ಬಳ್ಳಾರಿ: ಬಿತ್ತನೆಗೆ ಪ್ರಾಶಸ್ತವಾದ ಜೂನ್ ಕೊನೇ ವಾರದಿಂದ ಈ ವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದೆ. ಮಳೆ ಕೈಕೊಟ್ಟರೂ, ಜೀವನಾಡಿ ತುಂಗಭದ್ರಾ ಜಲಾಶಯ ನಮ್ಮ ಕೈಬಿಡುವುದಿಲ್ಲ ಎಂದು ನಂಬಿದ್ದ ರೈತರಿಗೆ ಸದ್ಯ ಆಘಾತವುಂಟಾಗಿದೆ.
ಶನಿವಾರ ಸಂಜೆಯಷ್ಟೇ 105 ಟಿಎಂಸಿ ನೀರಿನೊಂದಿಗೆ ತುಂಗಭದ್ರಾ ಜಲಾಶಯ ತುಂಬಿ ತುಳುಕುತ್ತಿತ್ತು. ಒಂದು ಬೆಳೆಯಲ್ಲ... ಈ ಭಾರಿ ಎರಡನೇ ಬೆಳೆಗೂ ಜಲಾಶಯ ನೀರುಣಿಸುತ್ತದೆ ಎಂಬ ದೃಢವಾದ ನಂಬಿಕೆಯಲ್ಲಿ ರೈತರಿದ್ದರು. ಆದರೆ, ರಾತ್ರಿ 10.50ರಲ್ಲಿ ಸಂಭವಿಸಿರುವ ಅವಘಡವೊಂದು ಆ ನಂಬಿಕೆಗೆ ಭಂಗ ತಂದಿದೆ.
ಜಲಾಶಯದ 19ನೇ (ಕರ್ನಾಟಕ ಭಾಗದ) ಗೇಟ್, ಸರಪಳಿ ಕಳಚಿಕೊಂಡು ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ನೀರು ಅನಿಯಂತ್ರಿತವಾಗಿ ನದಿಗೆ ಹರಿದು ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಹರಿದುಬರಲಿರುವ ನೀರು ಸಂಗ್ರಹಿಸಿಟ್ಟುಕೊಳ್ಳಬೇಕಿದ್ದರೆ ಗೇಟ್ ದುಸ್ತಿಯಾಗಬೇಕು. ಗೇಟ್ ದುರಸ್ತೆಯಾಗಬೇಕಿದ್ದರೆ ಸದ್ಯ ಜಲಾಶಯದಲ್ಲಿನ 20 ಅಡಿಯಷ್ಟು ನೀರನ್ನು ಖಾಲಿ ಮಾಡಬೇಕಾದ ಸಂದಿಗ್ಧತೆ ಸದ್ಯ ಎದುರಾಗಿದೆ. ಅಂದರೆ ಹೆಚ್ಚುಕಡಿಮೆ 60 ಟಿಎಂಸಿ ನೀರು ಖಾಲಿ ಮಾಡಬೇಕು ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳಿದ್ದಾರೆ.
ಇದರೊಂದಿಗೆ ಎರಡನೇ ಬೆಳೆಯ ನಿರೀಕ್ಷೆ ಇರಲಿ, ಮೊದಲೇ ಬೆಳೆಗೆ ನೀರಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ. ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಈ ತಿಂಗಳಿಂದ ಬಿತ್ತನೆ, ನಾಟಿ ಆರಂಭವಾಗಿದ್ದವು. ಅಂದಾಜು ಶೇ 45 ರಿಂದ ಶೇ 50 ಬಿತ್ತನೆ, ನಾಟಿ ಆಗಿತ್ತು. ಇನ್ನೂ ಕೆಲ ರೈತರು ಈಗಷ್ಟೇ ಬಿತ್ತನೆ ಮಾಡಲು ಸಿದ್ಧತೆಯಲ್ಲಿ ತೊಡಗಿದ್ದರು. ಹೀಗಾಗಿ ಬೆಳೆ ರಕ್ಷಣೆ, ಬಿತ್ತನೆ ಮೇಲೆ ತುಂಗಭದ್ರಾದಲ್ಲಿನ ಅವಘಡ ಕಾರ್ಮೋಡ ಕವಿಯುವಂತೆ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೃಷಿ ಇಲಾಖೆಯ ಉಪ ನಿರ್ದೇಶಕ ಕೆಂಗೇಗೌಡ, ‘ತುಂಗಭದ್ರಾ ಜಲಾಶಯದಲ್ಲಿ ಸಂಭವಿಸಿರುವ ಅವಘಡ ಜಿಲ್ಲೆಯ ಕೃಷಿ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ಖಚಿತವಾಗಿ ಹೇಳುವುದು ಈ ಸಂದರ್ಭದಕ್ಕೆ ಕಷ್ಟ. ಒಂದು ವೇಳೆ ನೀರು ಖಾಲಿಯಾದರೆ, ಮುಂಗಾರು ಹಂಗಾಮಿನ ಬೆಳೆಗೇ ನೀರು ಹೊಂದಿಸುವುದು ಕಷ್ಟವಾಗುವುದಂತೂ ನಿಶ್ಚಿತ. ಇನ್ನು ಎರಡು ದಿನದಲ್ಲಿ ಏನಾಗಲಿದೆ, ಎಷ್ಟು ನೀರು ಖಾಲಿಯಾಗಲಿದೆ, ಎಷ್ಟು ನೀರು ಉಳಿಯುತ್ತದೆ, ಎಷ್ಟು ನೀರು ನಮಗೆ ದಕ್ಕಲಿದೆ ಎಂಬುದು ಮುಖ್ಯವಾಗುತ್ತದೆ. ಜಿಲ್ಲೆಯಲ್ಲಿ ಸದ್ಯ ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಈಗಾಗಲೇ ಶೇ 50ರಷ್ಟು ಬಿತ್ತನೆಯಾಗಿದೆ. ಇನ್ನುಳಿದ ಪ್ರದೇಶದಲ್ಲಿ ಬಿತ್ತನೆ, ನಾಟಿ ಕಾರ್ಯ ಭರದಿಂದ ಸಾಗುತ್ತಿದೆ. ನೀರು ಅಲಭ್ಯವಾದರೆ ಬಿತ್ತನೆ ಮೇಲೆ ಪರಿಣಾಮ ಬೀರುತ್ತದೆ. ಅದೇ ವೇಳೆ ಬೆಳೆ ರಕ್ಷಣೆಗೂ ಸಮಸ್ಯೆಯಾಗುತ್ತದೆ. ಹಾಗೊಂದು ವೇಳೆ ಜಲಾಶಯದಲ್ಲಿ ನೀರು ಗಣನೀಯ ಪ್ರಮಾಣದಲ್ಲಿ ಕುಸಿದರೆ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ನಾವು ಸಲಹೆ ನೀಡಲಿದ್ದೇವೆ. ಆದರೆ, ಈಗಲೇ ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ’ ಎಂದಿದ್ದಾರೆ.
ಡ್ಯಾಂ, ನೀರು ಉಳಿಸುವುದೇ ಆದ್ಯತೆ
‘ನೀರು ವ್ಯರ್ಥವಾಗುತ್ತಿದೆ ಎಂಬ ನೋವು ಎಂಜಿನಿಯರ್‌ಗಳಿಗೂ ಇರುತ್ತದೆ. ತುಂಗಭದ್ರಾ ಜಲಾಶಯ ಮತ್ತು ನೀರನ್ನು ಉಳಿಸಿಕೊಳ್ಳುವುದೇ ಎಂಜಿನಿಯರ್‌ಗಳ ಆದ್ಯತೆಯಾಗಿರಲಿದೆ’ ಎಂದು ತುಂಗಭದ್ರಾ ಜಲಾಶಯದ ಎಸ್‌ಇ (ಸೂಪರಿಂಟೆಂಡೆಂಟ್ ಇಂಜಿನಿಯರ್) ಗೋವಿಂದಲು ಅಭಿಪ್ರಾಯಪಟ್ಟಿದ್ದಾರೆ.
‘ವ್ಯರ್ತವಾಗಿ ಹೋಗುವ ಒಂದೊಂದು ಹನಿ ನೀರು ಎಂಜಿನಿಯರ್‌ಗಳಿಗೆ ಒಡ್ಡುವ ಸವಾಲೇ ಸರಿ. ಅದೆಂಥದ್ದೇ ಹಂತದಲ್ಲೂ ಎಂಜಿನಿಯರ್‌ಗಳು ಗೇಟ್ ದುರಸ್ತಿಗೊಳಿಸುವ ವಿಶ್ವಾಸವಿದೆ. ಗೇಟ್ ಸರಿಪಡಿಸಬೇಕೇದ್ದರೆ 20 ಅಡಿಯಷ್ಟು ನೀರು ಖಾಲಿ ಮಾಡಬೇಕು. ಆಗ ನಮಗೆ ಉಳಿಯುವುದು 40–45 ಟಿಎಂಸಿ ನೀರು ಮಾತ್ರ. ಆ ನೀರು ಕೇವಲ 45–50 ದಿನಗಳಲ್ಲಿ ಖಾಲಿಯಾಗುತ್ತದೆ. ಇದರಲ್ಲಿ ಯಾವ ಬೆಳೆಯನ್ನೂ ಬೆಳೆಯಲು ಸಾಧ್ಯವಾಗುವುದಿಲ್ಲ. ಆದರೆ, ಗಮನಿಸಬೇಕಾದ ವಿಷಯವೆಂದರೆ ನಮಗೆ ಇನ್ನೂ ಮಳೆಗಾಲದ ದಿನಗಳಿವೆ. ಸದ್ಯ ಒಳಹರಿವೂ ಚೆನ್ನಾಗಿದೆ. ದುರಸ್ತಿಯಾದ ಕೂಡಲೇ ಜಲಸಂಗ್ರಹ ಸಾಧ್ಯವಾಗುತ್ತದೆ. ನದಿ ಮೇಲಿನ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರು ಲಭ್ಯವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಂಗಭದ್ರೆಯೇ ಆಧಾರ
ಜಿಲ್ಲೆಯಲ್ಲಿ ಈ ಬಾರಿ ಒಟ್ಟಾರೆ 1,73,896 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿ ಹೊಂದಾಗಲಾಗಿದೆ. ಇದರಲ್ಲಿ ಮಳೆಯಾಶ್ರಿತ ಪ್ರದೇಶದ 64953 ಹೆಕ್ಟೇರ್ (ಶೇ 37.36) ಆಗಿದ್ದರೆ, ಮಳೆಯಾಶ್ರಿತ ಪ್ರದೇಶ 1,08,943 (ಶೇ62.64). ಇದಕ್ಕೆ ತುಂಗಭದ್ರೆಯೇ ಆಧಾರ.
ಅಕ್ಟೋಬರ್, ನವೆಂಬರ್‌ನಲ್ಲಿ ಹೆಚ್ಚುವರಿ ಮಳೆ ಬರದಿದ್ದಲ್ಲಿ ಬೇಸಿಗೆ ಬೆಳೆಗೆ ನೀರು ಸಿಗುವುದಿಲ್ಲ. ಆಣೆಕಟ್ಟಿನ ಗೇಟ್ ಮುರಿದು ಬಿದ್ದಿರುವುದು ರೈತರಿಗೆ ಆತಂಕಕಾರಿ ವಿಷಯವಾಗಿದೆ. ನೀರಾವರಿ ತಜ್ಞರು ಬೇಗನೇ ಗೇಟನ್ನು ಸರಿಪಡಿಸಿ ರೈತರ ಆತಂಕ ನಿವಾರಿಸಬೇಕು.–ಪುರುಷೋತ್ತಮ ಗೌಡ, ರೈತ ಮುಖಂಡ
ಸರಪಳಿ ತುಂಡಾಗಲು ಸರ್ಕಾರ, ಅಧಿಕಾರಿಗಳ ನಿರ್ಲಕ್ಷ ಕಾರಣ. ಜಲಾಶಯಕ್ಕೆ ನೀರು ಬರುವ ಮುನ್ನ ಅದರ ಪರಿಸ್ಥಿತಿ ಬಗ್ಗೆ ನಿಗಾ ವಹಿಸಿ, ಘಟಕವನ್ನು ಸೂಕ್ಷ್ಮವಾಗಿ ಪರೀಕ್ಷಿಸಿ, ಸಮಸ್ಯೆ ಕಂಡು ಬಂದಲ್ಲಿ ಸರಿಪಡಿಸಲು ಪ್ರಯತ್ನಗಳು ಆಗಿಬೇಕಿತ್ತು.ಕಾ.ಎಂ.ಶಶಿಧರ್ ಮತ್ತು ಬಿ.ಭಗವಾನ್ ರೆಡ್ಡಿ, ಎಐಕೆಕೆಎಂಎಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.