ಮಂಗಳವಾರ, ಜೂನ್ 28, 2022
26 °C
ಕೊರೊನಾ ವಾರಿಯರ್ಸ್‌ ಕಾರ್ಯಕ್ಕೆ ಶ್ಲಾಘನೆ

ಲಸಿಕೆ ನೀಡುವಲ್ಲಿ ಎಡವಿದ ರಾಜ್ಯ ಸರ್ಕಾರ: ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಕೋಟೆ: ‘ಕೊರೊನಾ ಸೋಂಕಿಗೆ ತುತ್ತಾದವರಲ್ಲಿ ಕೇವಲ ಶೇಕಡ 10ರಷ್ಟು ಜನ ಮಾತ್ರ ಆಸ್ಪತ್ರೆಗಳಿಗೆ ಸೇರಿದ್ದು ಉಳಿದವರು ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಆಸ್ಪತ್ರೆಗಳಿಗೆ ಬಂದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿತ್ತು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲ್ಲೂಕಿನ ಕುಂಬಳಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಿಕ್ಷಕರಿಗೆ ದಿನಸಿ ಕಿಟ್ ನೀಡಿ ಅವರು ಮಾತನಾಡಿದರು.

ಹೋಮ್ ಕ್ವಾರಂಟೈನ್‌ನಲ್ಲಿರುವವರಿಗೆ ಚಿಕಿತ್ಸೆ ನೀಡುತ್ತಿರುವ ಕೊರೊನಾ ವಾರಿಯರ್ಸ್‌ ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ತಗ್ಗುತ್ತಿದೆ’ ಎಂದರು.

ಕೊರೊನಾ ವಾರಿಯರ್ಸ್‌ ಮನೆ ಮನೆಗಳಿಗೆ ಭೇಟಿ ನೀಡಿ ಸೋಂಕಿತರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ಸೋಂಕಿತರು ಪತ್ತೆಯಾಗಿದ್ದು, ಸಮಸ್ಯೆಯು ಪ್ರಾಥಮಿಕ ಹಂತದಲ್ಲಿಯೇ ಪರಿಹಾರವಾಗಿದೆ. ಅದಕ್ಕಾಗಿ ತಾಲ್ಲೂಕಿನ ಎಲ್ಲಾ ಫ್ರಂಟ್‌ಲೈನ್ ವಾರಿಯರ್ಸ್‌ಗಳಿಗೆ ದಿನಸಿ ಕಿಟ್ ನೀಡಿ ಅವರನ್ನು ಗೌರವಿಸಲಾಗುತ್ತಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ ಮಾತನಾಡಿ, ರಾಜ್ಯದಲ್ಲಿ ಕೊರೊನಾ ತಡೆಯುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ. ಪ್ರಾರಂಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಸರ್ಕಾರ ಜನರ ಸಾವು, ನೋವಿಗೆ ಕಾರಣವಾಗಿದೆ ಎಂದು ತಿಳಿಸಿದರು.

ಈಗಲೂ ಲಸಿಕೆ ವಿಚಾರದಲ್ಲಿ ಸರಿಯಾಗಿ ಯೋಜನೆ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ತಿಳಿಸಿದಂತೆ ಕಾಂಗ್ರೆಸ್ ಪಕ್ಷವೂ ಲಸಿಕೆಗಾಗಿ ನೀಡಲು ಬಯಸಿದ್ದ ₹ 100 ಕೋಟಿ ತೆಗೆದುಕೊಳ್ಳದೆ ರಾಜಕೀಯ ಮಾಡುತ್ತಿದೆ ಎಂದು ದೂರಿದರು.

‘ಸೋಂಕು ತಡೆಯಲು ವಿಫಲವಾಗಿರುವ ಸರ್ಕಾರ ವಿರೋಧ ಪಕ್ಷವನ್ನು ಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ’ ಎಂದು ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಮುನಿಯಪ್ಪ ಆರೋಪಿಸಿದರು.

ಪಕ್ಷದ ನಾಯಕರ ಸಲಹೆ ಪಡೆಯದೆ ಸರ್ಕಾರ ಕೆಲಸ ಮಾಡುತ್ತಿದೆ. ಆದರೂ, ಪಕ್ಷದ ಎಲ್ಲಾ ಹಂತದ ಕಾರ್ಯಕರ್ತರು ರಸ್ತೆಗಿಳಿದು ಕೆಲಸ ಮಾಡುತ್ತಿದ್ದೇವೆ. ಬಡವರಿಗೆ ದಿನಸಿ ಕಿಟ್ ಹಂಚುವುದು, ಆಹಾರ ನೀಡುವುದೂ ಸೇರಿದಂತೆ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ತಮಗೆ ರಾಜಕೀಯ ಕ್ಕಿಂತ ಜನತೆಯ ಆರೋಗ್ಯವೇ ಮುಖ್ಯ ಎಂದು ತಿಳಿಸಿದರು.

ಕಾಂಗ್ರೆಸ್‌ನ ಎಲ್ಲಾ ಶಾಸಕರು, ಪಕ್ಷದ ಮುಖಂಡರು ರಾಜ್ಯದಾದ್ಯಂತ ಕೆಲಸ ಮಾಡುತ್ತಿದ್ದಾರೆ. ಶಾಸಕ ಶರತ್ ಬಚ್ಚೇಗೌಡ ತಾಲ್ಲೂಕಿನಲ್ಲಿ ಕೊರೊನಾ ಪ್ರಾರಂಭದಿಂದ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು