ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಅಲೆ ತಡೆಗೆ ಕಠಿಣ ಕ್ರಮ

ಮೈಕ್ರೋ ಕಂಟೈನ್‌ಮೆಂಟ್‌ ಜೋನ್ ಸ್ಥಾಪಿಸಲು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಸೂಚನೆ
Last Updated 19 ಆಗಸ್ಟ್ 2021, 3:51 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಕೋವಿಡ್ ಮೂರನೇ ಅಲೆ ತಡೆಯಲು ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಕೋವಿಡ್ ಪಾಸಿಟಿವ್ ಇರುವ ಕಡೆಯಲ್ಲಿ ಮೈಕ್ರೋ ಕಂಟೈನ್‌ಮೆಂಟ್‌ ಜೋನ್ ಸ್ಥಾಪಿಸಬೇಕು. 5ರಿಂದ 6 ಮನೆಗಳನ್ನು ಗುರ್ತಿಸಿ ಕನಿಷ್ಠ 20 ಮಂದಿಯನ್ನು ತಪಾಸಣೆಗೆ ಒಳಪಡಿಸಬೇಕು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸೂಚಿಸಿದರು.

ತಾಲ್ಲೂಕಿನ ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಅಧಿಕಾರಿ ಗಳ ಸಭೆಯಲ್ಲಿ ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಪ್ರಸ್ತುತ 148 ಸಕ್ರಿಯ ಪ್ರಕರಣಗಳಿವೆ. ಕಡಿಮೆ ಇರುವಾಗಲೇ ಮುಂಜಾಗ್ರತಾ ಕ್ರಮಕೈಗೊಂಡರೆ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ ಎಂದರು.

ಕೋವಿಡ್ ಪರೀಕ್ಷೆಯ ಪ್ರಮಾಣ ಹೆಚ್ಚಿಸಬೇಕು. ಪಾಸಿಟಿವ್ ಬಂದಿರುವವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲು ಮಾಡಬೇಕು. ಪರೀಕ್ಷೆ ಮಾಡುವ ಪ್ರಮಾಣ ಕಡಿಮೆಯಾಗಿದೆ. ಪರೀಕ್ಷಾ ವರದಿಗಳು ಶೇ 28ರಷ್ಟು ಮಾತ್ರ 24 ಗಂಟೆಯೊಳಗೆ ಬರುತ್ತಿದೆ. ಬರುವುದು ಕೂಡ ತಡವಾಗುತ್ತಿದೆ ಎಂದು ಹೇಳಿದರು.

ಮುಂದಿನ ಮೂರು ತಿಂಗಳಲ್ಲಿ ಕೋವಿಡ್ ಸಂಕಷ್ಟ ತೀವ್ರವಾಗಲಿದೆ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಎಲ್ಲಾ ಅನುಕೂಲವಿದ್ದರೆ ಮಾತ್ರ ಹೋಮ್‌ ಐಸೋಲೇಷನ್ ಕೊಡಬೇಕು. ಹೋಮ್‌ ಐಸೋಲೇಷನ್ ಉಸ್ತುವಾರಿ ನೋಡಿಕೊಳ್ಳಲು ಪ್ರತ್ಯೇಕವಾಗಿ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಸೂಚಿಸಿದರು.

ಕೋವಿಡ್ ವಿಚಾರವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಸೆಪ್ಟೆಂಬರ್‌ನಿಂದ ಡಿಸೆಂಬರ್ ವರೆಗೂ ಕೋವಿಡ್ ಪ್ರಕರಣ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ ಎಂದರು.

ಆರೋಗ್ಯ ನಂದನ ಕಾರ್ಯಕ್ರಮದ ರೂಪರೇಷೆ ಕುರಿತು ಚರ್ಚಿಸಿದ್ದೇವೆ. ಒಂದು ವಾರದಲ್ಲಿ ಮುಖ್ಯಮಂತ್ರಿ ಅವರು ಉದ್ಘಾಟನೆ ಮಾಡಲಿದ್ದಾರೆ. ಒಂದೂವರೆ ಕೋಟಿ ಮಕ್ಕಳನ್ನು ತಪಾಸಣೆ ಮಾಡಿ, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಿಗೆ ವಿಶೇಷ ಚಿಕಿತ್ಸೆ ಮತ್ತು ಆರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಲಸಿಕೆಯಲ್ಲಿ ಶೇ 48.5ರಷ್ಟು ಸಾಧನೆ ಮಾಡಲಾಗಿದೆ. 2ನೇ ಡೋಸ್ ನೀಡಿಕೆಯಲ್ಲಿ ಅರ್ಧದಷ್ಟು ಸಾಧನೆ ಮಾಡಲಾಗಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ಜಿಲ್ಲೆಯಾಗಿರುವುದರಿಂದ ಲಸಿಕೆಯನ್ನು ಬೇಗ ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಕ್ರಮವಹಿಸಲಾಗಿದೆ ಎಂದರು.

ಮಕ್ಕಳನ್ನು ಶಾಶ್ವತವಾಗಿ ಮನೆಯಲ್ಲಿ ಬಿಡಲು ಸಾಧ್ಯವಿಲ್ಲ. ಮಕ್ಕಳ ಆರೋಗ್ಯ ಮತ್ತು ಅವರ ಜೀವ ಉಳಿಸುವುದು ಸರ್ಕಾರದ ಜವಾಬ್ದಾರಿ ಎಂದರು.

‘ಅನೇಕ ರಾಜ್ಯಗಳಲ್ಲಿ ಶಾಲೆ ಪ್ರಾರಂಭ ಮಾಡಿದ್ದಾರೆ.ನಾವು ಪ್ರಯೋಗ ಮಾಡ್ತಿದ್ದೇವೆ. ಶಾಲೆಯಲ್ಲಿನ ಸಿಬ್ಬಂದಿಗೆ ಲಸಿಕೆ ನೀಡಿ ಆರಂಭಿಸುತ್ತಿದ್ದೇವೆ. ಅನೇಕರ ಅಭಿಪ್ರಾಯ ತೆಗೆದುಕೊಂಡು ಶಾಲೆ ಆರಂಭಿಸಲಾಗುತ್ತಿದೆ. ಶೇ 2ರಷ್ಟು ಪಾಸಿಟಿವಿಟಿ ಬಂದರೆ ಅದನ್ನು ಮುಚ್ಚುವಂತಹ ಕೆಲಸ ಮಾಡುತ್ತೇವೆ’ ಎಂದು ವಿವರಿಸಿದರು.

ಸಚಿವ ಎಂ.ಟಿ.ಬಿ. ನಾಗರಾಜ್ ಮಾತನಾಡಿ, ಆರಂಭದಲ್ಲಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು. ನಂತರದಲ್ಲಿ ಸಾಲುಗಟ್ಟಿ ನಿಂತು ಹಾಕಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಜಿಲ್ಲೆಗೆ ಲಸಿಕೆಯ ಪೂರೈಕೆ ಹೆಚ್ಚಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್. ರವಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT