ಬುಧವಾರ, ಮಾರ್ಚ್ 29, 2023
25 °C
ತಿಂಗಳೊಳಗೆ ಶುದ್ಧ ಕುಡಿಯುವ ನೀರು ಪೂರೈಸಲು ಸೂಚನೆ

ಮಹಿಳೆ ಸಾವು; ಲೋಕಾಯುಕ್ತ ಎಸ್ಪಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕಲುಷಿತ ನೀರು ಸೇವಿಸಿ ಮಹಿಳೆ ಮೃತಪಟ್ಟು, ಅನೇಕರು ಅಸ್ವಸ್ಥಗೊಂಡಿರುವ ಪ್ರಕರಣ ಸಂಬಂಧ ಲೋಕಾಯುಕ್ತ ಎಸ್ಪಿ ಪುರುಷೋತ್ತಮ್‌ ಅವರು ಶುಕ್ರವಾರ ನಗರದ ರಾಣಿಪೇಟೆ ಹಾಗೂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲು ನಗರದ ರಾಣಿಪೇಟೆಗೆ ತೆರಳಿ ಸ್ಥಳೀಯರ ಆರೋಗ್ಯ ವಿಚಾರಿಸಿದರು. ಟ್ಯಾಂಕರ್‌ ಮೂಲಕ ಶುದ್ಧ ಕುಡಿಯುವ ನೀರಿನ ಪೂರೈಕೆಯಾಗುತ್ತಿದೆಯೇ? ಆರೋಗ್ಯ ಇಲಾಖೆಯವರು ಎಲ್ಲ ರೀತಿಯ ಚಿಕಿತ್ಸೆ, ಔಷಧ ನೀಡುತ್ತಿದ್ದಾರೆಯೇ? ತಾತ್ಕಾಲಿಕವಾಗಿ ತೆಗೆದಿರುವ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಇರುತ್ತಾರೆಯೇ? ರೋಗಿಗಳು ಹೋದರೆ ಉಪಚಾರ ಮಾಡುತ್ತಾರೆಯೇ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಜನರಿಗೆ ಕೇಳಿ ಮಾಹಿತಿ ಪಡೆದರು.

ಅದಾದ ನಂತರ ಅವರು ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದರು. ವೈದ್ಯರು ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆಯೇ? ಔಷಧಿಗೆ ಯಾರಾದರೂ ಹಣ ಕೇಳುತ್ತಿದ್ದಾರೆಯೇ? ಎಂದೆಲ್ಲ ಕೇಳಿದರು.

‘ಕಲುಷಿತ ನೀರು ಸೇವನೆಯಿಂದಲೇ ಅನೇಕರು ಅಸ್ವಸ್ಥರಾಗಿದ್ದಾರೆ. ಒಂದು ತಿಂಗಳೊಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು’ ಎಂದು ನಗರಸಭೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸಲೀಂ, ನಗರಸಭೆಯ ಅಧಿಕಾರಿಗಳಿದ್ದರು.

ಮತ್ತೆ ಮೂವರು ಆಸ್ಪತ್ರೆಗೆ:

ಕಲುಷಿತ ನೀರು ಸೇವನೆ ಹಿನ್ನೆಲೆಯಲ್ಲಿ ಶುಕ್ರವಾರ ರಾಣಿಪೇಟೆಯ 24 ಜನ ಅಸ್ವಸ್ಥರಾಗಿದ್ದು, ಮೂವರು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಿಕ್ಕುಳಿದವರು ಚಿಕಿತ್ಸೆ ಪಡೆದು ಮನೆಯಲ್ಲೇ ಇದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 15ಕ್ಕೆ ಏರಿದೆ. ಒಟ್ಟು ಅಸ್ವಸ್ಥರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ. ದಿನೇ ದಿನೇ ಹೊಸ ಹೊಸ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹೀಗಾಗಿಯೇ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ರಾಣಿಪೇಟೆಯಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಜ. 6ರಿಂದ ರಾಣಿಪೇಟೆಯಲ್ಲಿ ಅಶುದ್ಧ ನೀರು ಪೂರೈಕೆಯಾಗುತ್ತಿದ್ದು, ಸ್ಥಳೀಯ ನಿವಾಸಿ ಲಕ್ಷ್ಮಿದೇವಿ ಎಂಬುವರು ಮೃತಪಟ್ಟಿದ್ದರು. ಅನೇಕರು ಅಸ್ವಸ್ಥರಾಗಿದ್ದಾರೆ. ಘಟನೆ ಸಂಬಂಧ ಜಿಲ್ಲಾಧಿಕಾರಿಯವರು ಐದು ಜನ ಅಧಿಕಾರಿಗಳಿಗೆ ಗುರುವಾರ ಕಾರಣ ಕೇಳಿ ನೋಟಿಸ್‌ ನೀಡಿದ್ದರು. ನಲ್ಲಿ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದ್ದು, ಟ್ಯಾಂಕರ್‌ನಿಂದ ನೀರು ಪೂರೈಸಲಾಗುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು