ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆಗೂ ತುಂಬದ ಆನೇಕಲ್ ದೊಡ್ಡ ಕೆರೆ

ರಾಜಕಾಲುವೆ ಒತ್ತುವರಿ ಪರಿಣಾಮ l 25 ವರ್ಷಗಳಿಂದ ಭರ್ತಿಯಾಗದ ಕೆರೆ
Last Updated 19 ಸೆಪ್ಟೆಂಬರ್ 2022, 4:03 IST
ಅಕ್ಷರ ಗಾತ್ರ

ಆನೇಕಲ್: ಈ ವರ್ಷ ಸುರಿದ ವರ್ಷಧಾರೆಗೆ ತಾಲ್ಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿದು ಹೊಲ ಗದ್ದೆಗಳಿಗೆ ಹರಿದಿದೆ. ಆದರೆ ಆನೇಕಲ್‌ ದೊಡ್ಡಕೆರೆ ಎಂದೇ ಖ್ಯಾತಿ ಪಡೆದಿರುವ ದೊಡ್ಡಕೆರೆ ಮಾತ್ರ ತುಂಬುವ ಸೂಚನೆ ಕಾಣುತ್ತಿಲ್ಲ !

ಸುಮಾರು 200 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಆನೇಕಲ್‌ನ ದೊಡ್ಡಕೆರೆ ಕಳೆದ 25 ವರ್ಷಗಳಿಂದ ತುಂಬಿಲ್ಲ. ಈ ಬಾರಿ ಅತಿ ಹೆಚ್ಚು ಮಳೆ ಸುರಿದರೂ ನೀರು ತುಂಬದೆ ಇರುವುದು ಜನರ ಕಳವಳಕ್ಕೆ ಕಾರಣವಾಗಿದೆ.

ಆನೇಕಲ್‌ ಸುತ್ತಮುತ್ತಲಿನ ಪ್ರದೇಶ ಜಲಮೂಲ ಸಂರಕ್ಷಿಸುವ ಅಂತರ್ಜಲ ಕಾಪಾಡುವ ದೊಡ್ಡ ಕೆರೆ ಇತ್ತೀಚಿನ ದಿನಗಳಲ್ಲಿ ರಾಜಕಾಲುವೆಗಳ ಒತ್ತುವರಿ ಹಾಗೂ ತ್ಯಾಜ್ಯ ನೀರಿನ ಸೇರ್ಪಡೆಯಿಂದ ಅಳಿವಿನಂಚಿಗೆ ತಲುಪಿದೆ.

ಪಟ್ಟಣಕ್ಕೆ ಹೊಂದಿಕೊಂಡಿರುವ ಆನೇಕಲ್‌ ದೊಡ್ಡಕೆರೆ ನೀರಿನ ಮೂಲಗಳು ಮುಚ್ಚಿಹೋಗಿದ್ದು, ಚರಂಡಿ ಮತ್ತು ಕಲುಷಿತ ನೀರು ಕೆರೆ ಒಡಲು ಸೇರುತ್ತಿದೆ. ಕೆರೆ ತುಂಬ ಜೊಂಡು ಬೆಳೆದುಕೊಂಡಿದೆ. ಇದರಿಂದಾಗಿ ಕೆರೆ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಗಬ್ಬು ನಾರುತ್ತಿದೆ.

ಕೆರೆಗೆ ಬಾರದ ಮಳೆ ನೀರು

ದೊಡ್ಡಕೆರೆಗೆ ನೀರಿನ ಮೂಲವಾಗಿರುವ ಸುತ್ತಮುತ್ತಲಿನ ಪ್ರದೇಶ ಹಾಗೂ ರಾಜಕಾಲುವೆಗಳು ಒತ್ತುವರಿಯಾಗಿರುವ ಕಾರಣ ಮಳೆ ನೀರು ಕೆರೆಗೆ ಬರುತ್ತಿಲ್ಲ. ಇಂಡ್ಲವಾಡಿ ಕ್ರಾಸ್, ಸಿಡಿಹೊಸಕೋಟೆಯ ಮೂಲಕ ನೀರು ಕೆರೆ ಸೇರುತ್ತಿತ್ತು. ಚಿಕ್ಕಹೊಸಹಳ್ಳಿ, ಕರಕಲಘಟ್ಟ, ಚೆತ್ತೆಕೆರೆ ತುಂಬಿ ರಾಜಕಾಲುವೆಯ ಮೂಲಕ ನೀರು ಹರಿದು ದೊಡ್ಡಕೆರೆಗೆ ಬರುತ್ತಿತ್ತು. ಆದರೆ ಈ ರಾಜಕಾಲುವೆಗಳು ಒತ್ತುವರಿಯಾಗಿವೆ. ಇದರಿಂದ ಮಳೆ ನೀರು ದಾರಿ ತಪ್ಪಿ ಹರಿಯುತ್ತಿದೆ. ಆನೇಕಲ್ ದೊಡ್ಡಕೆರೆಗೆ ನಾಲ್ಕು ದಿಕ್ಕುಗಳಿಂದಲೂ ನೀರು ಹರಿದು ಬರುತ್ತದೆ. ಆದರೆ ಈಗ ಚರಂಡಿ ನೀರು ಹೊರತುಪಡಿಸಿ ಬೇರಾವುದೇ ದಿಕ್ಕುಗಳಿಂದ ನೀರು ಬರುತ್ತಿಲ್ಲ.

ಒಂದು ಕೆರೆಗೆ ಜೀವಕಳೆ ಮಳೆಯ ನೀರು. ಇಂಡ್ಲವಾಡಿ ಕ್ರಾಸ್‌ನಿಂದ ಗೌರೇನಹಳ್ಳಿ ಮೂಲಕ ಮಳೆ ನೀರು ಹರಿದು ಬರಲು ದಾರಿಯಿದೆ. ಆದರೆ ಈ ನೀರು ಕೆರೆಯತ್ತ ಬರುತ್ತಿಲ್ಲ. ಪಕ್ಕಕ್ಕೆ ಹರಿದು ಹೋಗುತ್ತಿದೆ. ಹಾಗಾಗಿ ಮಳೆ ಬಂದರೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ತುಂಬಿಕೊಳ್ಳುತ್ತಿದೆ. ರಾಜಕಾಲುವೆ ತೆರವು ಮಾಡುವ ಸಂಬಂಧ ವಿಸ್ತೃತ ವರದಿಯನ್ನ(ಡಿಪಿಆರ್‌) ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಇದರಂತೆ ತೆರವು ಕಾರ್ಯಾಚರಣೆ ನಡೆಸಿದರೆ ಕೆರೆ ತುಂಬಲು ಇರುವ ಅಡೆತಡೆ ನಿವಾರಣೆಯಾಗಲಿದೆ ಎನ್ನುತ್ತಾರೆ ಕೆರೆ ಸಂರಕ್ಷಣೆ ಹೋರಾಟಗಾರ ಕ್ಯಾಪ್ಟನ್‌ ಸಂತೋಷ್‌.

ಕೆರೆಗೆ ಕೆ.ಸಿ.ವ್ಯಾಲಿಯಿಂದ ನೀರು ಹರಿದುಬರುತ್ತಿದೆ. ಆದರೆ ಈ ನೀರು ಚಂದಾಪುರ, ಮುತ್ತಾನಲ್ಲೂರು ಕೆರೆಗಳ ಮೂಲಕ ಪೈಪ್‌ಗಳಲ್ಲಿ ಹರಿದು ಬರುತ್ತಿದೆ. ಈ ಕೆರೆಗಳಿಗೆ ಸುತ್ತಮುತ್ತಲಿನ ಕೈಗಾರಿಕ ಪ್ರದೇಶದ ತ್ಯಾಜ್ಯ ನೀರು ಹರಿದು ಕಲುಷಿತವಾಗುತ್ತಿದೆ. ಕಲುಷಿತ ನೀರು ದೊಡ್ಡಕೆರೆಗೆ ಬರುತ್ತಿದೆ. ಇದರೊಂದಿಗೆ ತ್ಯಾಜ್ಯ ನೀರು ಸೇರಿಕೊಂಡು ಗಬ್ಬುನಾರುತ್ತಿದೆ. ಹಾಗಾಗಿ ಕೆರೆಗೆ ಮರುಜೀವ ನೀಡಿ ಸುಂದರಗೊಳಿಸುವ ನಿಟ್ಟಿನಲ್ಲಿ ಸರ್ಕಾರ, ಸಂಘ ಸಂಸ್ಥೆಗಳು, ಆನೇಕಲ್‌ ನಾಗರಿಕರು ಸಂಕಲ್ಪ ಮಾಡಿ ದೊಡ್ಡಕೆರೆಗೆ ಜೀವ ತುಂಬಬೇಕು ಎಂದು ಹೇಳಿದರು.

ಕೆರೆ ಅವಸಾನದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕೆಂಬ ಆಗ್ರಹಕೇಳಿಬಂದಿದೆ. ನಕಾಶೆಯಲ್ಲಿ ಸೂಚಿಸಿರುವ ಎಲ್ಲಾ ರಾಜಕಾಲುವೆ ತೆರವುಗೊಳಿಸಿದರೆ ಆನೇಕಲ್‌ ದೊಡ್ಡಕೆರೆಗೆ ನೀರು ತುಂಬಿ ಮತ್ತೆ ಜೀವಕಳೆ ಬರಲಿದೆ.

ದೊಡ್ಡಕೆರೆ ಸಮೀಕ್ಷೆ, ಗಡಿ, ಬಫರ್‌ ಝೋನ್‌, ಕೆರೆ ನೀರಿನ ಮೂಲ ಗುರುತಿಸಿ ಕೆರೆಗೆ ನೀರು ಹರಿದು ಬರುವಂತೆ ಮಾಡಬೇಕೆಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ. ದೊಡ್ಡಕೆರೆ ಮತ್ತೆ ಗತವೈಭವಕ್ಕೆ ಮರಳಿದರೆ ಆನೇಕಲ್‌ ಸುತ್ತಮುತ್ತ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟದ ವೃದ್ಧಿಯಾಗುತ್ತದೆ ಎನ್ನುತ್ತಾರೆ ಅವರು.

ಕೆರೆಯ ಸುತ್ತಮುತ್ತಲಿನ ಪ್ರದೇಶ ಸ್ವಚ್ಛಗೊಳಿಸಿ ಸುತ್ತಲೂ ವಾಕಿಂಗ್‌ ಪಾಥ್‌ ನಿರ್ಮಿಸಿ ಸುಂದರ ತಾಣವನ್ನಾಗಿ ಮಾಡಬೇಕೆಂದು ಕೂಡ ಸ್ಥಳೀಯ ನಿವಾಸಿಗಳ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT