ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿತ್ರಿ ಬಾ ಫುಲೆ ಜನ್ಮದಿನ: ಅಕ್ಷರಕ್ರಾಂತಿಗೆ ನಾಂದಿ ಹಾಡಿದ ಅಕ್ಷರದವ್ವ

ಸಾವಿತ್ರಿ ಬಾ ಫುಲೆ ಜನ್ಮದಿನ, ಪ್ರತಿಭಾ ಕಾರಂಜಿ ವಿಜೇತರಿಗೆ ಸನ್ಮಾನ
Published 4 ಜನವರಿ 2024, 14:24 IST
Last Updated 4 ಜನವರಿ 2024, 14:24 IST
ಅಕ್ಷರ ಗಾತ್ರ

ದೇವನಹಳ್ಳಿ: ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗವಿರು ಕೊರಚರಪಾಳ್ಯ ಸರ್ಕಾರಿ ಶಾಲೆಯಲ್ಲಿ ಬುಧವಾರ ಸಾವಿತ್ರಿ ಬಾ ಫುಲೆ ಅವರ ಜನ್ಮದಿನಾಚರಣೆ ಹಾಗೂ ಪ್ರತಿಭಾ ಕಾರಂಜಿಯಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶಾಲೆಯ ಮುಖ್ಯಶಿಕ್ಷಕ ಪುಟ್ಟಸ್ವಾಮಿ ಮಾತನಾಡಿ, ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಎನ್‌. ಆರ್‌ . ಗಗನ್‌ ಲಗು ಸಂಗಿತದಲ್ಲಿ ಪ್ರಥಮ ಸ್ಥಾನ, ಪ್ರಾರ್ಥನ ಛದ್ಮವೇಷದಲ್ಲಿ ದ್ವಿತಿಯ ಹಾಗೂ ಹಿತೇಶ್‌ ಇಂಗ್ಲಿಷ್‌ ಕಂಠ ಪಾಠದಲ್ಲಿ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ. ಬೆಸ್ಕಾಂ ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಕೀರ್ತಿ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.

ಶಿಕ್ಷಕಿ ಶಕುಂತಲ ಮಾತನಾಡಿ, ಶಿಕ್ಷಣವೆಂದರೆ ತಿಳಿಯದ ಕಾಲದಲ್ಲಿ ಶಾಲೆ ತೆರೆದು ಭಾರತದಲ್ಲಿ ಅಕ್ಷರ ಕ್ರಾಂತಿಗೆ ಸಾವಿತ್ರಿಬಾಯಿ ಫುಲೆ ನಾಂದಿ ಹಾಡಿದರು. ಭಾರತದ ಶಿಕ್ಷಣ ವ್ಯವಸ್ಥೆಗೆ ಫುಲೆ ದಂಪತಿಗಳ ಕೊಡುಗೆ ಅಪಾರ. ಸ್ವಾತಂತ್ರ್ಯಕ್ಕೂ ಮುನ್ನವೇ ಇವರು ಅಜ್ಞಾನ ವಿಮೋಚನೆಗೆ ಅಕ್ಷರ ಕ್ರಾಂತಿ ಆರಂಭಿಸಿದ್ದರು. 1848ರಲ್ಲಿ ತಮ್ಮ ಮನೆಯಲ್ಲಿಯೇ ಶಾಲೆ ಆರಂಭಿಸುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಅಸ್ಪೃಶ್ಯರು ಮತ್ತು ಮಹಿಳೆಯರಿಗೆ ವಿದ್ಯಾದಾನ ಮಾಡುವ ಮೂಲಕ ಹೊಸ ಮನ್ವಂತರವೊಂದಕ್ಕೆ ನಾಂದಿ ಹಾಡಿದರು ಎಂದು ಸ್ಮರಿಸದರು.

ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾಫುಲೆ ಅವರಿಗೆ ಸಲ್ಲಬೇಕು. ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. ಸ್ತ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂದು ಹಿಂದೂ ಸಮಾಜ ಭಾವಿಸಿತು. ಅವರು ಪಾಠಶಾಲೆಗೆ ಹೊರಟಾಗ ಕೆಲವರು ಲೇವಡಿ ಮಾಡುತ್ತಿದ್ದರು. ಅವರ ಮೇಲೆ ಕೆಸರು, ಸಗಣಿ ಎರಚುತ್ತಿದ್ದರು. ಇವೆಲ್ಲವನ್ನು ಮೆಟ್ಟಿ ನಿಂತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರು ಎಂದು ಹೇಳಿದರು.

ಎರಚುವ ಸೆಗಣಿ, ತೂರುವ ಕಲ್ಲುಗಳನ್ನು ಹೂಗಳೆಂದು ಪರಿಭಾವಿಸಿ, ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ ಮತ್ತೊಂದು ಸೀರೆಯನ್ನು ಉಟ್ಟು ಪಾಠಕ್ಕೆ ಅಣಿಯಾಗುತ್ತಿದ್ದರು. ಆ ಸಮಯದಲ್ಲಿ 18 ಪಾಠಶಾಲೆಗಳನ್ನು ತೆರೆದರು. ಆಡಳಿತದ ಜವಾಬ್ದಾರಿಯನ್ನು ನಿರ್ವಹಿಸಿ, ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸುವುದರ ಮೂಲಕ ಜ್ಯೋತಿಬಾಫುಲೆ ಅವರಿಗೆ ನೆರವಾದರು ಎಂದರು.

ಇವರು ಸಮಾಜದ ಅನಿಷ್ಠ  ಪದ್ಧತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿ, ಕೇಶ ಮುಂಡನೆ ವಿರುದ್ಧ ಹೋರಾಟ ನಡೆಸಿ, ಅವುಗಳ ನಿರ್ಮೂಲನಗೆ ಶ್ರಮಿಸಿದರು. ಬ್ರಿಟಿಷ್‌ ಸರ್ಕಾರ ಇವರಿಗೆ ‘ಇಂಡಿಯಾಸ್‌ ಫಸ್ಟ್ ಲೇಡಿ ಟೀಚರ್‌’ ಎಂದು ಬಿರುದು ಕೂಡ ಕೊಟ್ಟಿದೆ ಎಂದರು.

ಎಸ್‌ಡಿಎಂಸಿ ಉಪಾಧ್ಯಕ್ಷ, ವೇಣು, ವೆಂಕಟೇಶ್‌, ಸಹ ಶಿಕ್ಷಕರಾದ ಚಂಪಕ, ಗಿರಿಜಾ, ಸಾವಿತ್ರಮ್ಮ, ಸುಮಾ ರಾಣಿ, ಮಧುಕುಮಾರಿ, ಸವಿತ, ಸುಮಲತ, ಅತಿಥಿ ಶಿಕ್ಷಕರಾದ ಎಸ್. ಅಶ್ವಿನಿ, ಸವಿತ, ಕವಿತ, ಸುರೇಖ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT