ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೃದ್ರೋಗಕ್ಕೆ ವಾಯುಮಾಲಿನ್ಯವೂ ಕಾರಣ’

ಶೇ 24ರಷ್ಟು ಚಾಲಕರು ಕಾಯಿಲೆಗೆ ಒಳಗಾಗುತ್ತಿದ್ದಾರೆ, ಜೀವನ ಶೈಲಿಯಲ್ಲಿ ಬದಲಾವಣೆ ಅಗತ್ಯ
Last Updated 3 ಅಕ್ಟೋಬರ್ 2019, 13:19 IST
ಅಕ್ಷರ ಗಾತ್ರ

ವಿಜಯಪುರ: ‘ಹೃದಯ ಸಂಬಂಧಿ ಕಾಯಿಲೆಗಳಿಗೆ ಮಾನಸಿಕ ಒತ್ತಡ, ಧೂಮಪಾನ, ಮಧುಮೇಹ ಮಾತ್ರವಲ್ಲದೆ ವಾಯುಮಾಲಿನ್ಯವೂ ಪ್ರಮುಖ ಕಾರಣ’ ಎಂದು ಡಾ. ಶ್ಯಾಂಸುಂದರ್ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಆಯೋಜಿಸಿದ್ದ ‘ವಿಶ್ವ ಹೃದಯ ದಿನಾಚರಣೆ’ ಹಾಗೂ ‘ವಿಶ್ವ ಹಿರಿಯರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಧ್ಯಯನಕ್ಕೊಳಗಾದ ಹೃದ್ರೋಗಿಗಳಲ್ಲಿ ಶೇ 26ರಷ್ಟು ಖಾಸಗಿ ವಲಯದ ಉದ್ಯೋಗಿಗಳಾಗಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ಶೇ 24ರಷ್ಟು ಚಾಲಕರು ಎರಡನೇ ಸ್ಥಾನದಲ್ಲಿದ್ದಾರೆ. ಚಾಲಕರು ಪ್ರತಿ ದಿನ ಸಂಚಾರ ದಟ್ಟಣೆಯಲ್ಲಿ ಸಿಲುಕಿ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುತ್ತಿರುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗಿ ನಂತರ ಹೃದಯ ರೋಗ ಉಂಟಾಗುತ್ತಿದೆ. ವ್ಯಾಯಾಮವಿಲ್ಲದ ಜೀವನ, ಧೂಮಪಾನ ಹೃದಯ ರೋಗಕ್ಕೆ ಕಾರಣ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ, ಈಗ ವಾಯುಮಾಲಿನ್ಯವೂ ಕಾರಣವಾಗಿದ್ದು ಟ್ರಕ್, ಲಾರಿ ಚಾಲಕರು ಹೆಚ್ಚಾಗಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ’ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿ, ‘ಜಗತ್ತಿನಾದ್ಯಂತ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದಲ್ಲಿ ಸರಾಸರಿ 40ರಿಂದ 45 ವಯಸ್ಸಿನವರೇ ಹೃದಯಾಘಾತದಿಂದ ಮರಣ ಹೊಂದುತ್ತಿದ್ದಾರೆ. ಮೊದಲು ಶ್ರೀಮಂತರು, ನಗರವಾಸಿಗಳು, ಪುರುಷರು ಹಾಗೂ ಧೂಮಪಾನ ವ್ಯಸನಿಗಳನ್ನಷ್ಟೇ ಕಾಡುತ್ತಿದ್ದ ಈ ಕಾಯಿಲೆ ಇಂದು ಬಡವ, ಶ್ರೀಮಂತ, ಲಿಂಗ ಭೇದವಿಲ್ಲದೆ ಎಳೆಯ ಮಕ್ಕಳು, ರೈತರು ಹಾಗೂ ಮಹಿಳೆಯರನ್ನೂ ಕಾಡುತ್ತಿದೆ. ಹೆಚ್ಚುತ್ತಿರುವ ನಗರೀಕರಣ, ಆಹಾರ ಪದ್ಧತಿಯಲ್ಲಿ ಬದಲಾವಣೆ, ಮಾಲಿನ್ಯ, ವ್ಯಾಯಾಮ ಚಟುವಟಿಕೆಗಳಿಲ್ಲದ ಜೀವನ ಶೈಲಿ ಹೃದ್ರೋಗಿಗಳ ಸಂಖ್ಯೆ ಅಧಿಕವಾಗಲು ಕಾರಣವಾಗುತ್ತಿದ್ದು ಜನರು ಜಾಗೃತರಾಗಬೇಕಾಗಿದೆ’ ಎಂದರು.

ವಿಶ್ವ ಹಿರಿಯರ ದಿನಾಚರಣೆ ಅಂಗವಾಗಿ ಹಿರಿಯರನ್ನು ಸನ್ಮಾನಿಸಲಾಯಿತು. ತತ್ವಪದಗಾರ ಸಾಧುಚನ್ನಪ್ಪ, ಕಸಾಪ ಪದಾಧಿಕಾರಿಗಳಾದ ಆರ್.ಮುನಿರಾಜು, ನಾರಾಯಣಸ್ವಾಮಿ, ಆಸ್ಪತ್ರೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT