ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾಭಿಮಾನಿ ಬದುಕಿಗೆ ಅಡ್ಡಿಯಾಗದ ಅಂಧತ್ವ: ಪೆನ್ನು ಮಾರಾಟ ಮಾಡುವ ನರಸಿಂಹರಾಜು

Published 21 ಆಗಸ್ಟ್ 2024, 5:40 IST
Last Updated 21 ಆಗಸ್ಟ್ 2024, 5:40 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಇವರು ಹುಟ್ಟು ಕುರುಡರಲ್ಲ. ಬಾಲ್ಯದಲ್ಲಿ ಕಾಣಿಸಿಕೊಂಡ ಅನಾರೋಗ್ಯದಿಂದ ಕುರುಡುತನ ಕಾಣಿಸಿಕೊಂಡಿದೆ. ಆದರೆ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂಬ ಹಠ ಇವರದ್ದು.

ಕೋರಮಂಗಲ ನಿವಾಸಿ ನರಸಿಂಹರಾಜ (31) ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪಟ್ಟಪಾಡು ಹೇಳತೀರದು. ಸ್ವಯಂ ಉದ್ಯೋಗ ಕೈಗೊಳ್ಳಲು ಹಣಕಾಸಿನ ಸೌಲಭ್ಯಕ್ಕಾಗಿ ಹಲವು ಬಾರಿ ಅರ್ಜಿ ಹಾಕಿದರೂ ಸಿಗದ ಸಾಲ ಸೌಲಭ್ಯದಿಂದ ಬೇಸತ್ತು ಪೆನ್ನು ಮಾರಾಟ ಮಾಡಿ ಬದುಕಿನ ಬಂಡಿ ನೂಕುತ್ತಿದ್ದಾರೆ.

ಅಂಧತ್ವ ಇದ್ದರೂ ಸ್ವಾಭಿಮಾನದಿಂದ ಬದುಕಬೇಕು ಎನ್ನುವ ಛಲ ಅವರದ್ದು. ಅವರಿವರ ಬಳಿ ಬೇಡಿ ಕ್ರೋಡೀಕರಿಸಿದ ಹಣದಲ್ಲೇ ಪೆನ್ನುಗಳನ್ನು ಖರೀದಿಸಿ ಶಾಲಾ–ಕಾಲೇಜುಗಳಿಗೆ ಸುತ್ತಾಡಿ ಮಾರಾಟ ಮಾಡಿದ ಅಲ್ಪ ಆದಾಯದಲ್ಲೇ ತುತ್ತಿನ ಚೀಲ ತುಂಬಿಸಿಕೊಳ್ಳಬೇಕಾಗಿದೆ. ಇದೇ ಸಂಪಾದನೆಯಲ್ಲಿ ತಂದೆ, ತಾಯಿ ಪೋಷಣೆ ಹೊಣೆಯೂ ಇವರದ್ದೆ.

ನರಸಿಂಹರಾಜು 9ನೇ ವರ್ಷದಲ್ಲಿ ಇದ್ದಾಗ ಉಂಟಾಗಿದ್ದ ಅನಾರೋಗ್ಯದಿಂದಾಗಿ ತನ್ನ ಎರಡು ಕಣ್ಣು ಕಳೆದುಕೊಂಡರು. ಓದಬೇಕು ಎನ್ನುವ ಛಲ ಬಿಡದೆ ಬ್ರೈಲ್ ಲಿಪಿಯಲ್ಲಿ 10ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ.

’ನನಗೆ ₹1,400 ಪಿಂಚಣಿ ಬರುತ್ತದೆ. ಅನಾರೋಗ್ಯ ಕಾರಣ ತಂದೆ ಕೆಲಸ ಮಾಡಲು ಆಗಲ್ಲ. ತಾಯಿ ಕೂಲಿ ಕೆಲಸ ಮಾಡುತ್ತಾರೆ. ಇಬ್ಬರು ಸಹೋದರಿಯರಿಗೆ ಮದುವೆ ಆಗಿದೆ. ಶಾಲೆಗಳಲ್ಲಿ ಶಿಕ್ಷಕರ ಸಹಾಯದಿಂದ ಪೆನ್ನು ಮಾರಾಟ ಮಾಡುತ್ತೇನೆ. ಒಂದು ಪೆನ್ನು ಮಾರಾಟ ಮಾಡಿದರೆ ₹3 ಲಾಭ ಸಿಗುತ್ತದೆ. ಇದೇ ನನ್ನ ದುಡಿಮೆ‘ ಎಂದು ನರಸಿಂಹರಾಜು ಬದುಕಿನ ಪುಟ ತೆರೆದಿಟ್ಟರು.

‘ಕೆಲವರು ಸಹಾಯ ಮಾಡುತ್ತಾರೆ. ಇನ್ನು ಕೆಲವರು ಮಾಡಲ್ಲ. ಹಲವು ಆಸ್ಪತ್ರೆಗಳು ಸುತ್ತಾಡಿದರೂ ದೃಷ್ಟಿ ಮರಳದು ಎಂದು ವೈದ್ಯರು ಕೈಚೆಲ್ಲಿದರು. ಒಂದಷ್ಟು ಸಾಲ ಸೌಲಭ್ಯ ಪಡೆದು ಅಂಗಡಿ ಮಾಡಿಕೊಳ್ಳಲು ಹಲವು ಇಲಾಖೆಗಳ ಬಾಗಿಲು ಎಡತಾಕಿದರೂ ಪ್ರಯೋಜನವಾಗಲಿಲ್ಲ. ಹಲವು ಬಾರಿ ಸುತ್ತಾಡಿದೆ. ಪಂಚಾಯಿತಿಗೂ ಅರ್ಜಿ ಕೊಟ್ಟಿರುವೆ. ದುಮ್ಮಾನ ಕೇಳುವವರೇ ಇಲ್ಲ’ ಎಂದು ಕಣ್ಣೀರಾದರು.

ಸಂಪರ್ಕ:97315 02196

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT