದ ಜತೆ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಿದೆ. ಈ ಕಾರಣಕ್ಕೆ ಸಂಸ್ಥೆಯಿಂದ ನೌಕರರಿಗೆ ಬರಬೇಕಾದ ವೇತನ, ಸವಲತ್ತುಗಳ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿದೆ.

ಸಿಂಡಿಕೇಟ್‌ ಸದಸ್ಯರಾದ ಪದ್ಮಾ ಎಚ್‌. ವಿಠಲ್‌, ನರಸಿಂಹ ರಾಯಚೂರು, ಯು.ಬಿ. ಉಳವಿ ಸಮಿತಿ ಸದಸ್ಯರಾಗಿದ್ದರು. ಉಪ ಕುಲಸಚಿವ ಶಶಿಕಾಂತ ಮಜ್ಜಗಿ ಸದಸ್ಯ ಕಾರ್ಯದರ್ಶಿ ಆಗಿದ್ದರು.

ಸಿಂಡಿಕೇಟ್‌ ಸದಸ್ಯರಿಂದ ಸಿಕ್ಕ ನ್ಯಾಯ
ಹೊರಗುತ್ತಿಗೆ ನೌಕರರಿಗೆ ಪಾವತಿಸುತ್ತಿರುವ ವೇತನದಲ್ಲಿ ಅಕ್ರಮ ನಡೆಯುತ್ತಿದೆ‘ ಎಂದು ಆರೋಪಿಸಿ ಸಿಂಡಿಕೇಟ್‌ ಸದಸ್ಯ ಮಲ್ಲಿಕಾರ್ಜುನ ಮರ್ಚಡ್‌ಗೌಡ, ರಿಜಿಸ್ಟ್ರಾರ್‌ ಪ್ರೊ. ಎಸ್‌.ಸಿ. ಪಾಟೀಲ ಅವರಿಗೆ ಪತ್ರ ಬರೆದಿದ್ದರು. ಈ ಅಕ್ರಮ ತನಿಖೆಗೆ ಸಮಿತಿ ರಚಿಸುವಂತೆ ಆಗ್ರಹಿಸಿದ್ದರು.

ಸಿಂಡಿಕೇಟ್‌ನ ಅನೇಕ ಸದಸ್ಯರು ಅವರಿಗೆ ಬೆಂಬಲವಾಗಿದ್ದರು. ಈ ಕುರಿತು ‘ಪ್ರಜಾವಾಣಿ‘ ಅನೇಕ ವರದಿಗಳನ್ನು ಪ್ರಕಟಿಸಿತ್ತು. ಜಯಪ್ರಕಾಶ್‌ಗೌಡರ ಸಮಿತಿ ವರದಿಯಲ್ಲೂ,, ಪತ್ರಿಕೆ ವರದಿ ಕುರಿತು ಪ್ರಸ್ತಾಪಿಸಿದೆ. ಸಿಂಡಿಕೇಟ್‌ ಸದಸ್ಯರ ಹೋರಾಟದಿಂದ ಗುತ್ತಿಗೆ ನೌಕರರಿಗೆ ನ್ಯಾಯ ಸಿಕ್ಕಂತಾಗಿದೆ.

ಜುಲೈ 20ರಂದು ಸಂಡೂರಿನ ನಂದಿಹಳ್ಳಿ ಕ್ಯಾಂಪಸ್‌ನಲ್ಲಿ ನಡೆದ ಸಿಂಡಿಕೇಟ್‌ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು. ಹೊರಗುತ್ತಿಗೆ ನೌಕರರನ್ನು ಒದಗಿಸುವ  ಗುತ್ತಿಗೆದಾರ ಸಂಸ್ಥೆಯನ್ನು  ಮುಂದುವರಿಸಬೇಕೇ, ಬೇಡವೇ ಎಂಬ ವಿಷಯದಲ್ಲಿ ಎರಡು ಗುಂಪುಗಳಾಗಿತ್ತು. ಅಂತಿಮವಾಗಿ ಮತದಾನ ನಡೆದಿತ್ತು. ಗುತ್ತಿಗೆ ರದ್ದುಪಡಿಸಲು ಹೆಚ್ಚು ಸದಸ್ಯರು ಒಲವು ತೋರಿದ್ದರು. 

ಹಣ ಬಿಡುಗಡೆಗೆ ಹೊಣೆ ಯಾರು?
ಈ ತಿಂಗಳ 25ರಂದು  ಸೇರಿದ್ದ ಸಿಂಡಿಕೇಟ್‌ ಸಭೆಯಲ್ಲಿ ಜಯಪ್ರಶಾಶ್‌ಗೌಡರ ಸಮಿತಿ ವರದಿ ಚರ್ಚೆಯಾಯಿತು. ಮಲ್ಲಿಕಾರ್ಜುನ ಮರ್ಚೇಡ್‌ಗೌಡ ಮತ್ತಿತರ ಸದಸ್ಯರು ಪ್ರತಿಯೊಬ್ಬ ನೌಕರರ ವೇತನದ ವಿವರಗಳನ್ನು ನೀಡದಿದ್ದರೂ ‌ಗುತ್ತಿಗೆದಾರ ಸಂಸ್ಥೆಗೆ ಹಣ ಬಿಡುಗಡೆ ಮಾಡಿರುವುದಕ್ಕೆ ಆಕ್ಷೇಪಿಸಿದರು.

ವಿವಿ ಮತ್ತು ಗುತ್ತಿಗೆದಾರ ಸಂಸ್ಥೆಯ ಒಪ್ಪಂದದ 14ನೇ ಉಪಬಂಧದ ಅನ್ವಯ ಪ್ರತಿ ನೌಕರರ ವೇತನದ ವಿವರ ಸಲ್ಲಿಕೆ ಕಡ್ಡಾಯ. ವಿವರಗಳನ್ನು ಸಲ್ಲಿಸದಿದ್ದರೂ 28 ತಿಂಗಳು ಸಂಸ್ಥೆಗೆ ಹಣ ಪಾವತಿ ಮಾಡಿದ್ದು ಹೇಗೆ? ಇದರ ಹೊಣೆ ಯಾರು ಹೊರಬೇಕು? ಹಣಕಾಸು ಅಧಿಕಾರಿ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಈ ವಿಷಯವನ್ನು ಉನ್ನತ ಮೂಲಗಳು ’ಪ್ರಜಾವಾಣಿ‘ಗೆ ಖಚಿತಪಡಿಸಿವೆ. ಸಿಂಡಿಕೇಟ್‌ ಸದಸ್ಯರು ಎತ್ತಿದ ಪ್ರಶ್ನೆಗೆ ಸಮಿತಿ ವರದಿಯಲ್ಲಿ ಉತ್ತರವಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು