ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ: ದಶಕಗಳ ಇತಿಹಾಸದ ‘ಹಣಬೆ’ ತಟ್ಟೆ ಇಡ್ಲಿ

Published 9 ಜೂನ್ 2024, 4:33 IST
Last Updated 9 ಜೂನ್ 2024, 4:33 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ ಸುಮಾರು 10 ಕಿ.ಮೀ ದೂರದ ಹಣಬೆ ಗ್ರಾಮದಲ್ಲಿ ಇರುವುದು ಯಾವುದೇ ಗ್ರ್ಯಾಂಡ್‌ ಹೋಟೆಲ್‌ಗಳು ಅಲ್ಲ. ಆದರೆ ನಗರದ ಜನರು ಸಹ ಇಲ್ಲಿನ ಹೋಟೆಲ್‌ಗಳಲ್ಲಿ ತಟ್ಟೆ ಇಡ್ಲಿ ರುಚಿ ಸವಿಯಲು ಬರುತ್ತಾರೆ. ಬೆಳಗ್ಗೆ 6 ಗಂಟೆ ಸುಮಾರಿನಿಂದ 10 ಗಂಟೆ ಒಳಗೆ ಹೋದರೆ ಮಾತ್ರ ಇಡ್ಲಿ ರುಚಿ ಸವಿಯಲು ದೊರೆಯುತ್ತವೆ. ಸಮಯ ಮೀರಿ ಹೋದರೆ ತಿಂಡಿ ದೊರೆಯುವುದಿಲ್ಲ.

ದಶಕಗಳಿಂದಲೂ ಈ ಗ್ರಾಮದ ಹೋಟೆಲ್‌ ನಡೆಯುತ್ತಿರುವುದು ಸ್ಥಳೀಯ ವಿಶಿಷ್ಟವಾದ ರುಚಿ ಹಾಗೂ ಹಿರಿಯರ ನಾಮದ ಬಲದ ಮೇಲೆ. ಹೆಸರಿಗೆ ತಕ್ಕಂತೆಯೆ ಹಳೇ ಕಾಲದ ತಾಮ್ರದ ಗಂಗಳದಷ್ಟು (ಊಟ ಮಾಡುವ ತಟ್ಟೆ)  ಅಗಲವಾಗಿರುವ ಒಂದು ತಟ್ಟೆ ಇಡ್ಲಿಯನ್ನು ಒಬ್ಬ ವ್ಯಕ್ತಿ ತಿನ್ನುವುದು ಕಷ್ಟವೇ ಸರಿ. ಇಡ್ಲಿಯೊಂದಿಗೆ ಕಡಲೆ ಪಪ್ಪಿನ ಚಟ್ನಿ, ಆಲೂಗೆಡ್ಡೆ ಫಲ್ಯದೊಂದಿಗೆ ಸೊಪ್ಪಿನ ಬೊಂಡ ಅಥವಾ ಮಸಾಲೆ ವಡೆ ಸೇರಿದರೆ ಬಲು ರುಚಿ. ಇಷ್ಟೂ ಸೇರಿದ ಒಂದು ತಟ್ಟೆ ಇಡ್ಲಿಗೆ ₹35 ಮಾತ್ರ.

ತಾಲ್ಲೂಕಿನ ಹಣಬೆ ಗ್ರಾಮದಲ್ಲಿನ ತಟ್ಟೆ ಇಡ್ಲಿಗೆ ಶತಮಾನ ಇತಿಹಾಸವೇ ಇದೆ. ಈ ಗ್ರಾಮದ ಹಿರಿಯಾಗಿದ್ದ ಪುಟ್ಟಸ್ವಾಮಯ್ಯ ಅವರು ಮೊದಲಿಗೆ ಗ್ರಾಮದಲ್ಲಿ ಹೋಟೆಲ್‌ ಪ್ರಾರಂಭಿಸಿ ತಟ್ಟೆ ಇಡ್ಲಿ, ಕಡಲೆ ಪಪ್ಪು, ಆಲೂಗೆಡ್ಡೆ ಫಲ್ಯ, ಸೊಪ್ಪಿನ  ಬೊಂಡ ಮಾಡುತ್ತಿದ್ದರು. ಇವರ ನಿಧನದ ನಂತರ ಇಲ್ಲಯೇ ಕೆಲಸಕ್ಕೆ ಇದ್ದ ವೀರಣ್ಣ ಅವರು ತಟ್ಟೆ ಇಡ್ಲಿ ಹೋಟೆಲ್‌ ಮುಂದುವರೆಸಿದರು. ಇವರ ನಿಧನದ ನಂತರ ಈಗ ಇವರ ಸಹೋದರ ಜಗದೀಶ್‌ ಅವರು ಅದೇ ರುಚಿ, ಹಿರಿಯರ ಹೆಸರಿನಲ್ಲೇ ತಟ್ಟೆ ಇಡ್ಲಿ  ಹೋಟೆಲ್‌ ನಡೆಸುತ್ತಿದ್ದಾರೆ.

ಹಣಬೆ ಗ್ರಾಮದಲ್ಲಿ ವೀರಣ್ಣ ಹೋಟೆಲ್‌, ಸೀನಣ್ಣ ಹೋಟೆಲ್‌ ಹೀಗೆ ನಾಮದ ಬಲ, ರುಚಿ ಮೇಲೆಯೇ ಇಂದಿಗೂ ಹೋಟೆಲ್‌ಗಳು ನಡೆಯುತ್ತಿವೆ. ಹಣಬೆ ಗ್ರಾಮದ ಸಮೀಪವೇ ಐತಿಹಾಸಿಕ ಹುಲುಕುಡಿ ಬೆಟ್ಟ ಇದೆ. ಹುಲುಕುಡಿ ಬೆಟ್ಟಕ್ಕೆ ಹೋಗಲು ಬೇರೆ ಬೇರೆ ದಾರಿಗಳು ಇದ್ದರು ಸಹ ಭಾನುವಾರ ಸೇರಿದಂತೆ ರಜಾ ದಿನಗಳಲ್ಲಿ ಬೆಟ್ಟಕ್ಕೆ ಬರುವ ಬಹುತೇಕ ಜನರು ಈ ಗ್ರಾಮದ ರಸ್ತೆ ಮೂಲಕವೇ ಬಂದು ತಟ್ಟೆ ಇಡ್ಲಿ ರುಚಿ ಸವಿದು ಹೋಗುವುದು ಇಂದಿಗೂ ವಾಡಿಕೆ.

‘ಒಂದು ಅಂಗೈಯಷ್ಟು ದಪ್ಪದ (ಒಂದು ಇಂಚು) ಮೃದುವಾಗಿರುವ ಹಣಬೆ ಇಡ್ಲಿ ರುಚಿ ಸವಿಯಲು ತಿಂಗಳಿಗೆ ಒಮ್ಮೆಯಾದರು ಸ್ನೇಹಿತರು ಈ ಕಡೆಗೆ ಬರುತ್ತೇವೆ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಇಡ್ಲಿ ತಿಂದರೆ ಇಡೀ ದಿನ ಮತ್ತೆ ಊಟ ಮಾಡುವುದೇ ಬೇಡ ಅನ್ನುವಷ್ಟರ ಮಟ್ಟಿಗೆ ಇರುತ್ತದೆ’ ಎನ್ನುತ್ತಾರೆ ಚಾರಣಿಗ ಶಿವಶಂಕರ್‌.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT