ಮಂಗಳವಾರ, ಸೆಪ್ಟೆಂಬರ್ 28, 2021
22 °C
ಬಿಜೆಪಿ ವಿರುದ್ಧ ಶಾಸಕ ಟಿ. ವೆಂಕಟರಮಣಯ್ಯ ಆರೋಪ

₹ 8 ಕೋಟಿ ಬಿಡುಗಡೆಗೆ ಅಡ್ಡಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ‘ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ನಗರಸಭೆಗೆ ಮಂಜೂರಾಗಿದ್ದ ನಗರೋತ್ಥಾನ ಅನುದಾನ ತಡೆ ಹಿಡಿದಿರುವುದು ಸೇರಿದಂತೆ ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ನಗರಕ್ಕೆ ಮಂಜೂರಾಗಿರುವ ಅನುದಾನದ ಪಟ್ಟಿಯನ್ನು ಬಿಜೆಪಿ ಮುಖಂಡರು ಸಾಬೀತುಪಡಿಸಲಿ’ ಎಂದು ಶಾಸಕ ಟಿ. ವೆಂಕಟರಮಣಯ್ಯ ಸವಾಲು ಹಾಕಿದರು.

ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರೋತ್ಥಾನ ಯೋಜನೆಯಡಿ ₹ 8 ಕೋಟಿ ಅನುದಾನ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾದರೆ ಶಾಸಕರಿಗೆ ಹೆಸರು ಬರುತ್ತದೆ ಎನ್ನುವ ಉದ್ದೇಶದಿಂದ ಮೂಗರ್ಜಿ ಮೂಲಕ ತಡೆಯೊಡ್ಡಿದ್ದಾರೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರ್. ಅಶೋಕ್, ಈಗಿನ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಅವರಿಗೆ ಮನವಿ ಮಾಡಲಾಗಿದೆ. ಆದರೂ ಮಾಹಿತಿ ಇಲ್ಲವೆಂದು ಅವರು ಹೇಳಿರುವುದು ರಾಜಕೀಯ ಪ್ರೇರಿತವಾಗಿದೆ ಎಂದು ದೂರಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ನಗರದಲ್ಲಿ ₹ 60 ಕೋಟಿ ಮೊತ್ತದ ಕಾಮಗಾರಿ ನಡೆದಿವೆ. ಸಿದ್ದೇನಾಯಕನಹಳ್ಳಿ ಬಳಿ ₹ 90 ಕೋಟಿ ವೆಚ್ಚದಲ್ಲಿ 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕಾಗಿ 7 ಎಕರೆ ಜಮೀನು ಮಂಜೂರಾಗಿದೆ. ₹10 ಕೋಟಿ ಅನುದಾನವೂ ಬಿಡುಗಡೆ ಆಗಿದೆ. ಆದರೆ, ಜಿಲ್ಲಾ ಕೇಂದ್ರದ ನೆಪವೊಡ್ಡಿ ತಾಲ್ಲೂಕಿಗೆ ಜಿಲ್ಲಾ ಆಸ್ಪತ್ರೆ ತಪ್ಪಿಸಲು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ದೂರಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಲಾದ ಸಮ್ಮಿಶ್ರ ಸರ್ಕಾರದಲ್ಲಿ ಅನುದಾನ ಬಿಡುಗಡೆ ಮಾಡಲಾದ ಆಸ್ಪತ್ರೆಯನ್ನು ಕೈತಪ್ಪಿಸಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವ ರಸ್ತೆಗಳ ವಿಸ್ತರಣೆಗೆ ಈ ಸರ್ಕಾರದಲ್ಲಿ ಅನುದಾನ ಬಿಡುಗಡೆಯಾಗುವುದು ಅನುಮಾನವಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮವಹಿಸಲಾಗುವುದು. ಸಂಚಾರ ಪೊಲೀಸ್ ಠಾಣೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ನೇಕಾರರಿಗೆ 250 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಕೆಪಿಸಿಸಿ ಸದಸ್ಯ ಜಿ. ಲಕ್ಷ್ಮೀಪತಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ. ಜಗನ್ನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬೈರೇಗೌಡ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಎಪಿಎಂಸಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಮುಖಂಡರಾದ ನಾರಾಯಣಗೌಡ, ಹರೀಶ್‌, ಜವಾಜಿ ಸೀತಾರಾಮ್ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.