ಮಣ್ಣು ರಕ್ಷಣೆಗೆ ಹಸಿರೆಲೆ ಗೊಬ್ಬರ ಬೆಳೆಯಲು ಸಲಹೆ
‘ತುಂಗಭದ್ರಾ ಬಲದಂಡೆ ಕೆಳಮಟ್ಟ ಕಾಲುವೆ ವ್ಯಾಪ್ತಿಯ ರೈತರಿಗೆ ಎರಡನೇ ಬೆಳೆಗೆ ನೀರು ಪೂರೈಕೆ ಇಲ್ಲದ ಕಾರಣ ಗದ್ದೆಯಲ್ಲಿ ಹಸಿರೆಲೆ ಗೊಬ್ಬರಗಳಾದ ಸೆಣಬು ಡಯಾಂಚ ಪಿಳ್ಳೆಪೆಸರು ಬೆಳೆದಲ್ಲಿ ಮಣ್ಣಿನ ಫಲವತ್ತತೆಗೆ ಅನುಕೂಲವಾಗಲಿದೆ’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕೆ. ಸೋಮಶೇಖರ್ ತಿಳಿಸಿದರು. ‘ಮಣ್ಣಿನ ಆರೋಗ್ಯ ಕಾಪಾಡಲು ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಬೇಕಾಗಿದ್ದು ಪ್ರತಿಯೊಬ್ಬ ರೈತರು ಮುತುವರ್ಜಿ ವಹಿಸಬೇಕು. ಮಣ್ಣಿನಲ್ಲಿರುವ ಸೂಕ್ಷ್ಮ ಜೀವಕೋಶಗಳು ಹಾಳಾಗದಂತೆ ನೋಡಿಕೊಳ್ಳಬೇಕು. ತಾವು ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನದಾಗಿ ಬಳಕೆ ಮಾಡುವ ರಾಸಾಯನಿಕ ಬಳಕೆ ಬದಲಾಗಿ ಸಾವಯವಗೊಬ್ಬರ ಉಪಯೋಗಿಸಬೇಕು. ಮಣ್ಣು ಸವಕಳಿಯಾಗದಂತೆ ಸಂರಕ್ಷಿಸುವ ಜವಾಬ್ದಾರಿ ಎಲ್ಲ ರೈತರ ಮೇಲಿದೆ’ ಎಂದರು.