ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಅರ್ಧಕ್ಕೆ ನಿಂತ ಜಿಲ್ಲಾ ಕಸಾಪ ಭವನ ಕಾಮಗಾರಿ

ಅನೈತಿಕ ಚಟುವಟಿಕೆಗಳ ತಾಣವಾಗಿರುವ ಕಟ್ಟಡ
Published 1 ಜೂನ್ 2023, 23:30 IST
Last Updated 1 ಜೂನ್ 2023, 23:30 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಭವನ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಕಾಮಗಾರಿ ಆರಂಭಿಸಲು ₹2 ಲಕ್ಷ ಹಣವನ್ನು ತಾಲ್ಲೂಕು ಕಸಾಪ ಅಧ್ಯಕ್ಷರಿಗೆ ಚೆಕ್ ಮೂಲಕ ಹಸ್ತಾಂತರಿಸಿದ್ದರೂ ಅವರು ಗಮನಹರಿಸುತ್ತಿಲ್ಲ ಎಂದು ಸಾಹಿತ್ಯ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಚನ್ನಕೇಶವಸ್ವಾಮಿ ದೇವಾಲಯದ ರಸ್ತೆಯಲ್ಲಿ ದಾನಿಗಳು ಹಾಗೂ ಜನಪ್ರತಿನಿಧಿಗಳು ನೀಡಿರುವ ಅನುದಾನದಲ್ಲಿ ಭವನವನ್ನು ನಿರ್ಮಿಸಲಾಗುತ್ತಿದೆ. ಆದರೆ ಕಾಮಗಾರಿ ಅರ್ಧಕ್ಕೆ ನಿಂತಿರುವ ಕಾರಣ ಆ ಕಟ್ಟಡ ಕುಡುಕರು ಹಾಗೂ ಅನೈತಿಕ ಚಟುವಟಿಕೆಗಳ ಗೂಡಾಗಿದೆ. ಕಟ್ಟಡದ ಸುತ್ತಲೂ ಮದ್ಯದ ಬಾಟಲಿಗಳು, ಪಾಕೇಟುಗಳು, ಕಾಂಡೋಮ್‌ಗಳು ಬಿದ್ದಿವೆ. ಈ ಕುರಿತು ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹಾಗೂ ತಾಲ್ಲೂಕು ಅಧ್ಯಕ್ಷರ ಗಮನಕ್ಕೂ ತಂದಿದ್ದರೂ ಪ್ರಯೋಜನವಾಗಿಲ್ಲ. ಒಂದು ತಿಂಗಳಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎಂದು ಹೇಳಿದವರು ಒಂದು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ.

ಭವನದ ಮುಂಭಾಗವನ್ನು ಕಾರು ನಿಡುಗಡೆಗೆ ಉಪಯೋಗಿಸಿಕೊಂಡರೆ, ಸುತ್ತಲಿನ ಅಂಗಡಿ ವ್ಯಾಪರಿಗಳು ಕಟ್ಟಡದ ಗೋಡೆಗಳನ್ನು ಮೂತ್ರ ವಿಸರ್ಜನೆಯ ತಾಣವಾಗಿ ಮಾಡಿಕೊಂಡಿದ್ದಾರೆ ಎಂದು ಸಾಹಿತ್ಯಾಸಕ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ಕಟ್ಟಡದ ಪಕ್ಕದಲ್ಲೇ ಅಂಗನವಾಡಿ ಕೇಂದ್ರವಿದೆ. ಮಹಿಳೆಯರು, ಬಾಣಂತಿಯರು ಆಹಾರ ಪದಾರ್ಥ ಪಡೆಯಲು ಬರುತ್ತಿರುತ್ತಾರೆ. ಆದರೆ ಕೆಲವರು ಪಾನಮತ್ತರಾಗಿ ಗೋಡೆಗಳ ಬಳಿ ಬಂದು ಮೂತ್ರವಿಸರ್ಜನೆ ಮಾಡುತ್ತಾರೆ. ಜೊತೆಗೆ ಕೆಲವರು ಬಟ್ಟೆ ಇಲ್ಲದೆ ಮಲಗಿರುತ್ತಾರೆ. ಇದನ್ನು ಕಂಡು ಮಹಿಳೆಯರು ಅಂಗನವಾಡಿಯತ್ತ ಬರುವುದೇ ಇಲ್ಲ. ಜೊತೆಗೆ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡರು.

ಕಟ್ಟಡದ ಆವರಣದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು ಪಾಕೇಟುಗಳು
ಕಟ್ಟಡದ ಆವರಣದಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು ಪಾಕೇಟುಗಳು

ಒಂದು ವಾರದಲ್ಲಿ ಕಾಮಗಾರಿ ಆರಂಭ  ಕಟ್ಟಡ ಕಾಮಗಾರಿ ಬಗ್ಗೆ ತಾಲ್ಲೂಕು ಅಧ್ಯಕ್ಷರು ಸೇರಿದಂತೆ ಎಲ್ಲರೊಂದಿಗೆ ಮಾತನಾಡಿದ್ದೇನೆ. ಬಹಳಷ್ಟು ಮಂದಿ ಸಲಹೆ ಕೊಡುತ್ತಾರೆ. ಆದರೆ ಸಹಕಾರ ಕೊಡುತ್ತಿಲ್ಲ. ಹಾಗಾಗಿ ಎಲ್ಲರ ಸಹಕಾರ ಕೋರಿದ್ದೇನೆ ಒಂದು ವಾರದಲ್ಲಿ ಕಾಮಗಾರಿ ಆರಂಭಿಸಿ ಬಾಕು ಇರುವ ಕೆಲಸಗಳನ್ನು ಮುಕ್ತಾಯಗೊಳಿಸುತ್ತೇನೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT