ಶನಿವಾರ, ಜನವರಿ 23, 2021
19 °C

‘ಮಾದಕ ವಸ್ತುಗಳ ಬಳಕೆ ದೇಶಕ್ಕೆ ಮಾರಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಈಗಿನ ಯುವ ಜನಾಂಗ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ತಮ್ಮ ಪ್ರತಿಷ್ಠೆಯ ಸಂಕೇತವಾಗಿ ಮಾದಕ ವಸ್ತುಗಳನ್ನು ಬಳಸುತ್ತಿದ್ದು, ಇದರಿಂದ ಆರೋಗ್ಯಕ್ಕೆ ಹಾನಿ ಹಾಗೂ ದೇಶದ ಅಭಿವೃದ್ಧಿಗೂ ಮಾರಕ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ತಿಳಿಸಿದರು.

ವಿಶ್ವವಿದ್ಯಾಲಯದ ಕಾನೂನು ಕಾಲೇಜು ಮತ್ತು ಕಾನೂನು ಅಧ್ಯಯನ ವಿಭಾಗಗಳ ಆಶ್ರಯದಲ್ಲಿ ಆನ್‌ಲೈನ್‌ ಮೂಲಕ ಸೋಮವಾರ ಆಯೋಜಿಸಿದ್ದ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಚಟುವಟಿಕೆಗಳ ಉದ್ಘಾಟನೆ ಹಾಗೂ ‘ಮಾದಕ ವಸ್ತುಗಳ ತಡೆಗಟ್ಟುವಿಕೆ–ಮನೋವೈಜ್ಞಾನಿಕ ಹಾಗೂ ಕಾನೂನಿನ ದೃಷ್ಟಿಕೋನಗಳು’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಯುವಕರು ತಮ್ಮ ಆಲೋಚನೆಗಳನ್ನು ಬದಲಾಯಿಸಿಕೊಂಡು ಉತ್ತಮ ಯೋಗ, ಪ್ರಾಣಾಯಾಮ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಗ್ರಾಮೀಣ ಭಾಗಗಳಲ್ಲಿ ಮಾದಕ ವಸ್ತುಗಳ ವ್ಯತಿರಿಕ್ತ ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು’ ಎಂದರು.

ಕಾನೂನು ಕಾಲೇಜಿನ ಪ್ರಾಂಶುಪಾಲ ಸುರೇಶ್ ವಿ.ನಾಡಗೌಡ, ‘ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಅರಿವು ಜನರಿಗೆ ಅಗತ್ಯ. ಮದ್ಯಪಾನ ಹಾಗೂ ಮಾದಕ ವಸ್ತುಗಳನ್ನು ನಿಯಂತ್ರಿಸುವಲ್ಲಿ ಸರ್ಕಾರದ ಪಾತ್ರವೂ ಅಗತ್ಯ. ರಾಜ್ಯದಲ್ಲಿ ಮಾದಕ ವಸ್ತುಗಳ ತಡೆಗೆ ಸಂಬಂಧಿಸಿದ ನಿಯಮಗಳ ಕ್ರಮಬದ್ಧ ಅನುಷ್ಠಾನ ಆಗಬೇಕಿದೆ’ ಎಂದು ಹೇಳಿದರು.

ಕಾನೂನು ಅಧ್ಯಯನ ವಿಭಾಗದ ಡೀನ್‌ ಪ್ರೊ.ದಶರಥ್, ‘ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕಾಗಿದೆ. ಅವುಗಳನ್ನು ತಡೆಗಟ್ಟುವಲ್ಲಿ ವೈದ್ಯರು ಮತ್ತು ವಕೀಲರ ಪಾತ್ರ ಬಹುಮುಖ್ಯ’ ಎಂದರು.

ಬೆಂಗಳೂರು ವಿದ್ಯಾಲಯದ ಎನ್ಎಸ್ಎಸ್ ಸಂಯೋಜನಾಧಿಕಾರಿ ಎನ್.ಸತೀಶ್ ಗೌಡ, ಡಾ.ಎಲ್.ಚಂದ್ರಕಾಂತಿ, ಪ್ರಾಧ್ಯಾಪಕ ವಿ.ಸುದೇಶ್, ಮನೋವೈದ್ಯ ಡಾ.ಲೋಕೇಶ್ ಬಾಬು ಹಾಗೂ ಹೈಕೋರ್ಟ್‌ ವಕೀಲ ಜಿ.ಪುರುಷೋತ್ತಮ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.