ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಅಪಘಾತ ಕಡಿಮೆಗೊಳಿಸಲು ಕ್ರಮಕ್ಕೆ ಅಲೋಕ್ ಕುಮಾರ್ ಸಲಹೆ

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಭೇಟಿ
Published 7 ಸೆಪ್ಟೆಂಬರ್ 2023, 17:11 IST
Last Updated 7 ಸೆಪ್ಟೆಂಬರ್ 2023, 17:11 IST
ಅಕ್ಷರ ಗಾತ್ರ

ಹೊಸಕೋಟೆ: ನಗರದ ಹೊರವಲಯದ ಕೊಳತೂರು ಗೇಟ್ ಬಳಿ ಹಾದು ಹೋಗಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ ಹಾಗೂ ತಿರುಪತಿ ಹೆದ್ದಾರಿಗೆ ರಾಜ್ಯ ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿ, ಅಪಘಾತ ಕಡಿಮೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರಿಗೆ ಸಂಚಾರಕ್ಕೆ ಅನುಕೂಲವಾಗುವ ಸೂಚನಾ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸಲಹೆ ನೀಡಿದರು.

ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳ ಹೆಚ್ಚುತ್ತಿದೆ. ಇದರಲ್ಲಿ ಮೃತಪಡವರ ಸಂಖ್ಯೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ, ಬೆಂಗಳೂರು-ಪುಣೆ ಹೆದ್ದಾರಿಯನ್ನು ಕೆಲವು ದಿನಗಳ ಹಿಂದೆ ಪರಿಶೀಲನೆ ಹಲವು ಸಲಹೆ ನೀಡಿದ್ದೆ. ಅದರಂತೆ ಬಹು ನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆ ರಸ್ತೆ ನಿರ್ಮಾಣದ ವೇಳೆ ಅಪಘಾತ ಪ್ರದೇಶ, ಆಗಮನ–ನಿರ್ಗಮನ ಬಳಿ ಸಮರ್ಪಕ ಸೂಚನಾ ಫಲಕ, ಹೆದ್ದಾರಿ ಗಸ್ತು ವಾಹನ, ತುರ್ತು ವಾಹನ ವ್ಯವಸ್ಥೆ ಮಾಡಬೇಕು. ಹೆದ್ದಾರಿಗೆ ಸಮರ್ಪಕವಾಗಿ ಮುಳ್ಳು ತಂತಿ ಅಳವಡಿಸಬೇಕು. ಅಗತ್ಯ ಇರುವ ಕಡೆ ಸಿಸಿಟಿವ ಅಳವಡಿಕೆ, ಸುರಕ್ಷತಾ ಜಾಗೃತಿಗೆ ಎಲ್‌ಇಡಿ ವಾಲ್ ಅಳವಡಿಕೆ. ಈ ರೀತಿಯ ಕೆಲಸಗಳು ಸಮರ್ಪಕವಾಗಿ ಆಗಬೇಕು ಎಂದು ಸೂಚಿಸಿದರು.

ಇವೆಲ್ಲವಕ್ಕೂ ಒತ್ತು ನೀಡಿ, ಲೋಪ ಬಾರದಂತೆ ಕೆಲಸ ಮಾಡಿದರೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬಹುದು ಎಂದರು.

‌ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯ ನೀಲ ನಕ್ಷೆಯನ್ನು ವೀಕ್ಷಣೆ ಮಾಡಿದ ಎಡಿಜಿಪಿ ಅಲೋಕ್ ಕುಮಾರ್ ಹೆದ್ದಾರಿ ಯೋಜನೆ ನಿರ್ದೇಶಕಿ ಅರ್ಚನಾ ಅವರ ಬಳಿ ರಸ್ತೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು.

₹3,800 ಕೋಟಿ ವೆಚ್ಚದ ಕಾಮಗಾರಿ ಎಂದು ಅರ್ಚನಾ ಅವರು ಹೇಳುತ್ತಿದ್ದಂತೆ ಆಶ್ಚರ್ಯ ವ್ಯಕ್ತಪಡಿಸಿದ ಅಲೋಕ್ ಕುಮಾರ್, ‘ಏನ್ರಿ ಚಿನ್ನದ ರಸ್ತೆ ಮಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಬಳಿಕ ನಿರ್ಮಾಣ ಹಂತದ ಸ್ಕೈ ವಾಕ್‌ ಸಹ ವೀಕ್ಷಣೆ ಮಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‌.ಪಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಎಸ್‌.ಪಿ ಪುರುಷೋತ್ತಮ್, ಕೋಲಾರ ಎಸ್‌.ಪಿ ಸತ್ಯನಾರಾಯಣ್, ಕೆಜಿಎಫ್ ಎಸ್‌.ಪಿ ಶಾಂತಕುಮಾರ್, ಹೊಸಕೋಟೆ ಡಿವೈಎಸ್ಪಿ ಶಂಕರ್ ಪ್ರಕಾಶ್ ಪಾಟೀಲ್, ಸಂಚಾರಿ ಸಿಪಿಐ ರಘು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT