ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲವೃದ್ಧಿ: ಗುರಿ ಮುಟ್ಟದ ಸಾಧನೆ

ಹೆಬ್ಬಾಳ – ನಾಗವಾರ ಕೆರೆಗಳ ಸಂಸ್ಕರಿಸಿದ ನೀರಿನಿಂದಲೂ ಇಲ್ಲದ ಉಪಯೋಗ
Last Updated 22 ಮಾರ್ಚ್ 2021, 3:12 IST
ಅಕ್ಷರ ಗಾತ್ರ

ದೇವನಹಳ್ಳಿ: ಜಿಲ್ಲೆಯಲ್ಲಿ 2015 ರಿಂದ 2018ನೇ ಸಾಲಿನವರೆಗೆ ಸತತ ನಾಲ್ಕು ವರ್ಷ ಜಿಲ್ಲೆಯಲ್ಲಿ ಸಕಾಲದಲ್ಲಿ ಮಳೆ ಸುರಿಯದೆ ಅಂತರ್ಜಲ ಕುಸಿತಗೊಂಡಿದೆ. ಕುಡಿಯುವ ನೀರು, ಜಾನುವಾರುಗಳಿಗೆಮೇವಿಗಾಗಿ ರೈತರು ಪರಿ ತಪಿಸುವಂತಾಗಿದೆ.

ಸರ್ಕಾರ ಎಚ್ಚತ್ತುಕೊಂಡು ನಾಲ್ಕು ವರ್ಷ ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ ಉದ್ಯೋಗ ಖಾತ್ರಿ ಯೋಜನೆಯಡಿ ಅಂತರ್ಜಲ ವೃದ್ಧಿಗೆ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಗುರಿ ತಲುಪ‍ಲು ಸಾಧ್ಯವಾಗಿಲ್ಲ.

2020-21ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗೆ ಅನುಗುಣವಾಗಿ ಸಕಾಲದಲ್ಲಿ ಮಳೆ ಸುರಿದಿದೆಯೇ ಹೊರತು ನೀರು ಸಂಗ್ರಹ ವಾಗಿಲ್ಲ. ತಾಲ್ಲೂಕಿನಲ್ಲಿ ಕೊಯಿರಾ ಕೆರೆ ಕೋಡಿ ಹರಿದಿರುವುದು ಬಿಟ್ಟರೆ ಬೇರೆ ಯಾವುದೇ ಕೆರೆಗಳು ಮಳೆ ನೀರಿನಿಂದ ತುಂಬಿಲ್ಲ. ಕುಂಟೆ, ಕೆರೆಗಳಲ್ಲಿ ನೀರಿಲ್ಲ. ಹೆಬ್ಬಾಳ ಮತ್ತು ನಾಗವಾರ ಕೆರೆಗಳ ತ್ಯಾಜ್ಯ ಸಂಸ್ಕರಿಸಿ ಪೈಪ್ ಲೈನ್ ಮೂಲಕ ತಾಲ್ಲೂಕಿನ ಕೆರೆಗಳಿಗೆ ಹರಿಸುವ ಯೋಜನೆಯಿಂದಾಗಿ ನಾಲ್ಕು ಕೆರೆಗಳಿಗೆ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತೆ ಕಾಟಾಚಾರಕ್ಕೆ ನೀರು ಹರಿಸಲಾಗಿದೆ ಎನ್ನುತ್ತಾರೆ ಸ್ಥಳೀಯರು.

ದೊಡ್ಡಬಳ್ಳಾಪುರ ತಾಲ್ಲೂಕಿಗೆ ಅಲ್ಪಸ್ವಲ್ಪ ಜಕ್ಕಲಮೊಡಗು ಜಲಾಶಯ ಕುಡಿಯುವ ನೀರಿಗೆ ಆಸರೆ ಯಾಗಿದೆಯೇ ಹೊರತು; ಗ್ರಾ
ಮಾಂತರ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಶಾಶ್ವತವಾದ ಯೋಜನೆ ಗಳಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಗ್ರಾಮಾಂತರ ಜಿಲ್ಲೆಯಲ್ಲಿ ಖಾಸಗಿ ಮತ್ತು ಅರಣ್ಯ ಇಲಾಖೆ ವತಿಯಿಂದ ಬೆಳೆದಿರುವ ನೀಲಗಿರಿ ಮರಗಳು ಸಾವಿರಾರು ಎಕರೆಯಲ್ಲಿವೆ. ಅರಣ್ಯ ಇಲಾಖೆ ಬೆಳೆಸಿರುವ ನೀಲಗಿರಿ ಮರಗಳು ಹೊರತುಪಡಿಸಿ ಖಾಸಗಿಯವರು ಬೆಳೆಸಿರುವ ನೀಲಗಿರಿ ಮರಗಳು 96 ಸಾವಿರ ಎಕರೆ ಇದೆ.

ಈ ಹಿಂದೆ ಕರೀಗೌಡ ಅವರು ಜಿಲ್ಲಾಧಿಕಾರಿಯಾಗಿದ್ದಾಗ 11 ಸಾವಿರ ಎಕರೆ ನೀಲಗಿರಿ ಮರಗಳನ್ನು ರೈತರು ತೆರವುಗೊಳಿಸಿದ್ದರು. ಈಗಿನ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎನ್ನುತ್ತಾರೆ ಆರ್. ಟಿ.ಐ.ಕಾರ್ಯಕರ್ತ
ಚಿಕ್ಕೇಗೌಡ.

ಗ್ರಾಮಾಂತರ ಜಿಲ್ಕೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ (ಮಾ.20) ಈವರೆಗೆ ನರೇಗಾ ಯೋಜನೆಯಡಿ 16.54 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಈ ಯೋಜನೆಯಡಿ 103 ಆರಂಭಿಸಿರುವ ಕಾಮಗಾರಿಗಳ ಪೈಕಿ 29 ಗೋಕಟ್ಟೆ ಕೆಲಸ ಮುಗಿದಿದೆ. ಉಳಿಕೆ ಪ್ರಗತಿಯಲ್ಲಿದೆ. 14 ಕಲ್ಯಾ ಣಿಗಳ ಅಭಿವೃದ್ಧಿ ಕಾಮಗಾರಿ ಪೈಕಿ 2 ಮುಗಿದಿದೆ. 16 ಪ್ರಗತಿಯಲ್ಲಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕರಿಯಪ್ಪ.

ಸೋಕ್ ಪಿಟ್ ಅಭಿಯಾನದಡಿ ನಾಲ್ಕು ತಾಲ್ಲೂಕಿನಿಂದ 5100 ಗುರಿ ಪೈಕಿ 3155 ಕಾಮಗಾರಿ ಪೂರ್ಣಗೊಂಡಿದ್ದು 2371 ಪ್ರಗತಿಯಲ್ಲಿದೆ. ಗುರಿಮೀರಿ ಒಟ್ಟು 5526 ಸೋಕ್ ಪಿಟ್ ನಿರ್ಮಾಣವಾಗಲಿದೆ. ಶೇ108ರಷ್ಟು ಸಾಧನೆ ಕಂಡಿದೆ.

2020ರಿಂದ ಆರಂಭಿ ಸಲಾದ ನ್ಯೂಟ್ರಿಷಿಯನ್ ಗಾರ್ಡನ್ ಆಭಿಯಾನದಡಿ 5100 ಗಾರ್ಡನ್ ಗುರಿ ಪೈಕಿ 1552 ಕಾಮಗಾರಿ ಪೂರ್ಣ
ಗೊಂಡಿದ್ದು ಮಾರ್ಚ್ ಅಂತ್ಯಕ್ಕೆ ಮುಗಿಯಲಿದೆ. ಶೇ75 ರಷ್ಟು ಸಾಧನೆ ಯಾಗಿದೆ. ನರೇಗಾ ಯೋಜನೆಯಡಿ ಕಳೆದ ನಾಲ್ಕು ವರ್ಷದಿಂದ ಈವರೆಗೆ 59976 ಕಾಮಗಾರಿಗಳ ಪೈಕಿ 48900 ಕಾಮಗಾರಿ ಮುಗಿದಿದೆ.

ರೈತರ ಜಮೀನಿನಲ್ಲಿ ಬದು ನಿರ್ಮಾಣ ಸೇರಿದೆ. ಪ್ರತಿಯೊಂದು ಕಾಮಗಾರಿ ಸೇರಿ ಶೇ 81.53ರಷ್ಟು ಪ್ರಗತಿಯಾಗಿದೆ. ನರೇಗಾ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿ ಮತ್ತು ಅನುದಾನದಡಿ ರಾಜ್ಯಮಟ್ಟದಲ್ಲಿ 3ನೇ ಸ್ಥಾನದಲ್ಲಿದೆ ಎಂಬುದಾಗಿ ಉಪಕಾರ್ಯದರ್ಶಿ ಕರಿಯಪ್ಪ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT