ಆನೇಕಲ್: ಕಾರು ಗಾಜು ಹೊಡೆದು ಸುಮಾರು ₹60 ಲಕ್ಷ ಮೌಲ್ಯದ ಚಿನ್ನ ಮತ್ತು 70.3 ಗ್ರಾಂ ತೂಕದ ವಜ್ರದ ಒಡವೆಯನ್ನು ಕಳ್ಳತನ ಮಾಡಿದ್ದ ಇಬ್ಬರು ಅಂತರ್‌ರಾಜ್ಯ ಕಳ್ಳರನ್ನು ಬಂಧಿಸಿರುವ ಸರ್ಜಾಪುರ ಪೊಲೀಸರು, ಬಂಧಿತರಿಂದ ಚಿನ್ನಾಭರಣ ವಶಪಡಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಾವೇಟಿ ಪುರಂನ ಪಾಂಡು ರಂಗ(44) ಮತ್ತು ಅಂಕಯ್ಯ(20) ಬಂಧಿತ ಆರೋಪಿಗಳು.
ಫೆ.23ರಂದು ಲಕ್ಷ್ಮೀನಾರಾಯಣ ಎಂಬುವವರು ತಮ್ಮ ಪತ್ನಿಯೊಂದಿಗೆ ಅತ್ತಿಬೆಲೆ ಯೂನಿಯನ್ ಬ್ಯಾಂಕ್‌ನಲ್ಲಿ ತಮ್ಮ ಲಾಕರ್‌ನಲ್ಲಿದ್ದ ಒಡವೆಗಳನ್ನು ತೆಗೆದುಕೊಂಡು ಸ್ವಿಫ್ಟ್ ಕಾರಿನಲ್ಲಿ ಇರಿಸಿದ್ದರು. ದೊಮ್ಮಸಂದ್ರ ರಸ್ತೆಯ ಮುತ್ತಾನಲ್ಲೂರು ಕ್ರಾಸ್ ಬಳಿ ಕಾರು ನಿಲ್ಲಿಸಿ ಸಾಮಗ್ರಿ ಖರೀದಿಸಲು ಅಂಗಡಿಗೆ ಹೋದಾಗ ಆರೋಪಿಗಳು ಕಾರಿನ ಗ್ಲಾಸ್ ಹೊಡೆದು ಆಭರಣ ಕಳವು ಮಾಡಿದ್ದರು.
ಸರ್ಜಾಪುರ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಆರೋಪಿಗಳ ಪತ್ತೆಗಾಗಿ ಕಾರ್ಯಪ್ರವೃತರಾಗಿ ಸಿಸಿ ಕ್ಯಾಮೆರಾ ಪರಿಶೀಲಿಸಿ, ಈ ಹಿಂದೆ ಇದೇ ಮಾದರಿಯಲ್ಲಿ ಕಳವು ಮಾಡಿದ್ದ ವ್ಯಕ್ತಿಗಳ ಮಾಹಿತಿ ಕಲೆ ಹಾಕಿದರು. ಆಗ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಾಂಡುರಂಗ ಮತ್ತು ಅಂಕಯ್ಯ ಎಂಬ ಆರೋಪಿಗಳ ಮಾಹಿತಿ ಹೋಲಿಕೆಯಾದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಹಿಂದೆ ಆರೋಪಿಗಳು ಹೊಸಕೋಟೆ ಪೊಲೀಸ್ ಠಾಣೆ, ಸವದತ್ತಿ ಪೊಲೀಸ್ ಠಾಣೆ, ಬೆಂಗಳೂರು ಅಶೋಕ್‌ನಗರ ಪೊಲೀಸ್ ಠಾಣೆ, ಯಲಹಂಕ, ಚಂದ್ರಾಲೇಔಟ್ ಸೇರಿದಂತೆ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎ.ಎಸ್.ಪಿ ಎಂ.ಎಲ್.ಪುರುಷೋತ್ತಮ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.