ವಿಜಯಪುರ(ದೇವನಹಳ್ಳಿ): ಬೆಂಗಳೂರಿನ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್, ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ಹಾಗೂ ಕೊರಟಗೆರೆ ಬಿಆರ್‌ಡಿಓ ಸಹಯೋಗದಲ್ಲಿ ಹೋಬಳಿಯ ಕೋರಮಂಗಲ ಬಯಲು ಕಾರಾಗೃಹದಲ್ಲಿ ಶುಕ್ರವಾರ ಬಿದಿರು ಕೃಷಿ ನಿರ್ವಹಣೆ ಮತ್ತು ಬಳಕೆಯ ಕುರಿತು ಕೈದಿಗಳಿಗೆ ತರಬೇತಿ ನೀಡಲಾಯಿತು.
ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್‌ನ ಮರ ವಿಜ್ಞಾನಿ ತ್ರಿವೇಣಿ ಮಾತನಾಡಿ, ಕಾಡಿನಲ್ಲಿ ಬೆಳೆಯುವ ಬಿದಿರು ವಿವಿಧ ಬಗೆಯ ಅಲಂಕಾರಿಕ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತಿದೆ ಎಂದರು.
ಇತ್ತಿಚೆಗೆ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಉದ್ಘಾಟನೆಗೊಂಡ ಟರ್ಮಿನಲ್-2 ನಲ್ಲಿಯೂ ಬಿದಿರಿನ ಅಲಂಕಾರ ಎಲ್ಲರ ಗಮನ ಸೆಳೆಯುತ್ತಿದೆ. ಇದು ಬಿದಿರಿನ ಬೇಡಿಕೆಯನ್ನು ತಿಳಿಸುತ್ತದೆ ಎಂದು ತಿಳಿಸಿದರು.
ಬಿದಿರು ವೇಗವಾಗಿ ಬೆಳೆಯುವ ಸಸ್ಯ. ದಿನಕ್ಕೆ 3ರಿಂದ 4 ಅಂಗುಲದಷ್ಟು ಬೆಳೆಯುತ್ತದೆ. ಮನೆ ನಿರ್ಮಾಣ, ಕಾಗದ ತಯಾರಿಕೆ, ದೋಣಿ ಮತ್ತು ತೆಪ್ಪ ನಿರ್ಮಾಣಕ್ಕೆ ಬಿದಿರು ಬಳಕೆ ಆಗುತ್ತದೆ. ಏಣಿ, ದೀಪದ ಕಂಬಗಳಾಗಿ, ತೊಟ್ಟಿಲು, ಸಂಗೀತ ವಾದ್ಯ ತಯಾರಿಕೆ, ಪೀಠೋಪಕರಣಗಳ ತಯಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲೂ ಬಿದಿರನ್ನು ಉಪಯೋಗಿಸುತ್ತಾರೆ ಎಂದರು.
ವಿಜ್ಞಾನಿ ಎಂ.ಎಲ್.ಮಂಜುನಾಥ್ ಮಾತನಾಡಿ, ಬಿದಿರು ಕೃಷಿಯಿಂದ ಹಲವು ಲಾಭವಿದೆ. ಉತ್ತಮ ಲಾಭವನ್ನು ಗಳಿಸಬಹುದು. ಬಿದಿರಿನ ಬೀಜ ಬಿದ್ದಿರುವ ಕಡೆಗಳಲ್ಲಿ ಹುಟ್ಟಿದ ಸಸ್ಯ ತಂದು ಹಿಂಡನ್ನು ಬೆಳೆಸಬಹುದು ಎಂದರು.
ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ ವಿಜ್ಞಾನಿಗಳಾದ ಮೋಹಿನಿ ಕುಮಾರಿ, ಸಿ.ಎನ್. ವಾಣಿ, ಕೊರಟಗೆರೆ ಬಿಆರ್‌ಡಿಓ.ರವಿಕುಮಾರ, ಬಯಲು ಕಾರಾಗೃಹದ ಜೈಲರ್ ಗಳಾದ ಬಿ.ಎಲ್.ಚಿಕ್ಕೊಪ್ಪ, ಐ.ಬಿ.ಉಪ್ಪಿನ ಹಾಜರಿದ್ದರು.
ಆರ್ಥಿಕ ಸುಧಾರಣೆಗೆ ಸಹಕಾರಿ: ಕೈದಿಗಳು, ಇಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಸೇರಿದಂತೆ ಹಲವಾರು ರೀತಿಯ ತರಬೇತಿ ಪಡೆದುಕೊಂಡಿದ್ದಾರೆ ಎಂದು ಕಾರಾಗೃಹದ ಅಧೀಕ್ಷಕ ಕೆ.ಮೋಹನ್ ಕುಮಾರ್ ತಿಳಿಸಿದರು.
ಇದರ ಜೊತೆಗೆ ಬಿದಿರು ಕೃಷಿ ತರಬೇತಿ ಸಿಕ್ಕಿರುವುದು ಅವರ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಮತ್ತಷ್ಟು ಪ್ರಯೋಜನವಾಗಲಿದೆ. ಇಲ್ಲಿಂದ ಬಿಡುಗಡೆಯಾಗಿ ಹೋದ ನಂತರ ಇಂತಹ ತರಬೇತಿಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.