ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಏಳಿಗೆಗೆ ಆಂಧ್ರ ಗಾಯಕನ ಶ್ರಮ

ಧಾರ್ಮಿಕ, ಆಧ್ಯಾತ್ಮಿಕ ಸಭೆ, ಸಮಾರಂಭದಲ್ಲಿ ಇವರ ಹಾಡುಗಾರಿಕೆಗೆ ಕಾಯಂ ಸ್ಥಾನ
Last Updated 10 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ವಿಜಯಪುರ: ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿ ಉಳಿವಿಗಾಗಿ ಅನೇಕ ಕನ್ನಡಪರ ಸಂಘಟನೆಗಳು, ಸಂಘ –ಸಂಸ್ಥೆಗಳು ನಿರಂತರವಾಗಿ ಹೋರಾಟ ನಡೆಸುತ್ತಲೇ ಇವೆ. ಇದರ ಹೊರತಾಗಿಯೂ ಅನೇಕ ಭಾಷಾ ಚಳವಳಿಗಳು ಕನ್ನಡದ ಉಳಿವಿಗೆ ಟೊಂಕ ಕಟ್ಟಿ ನಿಂತಿವೆ. ಇಂತಹ ವಿಶೇಷಗಳ ನಡುವೆ ಆಂಧ್ರಪ್ರದೇಶದ ಗಾಯಕರೊಬ್ಬರು ಕನ್ನಡ ಗೀತೆಗಳ ಗಾಯನದ ಮೂಲಕ ಕನ್ನಡ ಉಳಿವಿಗೆ ಶ್ರಮಿಸುತ್ತಿರುವುದು ಇಲ್ಲಿನ ವಿಶೇಷ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಚನ್ನಕೊತ್ತಪಲ್ಲಿ (ಮಂಡಲ) ತಾಲ್ಲೂಕಿನ ನ್ಯಾಮದ್ದಲ ನಿವಾಸಿಗಳಾದ ಸಾಕಮ್ಮ, ನಾರಾಯಣಪ್ಪ ಅವರ ಎರಡನೇ ಪುತ್ರ ನರಸಿಂಹಪ್ಪ ಕನ್ನಡ ಭಾಷೆ ಬೆಳವಣಿಗೆಗಾಗಿ ಗಾಯನದ ಮೂಲಕ ಯುವ ಜನರಲ್ಲಿ ಕನ್ನಡದ ಕಂಪು ಪಸರಿಸುತ್ತಿದ್ದಾರೆ.

‌ತಂದೆ, ತಾಯಿ ವೃತ್ತಿ ಬಿದಿರು ಬುಟ್ಟಿ ನೇಯ್ಗೆ. 40 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮಕ್ಕೆ ಬಂದ ಈ ಕುಟುಂಬ ಬಿದಿರು ಬುಟ್ಟಿ ನೇಯುವ ಕೆಲಸ ಮಾಡುತ್ತಾ ಇಲ್ಲೇ ನೆಲೆ ನಿಂತಿದೆ.ಮೂರನೇ ತರಗತಿವರೆಗೂ ಶಿಕ್ಷಣ ಪಡೆದಿರುವ ನರಸಿಂಹಪ್ಪ, ಬಾಲ್ಯದಿಂದಲೇ ಭಜನೆಗಳಿಗೆ ಮನಸೋತವರು. ತೆಲುಗು ಭಾಷೆಯ ‘ಪೆದ್ದಬಾಲ ಶಿಕ್ಷಾ’ ಪುಸ್ತಕದಲ್ಲಿ ಅಕ್ಷರಗಳನ್ನು ಕಲಿತು, ಮೊಬೈಲ್‌ನಲ್ಲಿ ಕನ್ನಡ ಹಾಡುಗಳನ್ನು ಕೇಳಿಸಿಕೊಂಡು ಹಾಡುಗಾರಿಕೆ ಕರಗತ ಮಾಡಿಕೊಂಡಿದ್ದಾರೆ.

ತೆಲುಗು ಭಾಷೆಯಲ್ಲಿಹಾಡುಗಳನ್ನು ಬರೆದುಕೊಂಡು ಕನ್ನಡದಲ್ಲಿ ನಿರರ್ಗಳವಾಗಿ ಹಾಡುತ್ತಾರೆ. ಮಳ್ಳೂರಿನಿಂದ ವಿಜಯಪುರಕ್ಕೆ ಬಂದು ನೆಲೆಸಿದ ನಂತರ ಎಲೆಮರೆ ಕಾಯಿಯಂತೆ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಇವರನ್ನು ಸಂಗೀತ ಶಿಕ್ಷಕ ಎಂ.ವಿ.ನಾಯ್ಡು ಅವರು ಗುರ್ತಿಸಿ ಭಜನೆ, ಶ್ರೀಕೃಷ್ಣ ಸತ್ಸಂಗ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ಶಾಲಾ ಕಾರ್ಯಕ್ರಮಗಳಲ್ಲಿ ಅವಕಾಶ ಒದಗಿಸಿಕೊಟ್ಟು ಕನ್ನಡದ ಹಿರಿಮೆ ಬೆಳೆಸಲು ನೆರವಾಗಿದ್ದಾರೆ.

ಸಂಗೀತ ಪರಿಚಯ ಇಲ್ಲದಿದ್ದರೂ ಉತ್ತಮ ಕಂಠಸಿರಿ ಹೊಂದಿದ್ದಾರೆ. ಘಂಟಸಾಲ ಹಾಡುಗಳು ಎಂದರೆ ಇವರಿಗೆ ಪಂಚಪ್ರಾಣ. ಧರ್ಮಸ್ಥಳದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಇವರಿಗೆ ವಿಶೇಷ ಆಹ್ವಾನ ಇದ್ದೇ ಇರುತ್ತದೆ. ಕೋಟಿಲಿಂಗೇಶ್ವರ ದೇಗುಲ, ಕೈವಾರದ ಯೋಗಿನಾರೇಯಣ ಯತೀಂದ್ರರ ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇವರ ಹಾಡುಗಾರಿಕೆ ಕಾಯಂ.

ಗಾಯಕ ರಾಜೇಶ್‌ ಕೃಷ್ಣನ್ ಸೇರಿದಂತೆ ಹಲವು ಮಂದಿ ಸಂಗೀತ ದಿಗ್ಗಜರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸ್ಥಳೀಯರು ಪ್ರೀತಿಯಿಂದ ಜೂನಿಯರ್ ಕನ್ನಡ ಘಂಟಸಾಲ ಎಂದೇ ಕರೆಯುತ್ತಾರೆ. ಜಾನಪದ ಗೀತೆ ಗಾಯನದಲ್ಲೂ ಇವರದ್ದು ಎತ್ತಿದ ಕೈ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ತಪ್ಪದೇ ಇವರ ಕನ್ನಡ ಗೀತಗಾಯನ ಇದ್ದೇ ಇರುತ್ತದೆ.

ತುತ್ತಿನ ಚೀಲ ತುಂಬಿಸಿಕೊಳ್ಳಲು ಇಲ್ಲಿನ ಸ್ವಾನ್‌ಸಿಲ್ಕ್ ಖಾಸಗಿ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಲೇ ಕನ್ನಡ ಕೈಂಕರ್ಯದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT