ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಗೃಹ ಸಚಿವ ವಜಾಗೆ ಆಗ್ರಹ

Last Updated 6 ಜನವರಿ 2018, 6:42 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮಹಾರಾಷ್ಟ್ರದ ಭೀಮಾ ಕೋರೆಂಗಾವ್‌ ವಿಜಯೋತ್ಸವದ ವೇಳೆ ನಡೆದ ಹಿಂಸಾಚಾರವನ್ನು ಖಂಡಿಸಿ ಹಾಗೂ ಘಟನೆಯ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸುತ್ತಿರುವ ಮಹಾರಾಷ್ಟ್ರದ ಗೃಹ ಸಚಿವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಹಳೆ ಬಸ್ ನಿಲ್ದಾಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗದಿಂದ ತಾಲ್ಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಹಿರಿಯ ದಲಿತ ಮುಖಂಡ ಜಿ.ಲಕ್ಷ್ಮೀಪತಿ, ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಮಹಾರಾಷ್ಟ್ರದ ಭೀಮಾ–ಕೋರೆಂಗಾವ್‌ನಲ್ಲಿ 1818ರಲ್ಲಿ ಪೇಶ್ವೆ ಬಾಜೀರಾಯನ ಆಡಳಿತದ ವಿರುದ್ಧ ಶೋಷಿತರು ವಿಮೋಚನೆಗಾಗಿ ನಡೆದ ಸಂಗ್ರಾಮದ ವಿಜಯೋತ್ಸವದ ನೆನಪಿಗಾಗಿ ಕಾರ್ಯಕ್ರಮ ನಡೆಸುತ್ತಿದ್ದರು ಎಂದರು.

ಇದೇ ವೇಳೆ ದಲಿತ ಸಮುದಾಯದವರ ಮೇಲೆ ಮಹಾರಾಷ್ಟ್ರದ ಮರಾಠ ಸಮುದಾಯದ ಕೆಲವು ಪುಂಡರು ಗಲಭೆ ಸೃಷ್ಟಿಸಿ, ಕಿಡಿ ಹಚ್ಚಿ, ಯುವಕನ ಹತ್ಯೆಗೆ ಕಾರಣರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿವರ್ಷ ವಿಜಯೋತ್ಸವ ಸಂದರ್ಭದಲ್ಲಿ ತೊಂದರೆ ನೀಡುತ್ತಲೇ ಬಂದಿದ್ದಾರೆ. ಇಷ್ಟಾಗಿಯೂ ಮಹಾರಾಷ್ಟ್ರ ಸರ್ಕಾರ ಸಮುದಾಯದ ಕಾರ್ಯಕ್ರಮಗಳಿಗೆ ಸೂಕ್ತ ರಕ್ಷಣೆ ನೀಡದೇ ಪರೋಕ್ಷವಾಗಿ ಕಿಡಿಗೇಡಿಗಳನ್ನು ಬೆಂಬಲಿಸುತ್ತಿದೆ ಎಂದರು.

ಹತ್ಯೆಗೀಡಾದ ಕಾರ್ಯಕರ್ತನ ಕುಟುಂಬಕ್ಕೆ ₹ 20 ಲಕ್ಷ ಪರಿಹಾರ ನೀಡಬೇಕು. ಘಟನೆಯ ಸಂಪೂರ್ಣ ಹೊಣೆಯನ್ನು ಮಹಾರಾಷ್ಟ್ರ ಸರ್ಕಾರ ಹೊರಬೇಕು ಎಂದರು. ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ವಜಾ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡ ರಾಜು ಸಣ್ಣಕ್ಕಿ, ಭೋವಿ ಸಮುದಾಯದ ತಾಲ್ಲೂಕು ಅಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ, ನಗರಸಭಾ ಸದಸ್ಯ ಮಲ್ಲಿಕಾರ್ಜುನ್, ಕಾಂಗ್ರೆಸ್‌ ಎಸ್ಸಿ ನಗರ ಘಟಕದ ಅಧ್ಯಕ್ಷ ಬಿ.ಮುನಿರಾಜು, ಜಿಲ್ಲಾ ಉಪಾದ್ಯಕ್ಷ ರಮೇಶ್‌, ದಲಿತ ಮುಖಂಡರಾದ ಡಿ.ವಿ.ಅಶ್ವತ್ಥಪ್ಪ, ಗುರುರಾಜಪ್ಪ, ರಾಮಲಿಂಗಯ್ಯ, ಹನುಮಣ್ಣ, ಮದ್ದೂರಪ್ಪ, ತಳವಾರ ನಾಗರಾಜ್, ಮುನಿರಾಜು,ಕಾಂತರಾಜು, ಮುನಿಯಪ್ಪ, ನವೀನ್‌ ರಾಜಘಟ್ಟ, ಟಿಎಪಿಎಂಸಿಎಸ್‌ ನಿರ್ದೇಶಕ ಆನಂದ್‌, ಪಿವಿಸಿಯ ಮುನಿಕೃಷ್ಣಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT