ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಪ್ಪಟಕ್ಕೆ ಬೆಲೆ, ಬೇಡಿಕೆ ಇಲ್ಲ

ವಿಜಯಪುರ: ಪ್ರೋತ್ಸಾಹದ ನಿರೀಕ್ಷೆಯಲ್ಲಿ ಕುರಿ ಸಾಕಣೆದಾರರು
Last Updated 7 ಜೂನ್ 2020, 10:02 IST
ಅಕ್ಷರ ಗಾತ್ರ

ವಿಜಯಪುರ: ಕುರಿ ತುಪ್ಪಟಕ್ಕೆ ಬೆಲೆ ಕುಸಿತ ಉಂಟಾಗಿದ್ದು, ಕುರಿಕಾರರು ತುಪ್ಪಟ ಕತ್ತರಿಸಲು ಹಣ ನೀಡಬೇಕಾಗಿ ಬಂದಿದೆ.

ಹಿಂದೆ ತುಪ್ಪಟ ಕತ್ತರಿಸುವ ವ್ಯಕ್ತಿಗಳು ನಿಯಮಿತವಾಗಿ ಗ್ರಾಮಗಳಿಗೆ ಭೇಟಿ ನೀಡಿ, ಕುರಿಗಳ ತುಪ್ಪಟ ಕತ್ತರಿಸಿ ಕೊಂಡೊಯ್ಯುತ್ತಿದ್ದರು. ತುಪ್ಪಟಕ್ಕೆ ಬದಲಾಗಿ ಕುರಿ ಹಿಂಡಿನ ಮಾಲೀಕರಿಗೆ ಕುರಿಗಳ ಸಂಖ್ಯೆಗೆ ಅನುಗುಣವಾಗಿ ಕಂಬಳಿ ಕೊಡುತ್ತಿದ್ದರು. ಕಂಬಳಿ ಬೇಡವೆಂದರೆ, ಕುರಿಗೆ ಇಂತಿಷ್ಟು ಹಣ ಎಂದು ಕೊಟ್ಟು ತುಪ್ಪಟ ಕೊಂಡೊಯ್ಯುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

‘ಕುರುಬರಲ್ಲಿಯೇ ಕೆಲವರು ತುಪ್ಪಟ ಕತ್ತರಿಸುವ ವೃತ್ತಿ ಮಾಡುತ್ತಿದ್ದರು. ಕುರಿ ತುಪ್ಪಟಕ್ಕೆ ಬೇಡಿಕೆ ಕುಸಿದ ಮೇಲೆ, ಹೆಚ್ಚಿನ ಸಂಖ್ಯೆಯ ಜನ ತುಪ್ಪಟ ಕತ್ತರಿಸುವ ವೃತ್ತಿಯಿಂದ ವಿಮುಖರಾಗಿದ್ದಾರೆ. ಯಾರಾದರೂ ಬಂದು ತುಪ್ಪಟ ಕತ್ತರಿಸಿಕೊಂಡು ಹೋದರೆ ಸಾಕು ಅನಿಸಿದೆ. ತುಪ್ಪಟ ಕತ್ತರಿಸಲು ಕುರಿಯೊಂದಕ್ಕೆ ₹ 39ರಿಂದ 35 ಕೊಡಬೇಕು. ತುಪ್ಪಟ ಉಚಿತವಾಗಿ ನೀಡಬೇಕು’ ಮುಖಂಡ ರಾಮಪ್ಪ ಹೇಳುತ್ತಾರೆ.

ಕತ್ತರಿಸಿದ ತುಪ್ಪಟವನ್ನು ಚೀಲಗಳಿಗೆ ತುಂಬಿ ಒಂದು ಕಡೆ ದಾಸ್ತಾನು ಮಾಡಿದ್ದೇನೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ ತುಪ್ಪಟ 4 ರಿಂದ 5 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಬೆಲೆಯಲ್ಲಿ ಸಾಗಾಣಿಕಾ ವೆಚ್ಚವೂ ಬರುವುದಿಲ್ಲ. ಮೊದಲೆಲ್ಲಾ ತುಪ್ಪಟದಿಂದ ಕಂಬಳಿ ನೇಯುತ್ತಿದ್ದೇವು. ಈಗ ಕಂಬಳಿ ಕೇಳುವವರಿಲ್ಲ ಎಂದು ತುಪ್ಪಟ ಕತ್ತರಿಸುವ ಶಿವಕುಮಾರ್ ತಿಳಿಸಿದರು.

‘ತುಪ್ಪಟ ಬೆಳೆದಂತೆ ಕತ್ತರಿಸಬೇಕು. ಇಲ್ಲವಾದರೆ ಮೈ ಕೊಳೆಯಾಗುತ್ತದೆ. ಕೆಲವೊಮ್ಮೆ ಹೇನು ಬೀಳುವುದುಂಟು. ಹಾಗಾಗಿ ಕುರಿಗಾರರು ಹಣ ನೀಡಿ ತುಪ್ಪಟ ಕತ್ತರಿಸಲು ಮುಂದಾಗಿದ್ದಾರೆ. ಅಮೂಲ್ಯವಾದ ತುಪ್ಪಟ ದಾಸ್ತಾನು ಮಳಿಗೆಗಳಲ್ಲಿ ಕೊಳೆಯುತ್ತಿದೆ. ಕುರಿ ತುಪ್ಪಟದ ಕಂಬಳಿ ಜನ ಮಾನಸದಿಂದ ದೂರವಾಗುತ್ತಿದೆ’ ಎಂದರು.

‘ಚಳಿಗಾಲದ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗ ಮಾಡುತ್ತಿದ್ದ ಕುರಿ ತುಪ್ಪಟದಿಂದ ತಯಾರಿಸಿದ್ದ ಕಂಬಳಿಗಳು ಚುಚ್ಚುತ್ತವೆ ಎನ್ನುವ ಕಾರಣದಿಂದಾಗಿ ನಯವಾದ ಹಾಗೂ ಹಗುರವಾದ ಹೆಚ್ಚು ಆಕರ್ಷಣೀಯವಾಗಿ ಕಾಣುವ ಕಂಬಳಿಗಳನ್ನೆ ಹೆಚ್ಚು ಇಷ್ಟಪಡುತ್ತಾರೆ. ಕಡಿಮೆ ಬೆಲೆಗೆ ಸಿಗುತ್ತವೆ. ಇದರಿಂದ ಜನರು ಕುರಿ ತುಪ್ಪಟ ಕಂಬಳಿಯಿಂದ ದೂರ ಸರಿಯುತ್ತಿದ್ದಾರೆ’ ಎಂದು ಕುರಿಕಾರ ಹನುಮಂತಪ್ಪ ಅಭಿಪ್ರಾಯಪಡುತ್ತಾರೆ.

ಗ್ರಾಮೀಣ ಪ್ರದೇಶದ ಮದುವೆ ಗಳಲ್ಲಿ ಕಂಬಳಿಗೆ ಹೆಚ್ಚಿನ ಮಾನ್ಯತೆ ಇದೆ. ಶಿವಾಸನ ಎಂಬ ಶಾಸ್ತ್ರ ಮಾಡಲು ಕಪ್ಪು ಕಂಬಳಿ ಬೇಕೇ ಬೇಕು. ಹಿಂದೆ ಕಪ್ಪು ಕಂಬಳಿಗಳು ಪ್ರತಿ ಮನೆಯಲ್ಲೂ ಇರುತ್ತಿದ್ದವು. ಈಗ ಕಂಬಳಿ ಸಿಗುವುದು ಅಪರೂಪವಾಗಿದೆ. ಕೆಲವೊಮ್ಮೆ ಕಂಬಳಿ ಪತ್ತೆ ಹಚ್ಚಿ ಪಕ್ಕದ ಗ್ರಾಮಗಳಿಂದ ತಂದು ಶಾಸ್ತ್ರ ನೆರವೇರಿಸುವುದುಂಟು. ಕಲ್ಯಾಣ ಮಂಟಪದಲ್ಲಿ ಬಾಡಿಗೆ ಕಂಬಳಿ ಬಳಸುವ ಪರಿಪಾಠ ಬೆಳೆದು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT