ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 35ರಷ್ಟು ಶಾಲೆಗೆ ಆಹಾರ ಧಾನ್ಯ ಕೊರತೆ

ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಆರಂಭ ಇಂದಿನಿಂದ
Last Updated 21 ಅಕ್ಟೋಬರ್ 2021, 5:02 IST
ಅಕ್ಷರ ಗಾತ್ರ

ದೇವನಹಳ್ಳಿ:ಕೊರೊನಾ ಬಳಿಕ ಸರ್ಕಾರಿ ಶಾಲೆಗಳಲ್ಲಿ ಸ್ಥಗಿತಗೊಂಡಿದ್ದ ಬಿಸಿಯೂಟವನ್ನು ಅ. 21ರಿಂದ ಪುನಾರಂಭಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದರೂ ಸರಿಯಾದ ಸಿದ್ಧತೆ ಇಲ್ಲದ ಕಾರಣ ತಾಲ್ಲೂಕಿನಲ್ಲಿ ಶೇ 35ರಷ್ಟು ಶಾಲೆಗಳಲ್ಲಿ ಆಹಾರದ ಕೊರತೆಯಾಗಿದೆ.

ಇದರಿಂದ ಸ್ಥಳೀಯ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ತೆಗೆದುಕೊಂಡು ಮಕ್ಕಳಿಗೆ ಬಿಸಿಯೂಟ ತಯಾರಿಸುವಂತೆ ಶಾಲಾ ಶಿಕ್ಷಕರಿಗೆ ಅಧಿಕಾರಿಗಳು ಸೂಚಿಸಿದ್ದು, ಶಿಕ್ಷಕರು ಗೊಂದಲಕ್ಕೆ ಸಿಲುಕಿದ್ದಾರೆ.

10 ದಿನಗಳ ದಸರಾ ರಜೆ ಬಳಿಕ 6 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ರಾಜ್ಯದೆಲ್ಲೆಡೆ ಶಾಲೆಗಳು ಗುರುವಾರದಿಂದ ಪುನಾರಂಭಗೊಳ್ಳುತ್ತಿವೆ. ಸರ್ಕಾರ ಮೊದಲ ದಿನದಿಂದಲೇ ಬಿಸಿಯೂಟ ನೀಡುವಂತೆ ಶಾಲೆಯ ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದೆ. ಆದರೆ, ಯಾವುದೇ ಪದಾರ್ಥ ಇಲ್ಲದೆ ಮಕ್ಕಳಿಗೆ ಬಿಸಿಯೂಟ ಕೊಡುವುದಾದರೂ ಹೇಗೆ ಎಂಬ ಚಿಂತೆ ಶಿಕ್ಷಕರಿಗೆ ಎದುರಾಗಿದೆ.

2020ರಫೆಬ್ರುವರಿಯಲ್ಲಿ ಕೊರೊನಾ ಲಾಕ್‌ಡೌನ್‌ ಜಾರಿ ಬಳಿಕ ಬಿಸಿಯೂಟವನ್ನು ನಿಲ್ಲಿಸಲಾಗಿತ್ತು. ಶಾಲೆಗಳಲ್ಲಿ ಮಧ್ಯಾಹ್ನದ ಊಟ ನಿಲ್ಲಿಸಿದರೂ ಮಕ್ಕಳಿಗೆ ಅಕ್ಕಿ ಮತ್ತು ಬೇಳೆ ವಿತರಣೆ ಮಾಡಲಾಗಿತ್ತು.. ಹೀಗಾಗಿ ಶಾಲೆಗಳಿಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಯಾವುದೇ ಸಾಮಗ್ರಿ ಪೂರೈಕೆಯಾಗಿಲ್ಲ. ಕೆಲವು ಶಾಲೆಗಳಲ್ಲಿ ದಾಸ್ತಾನು ಸ್ವಲ್ಪಮಟ್ಟಿಗೆ ಇರುವ ಕಾರಣ ಅಂತಹ ಶಾಲೆಗಳಲ್ಲಿ ಬಿಸಿಯೂಟ ನೀಡಲಿಕ್ಕೆ ಸಿದ್ಧತೆ ಮಾಡಿಕೊಳ್ಳ
ಲಾಗುತ್ತಿದೆ.

ಬಹಳಷ್ಟು ಶಾಲೆಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸಹ ಖಾಲಿಯಾಗಿದೆ. ಬಿಸಿಯೂಟ ನಿಲ್ಲಿಸಿ ಒಂದೂವರೆ ವರ್ಷ ಆಗಿರುವುದರಿಂದ ಶಾಲೆಗಳಲ್ಲಿ ಬಿಸಿಯೂಟದ ಯಾವುದೇ ಸಾಮಗ್ರಿ ದಾಸ್ತಾನು ಉಳಿದಿಲ್ಲ. ಉಳಿದಿದ್ದರೂ ಅವು ಮುಗ್ಗಲು ಹಿಡಿದಿರುತ್ತವೆ. ಹೀಗಾಗಿ, ಯಾವುದೇ ಸಿದ್ಧತೆ ಇಲ್ಲದೆ ಬಿಸಿಯೂಟ ಕೊಡುವಂತೆ ಆದೇಶವಾಗಿರುವುದು ಶಿಕ್ಷಕರು ಮತ್ತು ಬಿಸಿಯೂಟ ನೌಕರರಿಗೆ ತಲೆನೋವಾಗಿ ಪರಿಣಮಿಸಿದೆ.

ಪೂರೈಕೆಗೆ ಇನ್ನೊಂದು ವಾರ: ಶಿಕ್ಷಣ ಇಲಾಖೆ ಅಧಿಕೃತ ಮೂಲಗಳ ಮಾಹಿತಿ ಪ್ರಕಾರ, ಕೆಲ ಶಾಲೆಗಳಲ್ಲಿ ಮಕ್ಕಳಿಗೆ ವಿತರಣೆ ಮಾಡಲು ಪೂರೈಕೆ ಮಾಡಿರುವ ಆಹಾರ ಧಾನ್ಯಗಳ ದಾಸ್ತಾನು ಇದೆ. ಶೇ 35ರಷ್ಟು ಶಾಲೆಗಳಲ್ಲಿ ಇಲ್ಲ. ಹೀಗಾಗಿ, ಯಾವ ಶಾಲೆಗಳಲ್ಲಿ ಆಹಾರ ಸಾಮಗ್ರಿಗಳು ಇರುವುದಿಲ್ಲವೋ ಅಂತಹ ಶಾಲೆಯವರು, ಸ್ಥಳೀಯ ನ್ಯಾಯಬೆಲೆ ಅಂಗಡಿಗಳಿಂದ ಧಾನ್ಯಗಳನ್ನು ಪಡೆದುಕೊಂಡು ಮಕ್ಕಳಿಗೆ ಬಿಸಿಯೂಟ ತಯಾರು ಮಾಡಿಕೊಡುವಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಕಿ, ಬೇಳೆ, ಎಣ್ಣೆ ಮತ್ತು ಇತರೆ ಸಾಮಗ್ರಿಗಳು ಪೂರೈಕೆಯಾಗಲು ಕನಿಷ್ಠ ಒಂದು ವಾರವಾದರೂ ಬೇಕು. ಶಿಕ್ಷಣ ಇಲಾಖೆಯು ಎಲ್ಲ ಪೂರ್ವ ಸಿದ್ಧತೆಗಳನ್ನು ಕೈಗೊಂಡು ಕಡ್ಡಾಯವಾಗಿ ಗುರುವಾರದಿಂದಲೇ ಬಿಸಿಯೂಟ ಕೊಡಬೇಕೆಂದು ಸುತ್ತೋಲೆ ಹೊರಡಿಸಿದೆ.

ಬಿಸಿಯೂಟಕ್ಕೆ ಹಳೇ ದಾಸ್ತಾನು ಬಳಸುವಂತಿಲ್ಲ. ಅಂಗಡಿಯಿಂದ ಖರೀದಿಸಿ ತಂದಿದ್ದಲ್ಲಿ ಬೆಳಿಗ್ಗೆಯೇ ಸ್ವಚ್ಛಗೊಳಿಸಿಕೊಳ್ಳಬೇಕು. ಬಿಸಿಯೂಟಕ್ಕೆ ಅಗತ್ಯವಾದ ಪರಿಕರಗಳ ಖರೀದಿಗೆ ಶಾಲೆ ಅಕ್ಷರ ದಾಸೋಹ ಖಾತೆಯಲ್ಲಿರುವ ಅಡುಗೆ ಅನುದಾನ ಸಂಚಿತ ನಿಧಿಯಿಂದ ತಾತ್ಕಾಲಿಕವಾಗಿ ಭರಿಸಿಕೊಳ್ಳಬಹುದು. ಹಾಳಾಗಿರುವ ಪಾತ್ರೆ ಪರಿಕರಗಳು, ಸ್ಟೌ ದುರಸ್ತಿ, ಸ್ವಚ್ಛತೆ ಸಾಮಗ್ರಿಗಳ ಖರೀದಿಗೆ ಶಾಲೆಯ ಸಂಚಿತ ಅಡುಗೆ ಸಾದಿಲ್ವಾರು ಅನುದಾನ ಬಳಸಿಕೊಳ್ಳುವಂತೆ ಸುತ್ತೋಲೆಯಲ್ಲಿ
ತಿಳಿಸಲಾಗಿದೆ.

ಆದರೆ, ಇದುವರೆಗೆ ಶಾಲೆಗಳಿಗೆ ರಜೆ ಇದ್ದುದರಿಂದ ಯಾವುದೇ ಸಿದ್ಧತೆಯಾಗಿಲ್ಲ. ಸಾಮಗ್ರಿಗಳ ಖರೀದಿಗೆ ಅನುಮತಿ ಪಡೆಯಬೇಕೆಂದರೂ ಸಭೆ ಕರೆಯಬೇಕಾಗುತ್ತದೆ. ಹೀಗಾಗಿ ಆರಂಭದಲ್ಲಿ ಶಿಕ್ಷಕರೇ ಅಕ್ಕಿ, ಬೇಳೆ ಮತ್ತು ಇತರೆ ಸಾಮಗ್ರಿಗಳ ವೆಚ್ಚ ಭರಿಸಬೇಕಾಗುತ್ತದೆ. ತಮ್ಮ ವೆಚ್ಚದಲ್ಲಿ ಅಕ್ಕಿ ಖರೀದಿಸಿ ಶಾಲೆಗೆ ಪೂರೈಕೆಯಾದ ಬಳಿಕ ವಾಪಸು ತೆಗೆದುಕೊಂಡು ಹೋದಲ್ಲಿ ಅಕ್ಕಿ ಕಳ್ಳತನದ ಆಪಾದನೆ ಹೊರಬೇಕಾಗುತ್ತದೆ ಎಂಬ ಕಾರಣಕ್ಕೆ ಶಿಕ್ಷಕರು ಹಿಂಜರಿಯುತ್ತಿದ್ದಾರೆ.

ಪ್ರತಿ ವಿದ್ಯಾರ್ಥಿಗೆ 150 ಗ್ರಾಂ ಅಕ್ಕಿಯಂತೆ 100 ಮಕ್ಕಳಿರುವ ಶಾಲೆಗೆ ಒಂದು ದಿನಕ್ಕೆ 15 ಕೆ.ಜಿ ಅಕ್ಕಿ ಬೇಕು. ಒಂದು ದಿನಕ್ಕಾದರೆ ಉದಾರವಾಗಿ ಕೊಡಬಹುದು. ಆದರೆ, ನೂರಾರು ಮಕ್ಕಳಿರುವ ಶಾಲೆಗೆ ವಾರಕ್ಕಾಗುವಷ್ಟು ಅಕ್ಕಿಗೆ ದೊಡ್ಡ ಮೊತ್ತವನ್ನೇ ಕೊಡಬೇಕಾಗುತ್ತದೆ ಎನ್ನುತ್ತಾರೆ
ಶಿಕ್ಷಕರು.

ಶಾಲೆ ಆರಂಭವಾದಾಗಿನಿಂದ ಬಿಸಿಯೂಟ ನೌಕರರು ಕರ್ತವ್ಯಕ್ಕೆ ಬರುತ್ತಿರುವುದರಿಂದ ಅಡುಗೆ ಮಾಡುವವರ ಸಮಸ್ಯೆ ಇಲ್ಲ.

ಬಹಳಷ್ಟು ಶಾಲೆಗಳಲ್ಲಿ ಈಗಾಗಲೇ ಅಡುಗೆ ಕೊಠಡಿಯನ್ನು ಶುಚಿಗೊಳಿಸಿ ಅಡುಗೆಗೆ ಸಿದ್ಧ ಮಾಡಿ
ಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT