ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ವಲಯ; ಮುನ್ನೆಚ್ಚರಿಕೆ ಅಗತ್ಯ

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Last Updated 5 ಸೆಪ್ಟೆಂಬರ್ 2020, 9:01 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಜಿಲ್ಲಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತದ ಸ್ಥಳಗಳನ್ನು ಗುರುತಿಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಉಳಿದ ಆಂತರಿಕ ರಸ್ತೆಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸುತ್ತಿರುವ ಸ್ಥಳಗಳಲ್ಲಿ ಅಪಘಾತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಲು ಹೇಳಿದರು.

‘ಲೋಕೋಪಯೋಗಿ ಇಲಾಖೆ, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ಇತರ ರಸ್ತೆ ನಿರ್ಮಾಣ ಜವಾಬ್ದಾರಿ ಹೊಂದಿರುವ ಇಲಾಖೆಗಳ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತಾ ಕ್ರಮಕ್ಕಾಗಿ ಪ್ರತ್ಯೇಕ ಅನುದಾನ ಲಭ್ಯವಿದೆ. ಇದರ ಸದ್ಭಳಕೆಗಾಗಿ ಹಾಗೂ ಹೆಚ್ಚುವರಿ ಅನುದಾನಕ್ಕೆ ಸಂಬಂಧಪಟ್ಟಂತೆ ಹೆಚ್ಚು ಅಪಘಾತ ನಡೆಯುವ ಸ್ಥಳಗಳನ್ನು ಗುರುತಿಸಿ, ಕ್ರಿಯಾಯೋಜನೆ ರೂಪಿಸಿ ರಸ್ತೆ ಸುರಕ್ಷತಾ ಸಮಿತಿಯಿಂದ ಅನುಮೋದನೆ ಪಡೆದು, ಸಂಬಂಧಿಸಿದ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಕಳುಹಿಸಿಕೊಡಬೇಕು’ ಎಂದರು.

‘ಟೋಲ್‌ಗಳಲ್ಲಿ ಅಂಬುಲೆನ್ಸ್ ಸೇರಿದಂತೆ ತುರ್ತು ವಾಹನಗಳು ಚಲಿಸಲು ಪ್ರತ್ಯೇಕ ಮಾರ್ಗ ಕಲ್ಪಿಸಬೇಕು. ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಿ’ ಎಂದರು.

ನೆಲಮಂಗಲ ವಿಭಾಗದ ಸಾರಿಗೆ ಅಧಿಕಾರಿ ಮಾತನಾಡಿ, ‘ನೆಲಮಂಗಲ ವ್ಯಾಪ್ತಿಯಲ್ಲಿ 14 ಕಪ್ಪು ಪ್ರದೇಶಗಳನ್ನು (ಹೆಚ್ಚು ಅಪಘಾತವಾಗುವ ಸ್ಥಳ)ಗಳನ್ನು ಗುರುತಿಸಿದ್ದು, ನೆಲಮಂಗಲ ವ್ಯಾಪ್ತಿಯಲ್ಲಿ ಈ ವರ್ಷದಲ್ಲಿ 78 ಅಪಘಾತ ಪ್ರಕರಣಗಳು ಸಂಭವಿಸಿವೆ. 271 ಮಂದಿ ಗಾಯಗೊಂಡಿದ್ದು, 89 ಮಂದಿ ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ್‌ ಕೆ.ನಾಯಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಗಣೇಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಗುರುಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT