ಭಾನುವಾರ, ಆಗಸ್ಟ್ 7, 2022
21 °C

ಅಯೋಧ್ಯೆ ಪ್ರದೇಶ ಬೌದ್ಧ ಸ್ಮಾರಕವಾಗಿಸಿ: ಪ್ರಜಾ ವಿಮೋಚನಾ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ‘ಅಯೋಧ್ಯೆಯ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ರದ್ದು ಮಾಡಿ ಈ ಪ್ರದೇಶವನ್ನು ಪ್ರಾಚೀನ ಬೌದ್ಧ ಸ್ಮಾರಕ ಎಂದು ಘೋಷಿಸಿ ರಕ್ಷಣೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನ) ಸಂಘಟನೆಗಳಿಂದ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ರಾಜು ಸಣ್ಣಕ್ಕಿ, ‘ದಶಕಗಳ ಕಾಲ ವಿವಾದಗ್ರಸ್ತವಾಗಿದ್ದ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿಯ ವ್ಯಾಜ್ಯಕ್ಕೆ ಸಂಬಂಧಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಆದರೆ 2,600 ವರ್ಷಗಳ ಹಿಂದೆ ಅಯೋಧ್ಯೆಯನ್ನು ಸಾಕೇತ ಎಂದು ಕರೆಯಲಾಗುತ್ತಿತ್ತು. ವಿಹಾರ ಧ್ವಂಸ ಮಾಡಿದ ಬಾಬರ್ ಅಲ್ಲಿಯೇ ಮಸೀದಿ ನಿರ್ಮಿಸಿದ. ಅಕ್ಬರನ ಆಡಳಿತದಲ್ಲಿ ಬಾಬರಿ ಮಸೀದಿಯನ್ನು ನವೀಕರಣಗೊಳಿಸಿ ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತವಾಗಿ ಅದರಲ್ಲಿ ಹಿಂದು-ಮುಸ್ಲಿಂ ಧರ್ಮದ ಧಾರ್ಮಿಕ ಚಿಹ್ನೆಗಳನ್ನು ಅಳವಡಿಸಿದ ಎಂದು ಇತಿಹಾಸ ಹೇಳುತ್ತಿದೆ’ ಎಂದರು.

‘ಇದಕ್ಕೆ ಪೂರಕವಾಗಿ ಯುನೆಸ್ಕೋ ವತಿಯಿಂದ ನಡೆಸಿದ ಪ್ರಾಚ್ಯವಸ್ತು ಸಂಶೋಧನೆಯಲ್ಲಿ ಬಾಬರಿ ಮಸೀದಿ ಸ್ಥಳದಲ್ಲಿ ಹಿಂದೂ-ಮುಸ್ಲಿಂ ಧರ್ಮದ ಸಂಕೇತಗಳು ನಂತರ ಬೌದ್ಧ ಧಮ್ಮದ ಶಿಲ್ಪಕಲೆಗಳು ಪತ್ತೆಯಾಗಿವೆ ಎಂದು ಇಂಡಿಯಾ ಟುಡೆ ಪತ್ರಿಕೆ ತನ್ನ ವರದಿಯಲ್ಲಿ ಪ್ರಕಟಿಸಿದೆ. ಇತ್ತೀಚೆಗೆ ಬಾಬಿರಿ ಮಸೀದಿ ಅಡಿಯಲ್ಲಿ ಕಾಮಗಾರಿ ಮಾಡುವಾಗ ಹಲವಾರು ಬೌದ್ಧ ಸ್ತೂಪ, ಬದ್ಧನ ಮೂರ್ತಿಗಳು ಸೇರಿದಂತೆ ಬೌದ್ಧ ದರ್ಮದ ನೂರಾರು ಚಿಹ್ನೆಗಳು ದೊರೆತಿದೆ. ಈ ವಿಹಾರವನ್ನು ಪ್ರಾಚೀನ ಬೌದ್ಧ ಸ್ಮಾರಕ ಎಂದು ಘೋಷಿಸಬೇಕೆಂದು ಈ ಮೂಲಕ ಒತ್ತಾಯಿಸಲಾಗುತ್ತದೆ’ ಎಂದರು.

ಬುದ್ಧವಿಹಾರ ಎಜುಕೇಷನ್ ಅಂಡ್ ಸರ್ವೀಸೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಮಾಳವ ನಾರಾಯಣ, ಪ್ರಜಾವಿಮೋಚನಾ ಚಳವಳಿ (ಸ್ವಾಭಿಮಾನ) ಜಿಲ್ಲಾ ಅಧ್ಯಕ್ಷ ಹನುಮಣ್ಣಗೂಳ್ಯ, ಮುಖಂಡರಾದ ಎಂ.ಮುನಿಕೃಷ್ಣಪ್ಪ, ಸುರೇಶ್ ತಳಗವಾರ, ನರಸಿಂಹಮೂರ್ತಿ, ರತ್ನಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು