ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ವರ್ಷಕ್ಕೊಮ್ಮೆ ನಡೆಯುವ ಬಂಡಿ ಮಹಾಕಾಳಿ ಜಾತ್ರೆಗೆ ಮರಸೂರು ಸಪ್ತಗ್ರಾಮ ಸಜ್ಜು

Published 26 ಏಪ್ರಿಲ್ 2024, 14:01 IST
Last Updated 26 ಏಪ್ರಿಲ್ 2024, 14:01 IST
ಅಕ್ಷರ ಗಾತ್ರ

ಆನೇಕಲ್ : ತಾಲ್ಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ ಏಳು ವರ್ಷಕ್ಕೊಮ್ಮೆ ನಡೆಯುವ ಬಂಡಿ ಮಹಾಕಾಳಿ, ಸೋಮೇಶ್ವರ ಹಾಗೂ ವನದುರ್ಗಿ ಜಾತ್ರಾ ಮಹೋತ್ಸವಕ್ಕೆ ಸಪ್ತ ಗ್ರಾಮಗಳು ಸಜ್ಜಾಗಿವೆ.

ಏಪ್ರಿಲ್‌ 28ರಂದು ಜರುಗಲಿರುವ ಮರಸೂರು, ಶೆಟ್ಟಹಳ್ಳಿ ಮತ್ತು ಹಳೇಊರು ಗ್ರಾಮಗಳ ಕುರ್ಜುಗಳು(ತೇರುಗಳು) ಬಂಡಿ ಮಹಾಕಾಳಿ ದೇವಾಲಯದ ಆವರಣಕ್ಕೆ ಆಗಮಿಸಲಿವೆ.

ಬಂಡಿ ಮಹಾಕಾಳಿ ಜಾತ್ರೆ ಪ್ರಯುಕ್ತ ಈಗಾಗಲೇ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿದ್ದು, ಶುಕ್ರವಾರ ಸೋಮೇಶ್ವರ ಸ್ವಾಮಿಗೆ ಬೆಲ್ಲದಾರತಿ ನೆರವೇರಿಸಲಾಯಿತು. ಮರಸೂರು, ಹಳೇಊರು ಮತ್ತು ಶೆಟ್ಟಹಳ್ಳಿ ಗ್ರಾಮಗಳಲ್ಲಿ ರಥ ಕಲಶ ಪೂಜೆ ಮತ್ತು ರಥಗಳ ಮೇಲೆ ಕಲಶ ಸ್ಥಾಪನೆ ನಡೆಯಿತು.

ಶನಿವಾರ ಸಂಜೆ ಬಂಡಿ ಮಹಾಕಾಳಿ ದೇವಾಲಯದಲ್ಲಿ ಸಿಡಿ ಪೂಜೆ ಮತ್ತು ಬಂಡಿ ಮಹಾಕಾಳಿ, ಮಾರಿಯಮ್ಮ, ಸಫಲಮ್ಮ, ಸುಗ್ಗಲಮ್ಮ, ಮಹೇಶ್ವರಮ್ಮ ದೇವಿಯರಿಗೆ ದೀಪೋತ್ಸವ ನಡೆಯಲಿದೆ. ಭಾನುವಾರ ಮೂರು ಗ್ರಾಮಗಳಿಂದ ಕುರ್ಜುಗಳು(ತೇರುಗಳು) ಬರಲಿವೆ. ಎತ್ತುಗಳ ಮೂಲಕ ತೇರು ಎಳೆದುಕೊಂಡು ಬರುವ ವೈಭವದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಕಾತುರದಿಂದ ಕಾಯುತ್ತಿದ್ದಾರೆ.  ರಥೋತ್ಸವ ಬಳಿಕ ಮಂಗಳವಾರ ತೇರುಗಳು ಸ್ವಗ್ರಾಮಕ್ಕೆ ಮರಳುತ್ತವೆ.

ಮರಸೂರು ಮಡಿವಾಳದ ಬಂಡಿ ಮಹಾಕಾಳಿ ದೇವಿಯ ಅಲಂಕೃತ ಮೂರ್ತಿ
ಮರಸೂರು ಮಡಿವಾಳದ ಬಂಡಿ ಮಹಾಕಾಳಿ ದೇವಿಯ ಅಲಂಕೃತ ಮೂರ್ತಿ

ಮರಸೂರು, ಮಡಿವಾಳ, ಬಂಡಾಪುರ, ಶೆಟ್ಟಿಹಳ್ಳಿ, ನಾಗನಾಯಕನಹಳ್ಳಿ, ಹಳೇವೂರು ಹಾಗೂ ಆಡೇಸೊಣ್ಣಹಟ್ಟಿ ಮತ್ತು ಉಪಗ್ರಾಮ ಅಗ್ರಹಾರಕ್ಕೆ ಬಂಡಿ ಮಹಾಕಾಳಿ ಗ್ರಾಮದೇವತೆಯಾಗಿದ್ದು, ಇಷ್ಟು ಗ್ರಾಮಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

ಗ್ರಾಮಗಳಲ್ಲಿ ಜಾತ್ರೆಯ ಅಂಗವಾಗಿ ಮನೆ ಮನೆಗಳಲ್ಲಿ ಹಬ್ಬದ ಸಿದ್ಧತೆ ಮಾಡಲಾಗಿದೆ. ದೇವಾಲಯಗಳು ಮತ್ತು ಮನೆಗಳನ್ನು ಸಿಂಗರಿಸಲಾಗಿದ್ದು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ.

ಭರ್ಜರಿ ಬಾಡೂಟ : ಮರಸೂರು ಬಂಡಿ ಮಹಾಕಾಳಿ ಜಾತ್ರೆಯ ವಿಶೇಷ ಬಾಡೂಟ. ಪ್ರತಿ ಮನೆಗಳಲ್ಲೂ ಲಕ್ಷಾಂತರ ರೂಪಾಯಿ. ವೆಚ್ಚ ಮಾಡಿ ಭರ್ಜರಿ ಔತಣ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಜಾತ್ರೆಗೆ ಸ್ನೇಹಿತರು, ಸಂಬಂಧಿಕರನ್ನು ಆಹ್ವಾನಿಸುವುದರಿಂದ ಲಕ್ಷಾಂತರ ಮಂದಿ ಜನರು ಈ ಗ್ರಾಮಗಳಲ್ಲಿ ಭಾನುವಾರ ಜಮಾವಣೆಯಾಗಲಿದ್ದಾರೆ.

ಮರಸೂರು ಮಡಿವಾಳದ ಕೆರೆಯಲ್ಲಿ ದೊರೆತ ವನದುರ್ಗಿ ದೇವಿಯ ನೋಟ
ಮರಸೂರು ಮಡಿವಾಳದ ಕೆರೆಯಲ್ಲಿ ದೊರೆತ ವನದುರ್ಗಿ ದೇವಿಯ ನೋಟ
ಜಾತ್ರೆಗೆ ಸಜ್ಜಾಗುತ್ತಿರುವ ಸಿಡಿ
ಜಾತ್ರೆಗೆ ಸಜ್ಜಾಗುತ್ತಿರುವ ಸಿಡಿ

ದೇಗುಲದ ಐತಿಹ್ಯ

ಮರಸೂರು ಮಡಿವಾಳದ ಬಂಡಿ ಮಹಾಕಾಳಿ ಹಾಗೂ ಸೋಮೇಶ್ವರ ಸ್ವಾಮಿ ದೇವಾಲಯ ಸಮೀಪವಿದ್ದು ಮಹಾಕಾಳಿ ಪಾರ್ವತಿಯ ಸ್ವರೂಪವಾದರೆ ಶಿವ ಸೋಮೇಶ್ವರನಾಗಿ ಧ್ಯಾನ ಸ್ಥಿತಿಯಲ್ಲಿದ್ದಾನೆ. ದೇವಾಲಯವು ಚೋಳರ ರಾಜ ರಾಜ ಚೋಳ ಹಾಗೂ ಆತನ ಮಗ ರಾಜೇಂದ್ರ ಚೋಳನ ಕಾಲದ್ದೆಂದು ಹೇಳುತ್ತಾರೆ ಇತಿಹಾಸಕರರು.

ದೇವಾಲಯ ಕ್ರಿ.ಶ.920ರಲ್ಲಿ ನಿರ್ಮಾಣವಾಗಿದೆ ಎನ್ನಲಾಗಿದೆ. ತಮಿಳುನಾಡಿನ ತಂಜಾವೂರನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದ ಚೋಳರು ಪರಮ ಶೈವ ಭಕ್ತರಾಗಿದ್ದು ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳ ಸೋಮೇಶ್ವರ ದೇವಾಲಯ ನಿರ್ಮಿಸಿದ್ದಾರೆ ಎಂದು ತಿಳಿಸುತ್ತಾರೆ.

ಬನಾರಸ್ ವಿಶ್ವವಿದ್ಯಾಲಯದ ನಿವೃತ್ತ ಸಂಸ್ಕೃತ ಪಂಡಿತ ಪ್ರಖ್ಯಾತ ನಾಡಿ ಶಾಸ್ತ್ರಜ್ಞ ಟಿ.ಎ.ಚಾರ್ ಅವರ ಪ್ರಕಾರ ಈ ದೇವಾಲಯಗಳು ದ್ವಾಪರಯುಗಕ್ಕೆ ಸಂಬಂಧಿಸಿದ್ದವು. ಈ ಭಾಗವು ಕಾಡಾಗಿದ್ದು ವಿರಾಟನ ಸಾಮ್ರಾಜ್ಯಕ್ಕೆ ಒಳಪಟ್ಟಿದ್ದವು. ಅಜ್ಞಾತವಾಸದಲ್ಲಿದ್ದ ಪಾಂಡವರು ಇಲ್ಲಿ ನೆಲೆಸಿದ್ದರು. ಧರ್ಮರಾಯ ಶಿವನನ್ನು ಕುರಿತು ತಪಸ್ಸು ಮಾಡಿ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡು ಇಲ್ಲಿಯೇ ಯಜ್ಞ ಮಾಡಿದನೆಂದು ಪ್ರತೀತಿಯಿದೆ.

ಧರ್ಮರಾಯನ ಕೋರಿಕೆಯ ಮೇರೆಗೆ ಶಿವ ಮತ್ತು ಪಾರ್ವತಿ ಇಲ್ಲಿ ಪಾರ್ವತಿ ದುರ್ಗೆಯ ರೂಪವಾಗಿ ಮಹಾಕಾಳಿಯಾಗಿ ನೆಲೆಸಿದರೆ ಶಿವ ಧ್ಯಾನ ಮಗ್ನನಾಗಿ ಸೋಮೇಶ್ವರನಾಗಿ ನೆಲೆಸಿದ್ದಾನೆ ಎಂದು ಪುಸ್ತಕವೊಂದರಲ್ಲಿ ದಾಖಲಿಸಿದ್ದಾರೆ. ಕೆರೆಯಲ್ಲಿ ಸಿಕ್ಕ ವನದುರ್ಗಿ ವಿಗ್ರಹ ಬಂಡಿಮಹಾಕಾಳಿ ದೇವಾಲಯದ ಮುಂಭಾಗದ ಕೆರೆಯಲ್ಲಿ ಎಂಟು ವರ್ಷಗಳ ಹಿಂದೆ 14 ಅಡಿ ಎತ್ತರದ ಉಗ್ರರೂಪಿ ವನದುರ್ಗಿ ವಿಗ್ರಹವು ಕೆರೆಯಲ್ಲಿ ಹೂಳೆತ್ತುವ ಸಂದರ್ಭದಲ್ಲಿ ಸಿಕ್ಕಿತು. ಗ್ರಾಮದ ಭಕ್ತರು ಬಂದಿ ಮಹಾಕಾಳಿ ದೇವಾಲಯದ ಸಮೀಪದ ದಿಬ್ಬವೊಂದರಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಸಲಾಗುತ್ತಿದೆ.

ಮರಸೂರು ಮಡಿವಾಳ ಗ್ರಾಮದಲ್ಲಿರುವ ವೀರಗಲ್ಲುಗಳ ನೋಟ
ಮರಸೂರು ಮಡಿವಾಳ ಗ್ರಾಮದಲ್ಲಿರುವ ವೀರಗಲ್ಲುಗಳ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT