ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಗಿರಿ, ಅಕೇಷಿಯಾ ರಹಿತ ಅರಣ್ಯೀಕರಣಕ್ಕೆ ಕ್ರಮ

ಅರಣ್ಯ ಇಲಾಖೆಯಿಂದ ವಿವಿಧ ರೀತಿಯ ಸಸಿಗಳ ಪೋಷಣೆ
Last Updated 8 ಫೆಬ್ರುವರಿ 2020, 13:50 IST
ಅಕ್ಷರ ಗಾತ್ರ

ವಿಜಯಪುರ: ‘ಬಯಲುಸೀಮೆ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಗಾಗಿ ನೀಲಗಿರಿ ಮರಗಳ ತೆರವಿಗೆ ಜಿಲ್ಲಾಧಿಕಾರಿ ಜಿ.ಎ.ರವೀಂದ್ರ ಖಡಕ್ ಆದೇಶ ನೀಡಿದ್ದಾರೆ. ಅರಣ್ಯ ಇಲಾಖೆಯೂ ನೀಲಗಿರಿ, ಅಕೇಷಿಯಾ ರಹಿತ ಅರಣ್ಯೀಕರಣ ಮಾಡಲು ಹೊರಟಿರುವುದು ಸಂತಸ ತಂದಿದ್ದು ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು’ ಎಂದು ಹೋರಾಟಗಾರ ಮಹೇಶ್‌ಕುಮಾರ್ ತಿಳಿಸಿದ್ದಾರೆ.

‘ಗುಡುವನಹಳ್ಳಿ ಛತ್ರದ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಮೂಲಕ ರೈತರ ನೆರವಿಗೆ ಮುಂದಾಗಲು, ವಿವಿಧ ಜಾತಿಯ ಸಸಿಗಳನ್ನು ಪೋಷಣೆ ಮಾಡುತ್ತಿರುವ ವಲಯ ಅರಣ್ಯ ಇಲಾಖೆಯು ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸಲು ಕ್ರಮ ಕೈಗೊಂಡಿದೆ’ ಎಂದರು.

‘ಈ ಯೋಜನೆಯಡಿ ವಲಯ ಅರಣ್ಯ ಇಲಾಖೆ ವತಿಯಿಂದ ಸಸಿಗಳನ್ನು ಪಡೆದು, ಜಮೀನುಗಳಲ್ಲಿ ನೆಟ್ಟು ಪೋಷಣೆ ಮಾಡುವ ರೈತರಿಗೆ ಗಿಡ ನೆಡಲು, ಗುಂಡಿ ತೋಡಲು ಹಾಗೂ ನೆಟ್ಟ ಗಿಡಗಳನ್ನು ಕಾಪಾಡಲು ನರೇಗಾ ವತಿಯಿಂದ ನೆರವು ನೀಡಲಾಗುತ್ತದೆ. ಆದರೆ ನರೇಗಾ ವತಿಯಿಂದ ರೈತರಿಗೆ ನೀಡುವ ನೆರವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಬದಲು, ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಲಿದೆ.
ಈ ನಿಟ್ಟಿನಲ್ಲಿ ಗುಂಡಿ ತೋಡಿ ಗಿಡ ನೆಡಲು ಮೊದಲ ವರ್ಷದಲ್ಲಿ ಗಿಡವೊಂದಕ್ಕೆ ₹ 70 ನೀಡಲಾಗುತ್ತದೆ. ನಂತರ ಗಿಡಗಳ ನಿರ್ವಹಣೆ ಉತ್ತಮವಾಗಿದ್ದರೆ ಇಲಾಖೆಯಿಂದ ಮತ್ತಷ್ಟು ಸಹಾಯಧನ ಪಡೆದುಕೊಳ್ಳಬಹುದಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಎಂ.ಪುಷ್ಪಾ ತಿಳಿಸಿದ್ದಾರೆ.

‘ಈ ಹಿಂದೆ ತಮ್ಮ ಜಮೀನುಗಳಲ್ಲಿ ಸಸಿ ಬೆಳೆಸುವ ರೈತರಿಗೆ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿಗಳ ಮೂಲಕ ನೆರವು ನೀಡಲು ಇಲಾಖೆ ಕ್ರಮ ಕೈಗೊಂಡಿತ್ತು. ಆದರೆ ಪಿಡಿಒಗಳಿಗೆ ಅಧಿಕ ಕಾರ್ಯಭಾರ ಹಾಗೂ ವಿಳಂಬದಿಂದಾಗಿ ರೈತರಿಗೆ ನೆರವು ಸಿಗುವುದರಲ್ಲೂ ವಿಳಂಬವಾಗುತ್ತಿತ್ತು. ಇದನ್ನು ಮನಗಂಡ ಇಲಾಖೆಯು ಫಲಾನುಭವಿ ರೈತರ ಖಾತೆಗಳಿಗೆ ನೇರವಾಗಿ ಹಣ ಪಾವತಿಸುತ್ತಿರುವುದರಿಂದ ರೈತರಿಗೆ ನೆರವಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಜಮೀನುಗಳಲ್ಲಿ ಸಸಿಗಳನ್ನು ಬೆಳೆಸಲು ಮುಂದಾಗುವ ರೈತರು ಉದ್ಯೋಗ ಚೀಟಿ, ಭೂ ದಾಖಲೆ ಪತ್ರಗಳನ್ನು ವಲಯ ಅರಣ್ಯಾಧಿಕಾರಿ ಕಚೇರಿಗೆ ಸಲ್ಲಿಸಿ, ಸಸಿಗಳನ್ನು ಪಡೆಯಬಹುದು. ಇಲಾಖೆಯು ರೈತರಿಗೆ ಸಸಿ ವಿತರಣೆ ಮಾಡಿದ ಬಗ್ಗೆ ದಾಖಲೆಗಳನ್ನು ನಿರ್ವಹಿಸುತ್ತದೆ. ಜತೆಗೆ ರೈತರು ಗಿಡ ನೆಡುವ ಬಗ್ಗೆ ಛಾಯಾಚಿತ್ರ ತೆಗೆದು ದಾಖಲೆಗಳಿಗೆ ಜೋಡಿಸಲಾಗುತ್ತದೆ. ಅಧಿಕಾರಿಗಳು ಗಿಡನೆಟ್ಟ ರೈತರ ಜಮೀನಗಳಿಗೆ ಭೇಟಿ ನೀಡಿ, ಅವುಗಳ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿ, ನಿರ್ವಹಣೆ ವೆಚ್ಚವನ್ನು ಬಿಡುಗಡೆ ಮಾಡಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT