ಗುರುವಾರ , ಅಕ್ಟೋಬರ್ 17, 2019
27 °C

ಜೈನ್ ಟ್ರಸ್ಟ್‌ಗೆ ಹೆಚ್ಚುವರಿ ಜಾಗ ನೀಡದಂತೆ ಮನವಿ

Published:
Updated:
Prajavani

ದೇವನಹಳ್ಳಿ: ‘ಈಗಾಗಲೇ 30.09 ಎಕರೆ ಪಾರಿವಾಳ ಗುಡ್ಡದ ಜಮೀನು ಜೈನ್ ಸಮುದಾಯದ ಸಿದ್ಧಚಲ ಸ್ಥೂಲಭದ್ರಧಾಮ ಶಾಸನ ಪ್ರಭಾವ ಟ್ರಸ್ಟ್‌ಗೆ 99 ವರ್ಷ ಅವಧಿಗೆ ಸರ್ಕಾರ ಗುತ್ತಿಗೆ ನೀಡಿದ್ದು, ಮತ್ತೆ ಹೆಚ್ಚುವರಿ ಜಮೀನು ಟ್ರಸ್ಟ್‌ಗೆ ನೀಡಬಾರದು’ ಎಂದು ಸಚಿವ ಸಿ.ಟಿ.ರವಿಗೆ ಮಾರುತಿ ಭಕ್ತ ಮಂಡಳಿಯವರು ಮನವಿ ಮಾಡಿದರು.

ಮನವಿ ಪತ್ರ ಸಲ್ಲಿಸಿ ಮಾಹಿತಿ ನೀಡಿದ ಪಾರಿವಾಳ ಗುಡ್ಡದ ಜೈ ಮಾರುತಿ ಭಕ್ತ ಮಂಡಳಿ ಸದಸ್ಯರಾದ ಬಿ.ಕೆ.ಶಿವಪ್ಪ ಮತ್ತು ಮುನಿರಾಜು ‘1999 ಅ.8ರಂದು ಹಲವು ನಿಬಂಧನೆಗಳನ್ನು ವಿಧಿಸಿ 99 ವರ್ಷ ಅವಧಿಗೆ ಸರ್ಕಾರ ಉಚಿತವಾಗಿ ನೀಡಿದೆ. ವಿಧಿಸಿರುವ ಯಾವ ಷರತ್ತನ್ನೂ ಪ್ರಭಾವ ಟ್ರಸ್ಟ್ ಪಾಲಿಸಿಲ್ಲ. ಅಂಧರಿಗೆ ಆಸ್ಪತ್ರೆ, ಧರ್ಮಛತ್ರ, ದೇವಸ್ಥಾನ ನಿರ್ಮಿಸಿಲ್ಲ. ಕೇವಲ ಜೈನ ಮಂದಿರಗಳನ್ನು ಸ್ಥಾಪಿಸುತ್ತಿದೆ’ ಎಂದು ತಿಳಿಸಿದರು.

‘ಪುರಾತನ ಕಾಲದಿಂದ ಶ್ರೀ ಆಂಜನೇಯಸ್ವಾಮಿ ದೇವಾಲಯವಿದೆ. ಪ್ರತಿ ವರ್ಷ ನಡೆಯುವ ಕಡಲೆಕಾಯಿ ಪರಿಷೆಗೆ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಪಾರಿವಾಳ ಗುಡ್ಡದ ಮೇಲೆ ಪುರಾತನ ಗುಹೆಗಳು, ಗಣಪತಿ, ಗವಿ ವೀರಭದ್ರಸ್ವಾಮಿ, ಗವಿ ಬೀರಲಿಂಗೇಶ್ವರ ಮತ್ತು ಕನಕದಾಸರ ದೇವಾಲಯಗಳಿವೆ. ಚಿಕ್ಕವೀರಪ್ಪ ಎಂಬ ಸಾಧುವಿನ ಸಮಾಧಿ, ನಾಗರಕಲ್ಲು ಮತ್ತು ಅಶ್ವತ್ಥಕಟ್ಟೆ ಇದೆ. ಶಾಸನ ಪ್ರಭಾವಿಕ ಟ್ರಸ್ಟ್ ಹಿಂದು ಧಾರ್ಮಿಕ ಕಾರ್ಯಕ್ರಮಗಳಗೆ ಅಡ್ಡಿಪಡಿಸುತ್ತಿದೆ’ ಎಂದು ಅವರು ದೂರಿದರು.

‘ಐತಿಹಾಸಿಕ ಪಾರಿವಾಳ ಗುಡ್ಡದ ಬಂಡೆಗಳನ್ನು ಒಡೆದು ಬೆಟ್ಟದ ಐತಿಹಾಸಿಕ, ಸ್ವಾಭಾವಿಕ ರಚನೆಯನ್ನು ಹಾಳು ಮಾಡುಲಾಗುತ್ತಿದೆ. ನೀಡಿರುವ ಜಾಗದ ಜೊತೆಗೆ ಇತರೆ ಸರ್ಕಾರಿ ಜಾಗ ಒತ್ತುವರಿ ಮಾಡಿ ತಡೆಗೋಡೆ ನಿರ್ಮಿಸಲಾಗಿದೆ. ಪ್ರಶ್ನಿಸುವವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದೆ’ ಎಂದು ಹೇಳಿದರು.

‘ಪ್ರಸ್ತುತ ಇರುವ ಸರ್ಕಾರಿ ಜಾಗದಲ್ಲಿ ಸಾರ್ವಜನಿಕರಿಂದ ಮತ್ತು ಪರಿಸರ ಪ್ರೇಮಿಗಳಿಂದ ಔಷಧ ವನ ನಿರ್ಮಿಸಲಾಗಿದೆ. ಜೊತೆಗೆ ಯೋಗಮಂದಿರ, ಗೋಶಾಲೆ ನಿರ್ಮಿಸುವ ಚಿಂತನೆ ಇದೆ. ಸ್ಥಳೀಯ ಸಾರ್ವಜನಿಕರಿಗೆ ಸರ್ಕಾರಿ ಜಾಗ ಮೀಸಲು ಇಡಬೇಕು. ಯಾವುದೇ ಕಾರಣಕ್ಕೂ ಟ್ರಸ್ಟ್‌ಗೆ ನೀಡಬಾರದು’ ಎಂದು ಮನವಿ ಮಾಡಿದರು.

ಮಾರುತಿ ಭಕ್ತ ಮಂಡಳಿ ಸದಸ್ಯರಾದ ಕೃಷ್ಣಮೂರ್ತಿ, ಲೋಕೇಶ್, ಸತ್ಯನಾರಾಯಣಾಚಾರ್, ಎಸ್.ಆರ್.ಮುನಿರಾಜು, ಎಂ.ಮುನಿರಾಜು, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಿ.ರಾಜಣ್ಣ, ಉಪಾಧ್ಯಕ್ಷ ಎಚ್.ರವಿಕುಮಾರ್, ಮುಖಂಡ ರಾಜಣ್ಣ, ಜಿ.ಎನ್.ಗೋಪಾಲ್ ಇದ್ದರು.

Post Comments (+)